ಬೀಜದ ದರ ಕಡಿಮೆಗೊಳಿಸಲು ಆಗ್ರಹ
ಭಾಲ್ಕಿ:ಮೇ.31: ಪ್ರಸಕ್ತ ಮುಂಗಾರು ಹಂಗಾಮಿನ ಬಿತ್ತನೆ ಬೀಜದ ದರ ಏರಿಕೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಕೂಡಲೇ ಬೀಜದ ದರ ಕಡಿಮೆಗೊಳಿಸಬೇಕು ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ಸಿದ್ರಾಮಪ್ಪ ಆಣದೂರೆ ಒತ್ತಾಯಿಸಿದ್ದಾರೆ.
ರಾಜ್ಯ ಸರಕಾರ ಬಡವರಿಗೆ ಫ್ರೀ ಯೋಜನೆ ಕೊಡುವ ಹೆಸರಿನಲ್ಲಿ ಬಿತ್ತನೆ ಬೀಜದ ದರ ಏರಿಕೆ ಮಾಡಿರುವುದು ಸರಿಯಲ್ಲ.
ಕಳೆದ ಮುಂಗಾರು-ಹಿಂಗಾರು ಹಂಗಾಮಿನಲ್ಲಿ ಮಳೆ ಕೊರತೆ, ತೀವ್ರ ಬರದಿಂದ ಸಂಕಷ್ಟಕ್ಕೆ ಸಿಲುಕಿದ್ದ ರೈತರು ಈ ವರ್ಷ ಭರವಸೆಯಿಂದ ಬಿತ್ತನೆ ಮಾಡಲು ಮುಂದಾಗಿದ್ದಾರೆ. ಆದರೆ, ಬಿತ್ತನೆ ಬೀಜದ ದರ ಏರಿಕೆ ಅವರಿಗೆ ಹೊರೆಯಾಗಿ ಪರಿಣಮಿಸಿದೆ.
ಸೋಯಾ ಅವರೆ, ಹೆಸರು, ಉದ್ದು, ತೊಗರಿ ಸೇರಿ ಇನ್ನಿತರ ಬೀಜಗಳ ದರ ಕಳೆದ ಬಾರಿಗಿಂತ ದುಬಾರಿಯಾಗಿವೆ.
ಬರದಿಂದ ಬೆಳೆ ಹಾನಿಯಾಗಿ, ನಷ್ಟ ಉಂಟಾಗಿದ್ದರಿಂದ ಈ ಬಾರಿ ರೈತ ಸಂಪರ್ಕ ಕೇಂದ್ರಗಳ ಮೂಲಕ ಕಡಿಮೆ ದರಕ್ಕೆ ಬಿತ್ತನೆ ಬೀಜ ದೊರೆಯುವ ನಿರೀಕ್ಷೆ ಇತ್ತು. ಆದರೆ, ದರ ಏರಿಕೆಯಾಗಿರುವುದು ಮತ್ತಷ್ಟು ಸಂಕಷ್ಟ ತಂದೊಡ್ಡಿದೆ. ಒಟ್ಟಾರೆ ಕೃಷಿ ವೆಚ್ಚವೂ ಅಧಿಕವಾಗಿರುವುದರಿಂದ ರೈತರು ಆತಂಕದಲ್ಲಿದ್ದಾರೆ. ಕೂಡಲೇ ಸರಕಾರ ಬಿತ್ತನೆ ಬೀಜದ ದರ ಕಡಿಮೆಗೊಳಿಸಿ ರೈತರಿಗೆ ನೆರವಾಗಬೇಕು ಇಲ್ಲದಿದ್ದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.