ಭೂ ಹಗರಣ ಸಿಒಡಿ ತನಖೆ ನಡೆಸಲು ಸರ್ಕಾರಕ್ಕೆ ಮನವಿ: ಸಚಿವ ಎಂ.ಬಿ. ಪಾಟೀಲ ಭರವಸೆ
ಸಂಜೆವಾಣಿ ವಾರ್ತೆ,
ವಿಜಯಪುರ,ಮೇ.31 :ಜಿಲ್ಲೆಯಲ್ಲಿ ನಡೆದಿದೆ ಎನ್ನಲಾದ ಭೂ ಹಗರಣ ಸಿಒಡಿ ತನಿಖೆ ನಡೆಸಲು ಸರ್ಕಾರಕ್ಕೆ ನಾನು ಸಹ ಮನವಿ ಮಾಡಿಕೊಳ್ಳುವೆ ಎಂದು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ. ಪಾಟೀಲ ಭರವಸೆ ನೀಡಿದರು.
ಭೂ ಹಗರಣದ ವಿರುದ್ದ ಸಮರ ಸಾರಿರುವ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಅವರು ಬೆಂಗಳೂರಿನಲ್ಲಿ ಸಚಿವ ಡಾ. ಎಂ.ಬಿ. ಪಾಟೀಲ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಈ ಭರವಸೆಯನ್ನು ಸಚಿವ ಪಾಟೀಲ ನೀಡಿದರು.
ಭೂಗರಣಗಳ ಕುರಿತು ವಿವರಿಸಿದ ಅಪ್ಪಾಸಾಹೇಬ ಪಟ್ಟಣಶೆಟ್ಟಿ,
ವಿಜಯಪುರ ನಗರದಲ್ಲಿ ನಕಲಿ ಭೂದಾಖಲೆ ಸೃಷ್ಟಿ ಮಾಡಿ ಜನರನ್ನು ದೊಡ್ಡ ಪ್ರಮಾಣದಲ್ಲಿ ವಂಚನೆ ಮಾಡುತ್ತಿರುವ ಅನೇಕ ಪ್ರಕರಣಗಳು ನಡೆಯುತ್ತಿವೆ. ಇದರಿಂದ ಬಡ ಜನರು ನಿತ್ಯ ಶೋಷಣೆಗೊಳಗಾಗುತ್ತಿದ್ದಾರೆ. ಜಮೀನು ಹಾಗೂ ನಿವೇಶನಗಳ ಖೊಟ್ಟಿ ದಾಖಲೆ ಸೃಷ್ಟಿ ಮಾಡಿ ಉಪನೋಂದಣಿ ಅಧಿಕಾರಿಗಳ ಕಚೇರಿಯಲ್ಲಿ ಖರೀದಿ ಹಾಗೂ ಮಾರಾಟ ಮಾಡುವ ಕಾನೂನು ಬಾಹಿರ ಕೃತ್ಯಗಳು ಅವ್ಯಾಹತವಾಗಿ ನಡೆದಿವೆ ಎಂದರು.
ಜನರನ್ನು ವಂಚಿಸುವ ವ್ಯವಸ್ಥಿತ ಜಾಲವೇ ಜಿಲ್ಲೆಯಲ್ಲಿ ಹುಟ್ಟಿಕೊಂಡಿದೆ. ಈ ಜಾಲಕ್ಕೆ ಈಗಾಗಲೇ ನೂರಾರು ಜನ ಹಣ-ಆಸ್ತಿ ಕಳೆದುಕೊಂಡಿದ್ದಾರೆ. ಇಂತಹ ವಂಚಕರ ಜಾಲ ವಿಜಯಪುರ ಜಿಲ್ಲೆ ಹಾಗೂ ನಗರದಲ್ಲಿ ಹಲವಾರು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದೆ. ಸಾಕಷ್ಟು ಬಡ ಜನರು ಈಗಾಗಲೇ ಮೋಸ ಹೋಗಿದ್ದಾರೆ. ಕಷ್ಟಪಟ್ಟು ದುಡಿದು, ಸಾಲ-ಸೋಲ ಮಾಡಿ ನಿವೇಶನ, ಜಮೀನು ಖರೀದಿ ಮಾಡುವ ಬಡವರು, ಈ ರೀತಿಯ ವಂಚನೆಗೆ ಒಳಗಾಗಿ ತಮ್ಮ ಆಸ್ತಿ ಕಳೆದುಕೊಂಡು ಕಷ್ಟ ಅನುಭವಿಸುತ್ತಿದ್ದಾರೆ.
ಈ ಜಾಲಕ್ಕೆ ಸಿಲುಕಿ ವಂಚನೆಗೊಳಗಾದವರು ಹಾಗೂ ಜಮೀನು ಕಳೆದುಕೊಂಡವರು ಪೆÇಲೀಸ್ ಠಾಣೆಗೆ ದೂರು ನೀಡಿದರೂ ಯಾವ ಪ್ರಯೋಜನವೂ ಆಗುತ್ತಿಲ್ಲ ಎಂದರು.
ಈಗಾಗಲೇ ಜಿಲ್ಲಾ ಪೆÇಲೀಸ್ ಅಧೀಕ್ಷಕರನ್ನು ಭೇಟಿ ಮಾಡಿ ಈ ಬಗ್ಗೆ ವಿಶೇಷ ತಂಡ ರಚನೆ ಮಾಡುವಂತೆ ಒತ್ತಾಯಿಸಿದ್ದೇನೆ. ಹಲವಾರು ಬಾರಿ ಪತ್ರಿಕಾಗೋಷ್ಠಿ ಮುಖಾಂತರವೂ ಒತ್ತಾಯಿಸಿದ್ದೇನೆ ಎಂದು ಸಮಗ್ರವಾಗಿ ವಿವರಿಸಿದರು.
ತಾವೂ ಸಹ ಈ ಹಿಂದೆ ಜಿಲ್ಲಾ ಪಂಚಾಯತ ಸಭೆಯಲ್ಲಿ ಈ ವಿಷಯ ಪ್ರಸ್ತಾಪ ಮಾಡಿದ್ದೀರಿ. ಹೀಗಾಗಿ ಸರ್ಕಾರದ ಮೇಲೆ ಒತ್ತಡ ಹೇರಿ ಈ ರೀತಿ ಪ್ರಕರಣಗಳ ತನಿಖೆ ನಡೆಸಿ, ಈ ರೀತಿ ಪ್ರಕರಣ ನಡೆಯದಂತೆ ಕಟ್ಟುನಿಟ್ಟಾದ ಕ್ರಮ ಕೈಗೊಳ್ಳಲು ಸರ್ಕಾರದ ಗಮನ ಸೆಳೆಯಬೇಕು ಎಂದು ಕೋರಿದರು.
ಇದೇ ಸಂದರ್ಭದಲ್ಲಿ ಬಿಜೆಪಿ ಮುಖಂಡ ಜಗದೀಶ ಮುಚ್ಚಂಡಿ ಉಪಸ್ಥಿತರಿದ್ದರು.