ಬಿತ್ತನೆ ಬೀಜ, ರಸ ಗೊಬ್ಬರ ದರ ಕಡಿಮೆ ಮಾಡುವಂತೆ ಅಖಂಡ ಕರ್ನಾಟಕ ರೈತ ಸಂಘ ಡಿಸಿಗೆ ಮನವಿ ಸಲ್ಲಿಕೆ
ಸಂಜೆವಾಣಿ ವಾರ್ತೆ,
ವಿಜಯಪುರ,ಮೇ.31: ಬಿತ್ತನೆ ಬೀಜಗಳ ದರ ಕಡಿಮೆ ಮಾಡುವಂತೆ ಒತ್ತಾಯಿಸಿ ಅಖಂಡ ಕರ್ನಾಟಕ ರೈತ ಸಂಘ (ರಿ) ಜಿಲ್ಲಾ ಘಟಕ ವಿಜಯಪುರ ಪದಾಧಿಕಾರಿಗಳು ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ರಾಜ್ಯದಲ್ಲಿ ಹಿಂದೆಂದೂ ಕಂಡರಿಯದಂತಹ ಭೀಕರ ಬರಗಾಲ ಆವರಿಸಿ ಬಿತ್ತನೆ ಮಾಡಿದ ಎಲ್ಲ ಬೆಳೆಗಳು ಹಾಳಾಗಿವೆ. ಇದರಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಮಧ್ಯ ಸರ್ಕಾರ ಬಿತ್ತನೆ ಬೀಜ ದರ ಹೆಚ್ಚಿಸಿ ರೈತರಿಗೆ ಗಾಯದ ಮೇಲೆ ಬರೆ ಎಳೆದಿದೆ. ರಾಜ್ಯ ಸರ್ಕಾರ ಜನ ವಿರೋಧಿ ಹಾಗೂ ರೈತ ವಿರೋಧಿ ಅನುಪಯುಕ್ತ ಯೋಜನೆಗಳನ್ನು ಜಾರಿಗೆ ತಂದು ರೈತರಿಗೆ ಸಿಗಬೇಕಾದ ಸವಲತ್ತುಗಳನ್ನು ಕೊಡುತ್ತಿಲ್ಲ. ಈಗ ಮುಂಗಾರು ಹಂಗಾಮಿನ ಬೆಳೆ ಬೆಳೆಯಲು ಬಿತ್ತನೆ ಕಾರ್ಯಕ್ಕೆ ಮುಂದಾಗುತ್ತಿದ್ದ ರೈತರಿಗೆ ಬಿತ್ತನೆ ಬೀಜದ ದರ ಹೆಚ್ಚಿಸುವ ಮೂಲಕ ರೈತರಿಗೆ ಮತ್ತಷ್ಟು ಸಾಲದ ಹೊರೆ ಹಾಕಲು ಮುಂದಾಗಿದೆ. ಕಳೆದ ವರ್ಷ ಐದು ಕೆ.ಜಿ. ತೊಗರಿ ಬೀಜಕ್ಕೆ 525 ರೂ.ಗಳವರೆಗೆ ಇದ್ದ ದರವನ್ನು 770 ಕ್ಕೆ ಏರಿಕೆ ಮಾಡಿದೆ. ಹೆಸರು 5 ಕೆ.ಜಿ.ಗೆ 501 ರಿಂದ 785 ರೂ.ಗಳಿಗೆ ಇನ್ನುಳಿದ ಬಿತ್ತನೆ ಬೀಜಗಳ ದರ ದುಪ್ಪಟ್ಟು ಹೆಚ್ಚಿಸಲಾಗಿದೆ ಮತ್ತು ಗೊಬ್ಬರದ ದರವನ್ನು ಹೆಚ್ಚಿಸಲಾಗಿದೆ. ಇದರಿಂದ ರೈತರಿಗೆ ಆರ್ಥಿಕವಾಗಿ ಹೊರೆ ಬೀಳುತ್ತಿದೆ. ಆದ್ದರಿಂದ ಸರ್ಕಾರ ಎಚ್ಚೆತ್ತುಕೊಂಡು ಹೆಚ್ಚಿಸಿದ ಬಿತ್ತನೆ ಬೀಜಗಳ ದರವನ್ನು ಮೊದಲಿನ ದರಕ್ಕೆ ವಿತರಿಸಬೇಕೆಂದು ಅಖಂಡ ಕರ್ನಾಟಕ ರೈತ ಸಂಘ ಸರ್ಕಾರಕ್ಕೆ ಒತ್ತಾಯಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ತಾಳಿಕೋಟೆ ತಾಲೂಕು ಅಧ್ಯಕ್ಷÀ ಬಾಲಪ್ಪಗೌಡ ಲಿಂಗದಳ್ಳಿ, ಗುರಲಿಂಗಪ್ಪ ಪಡಸಲಗಿ, ಚಂದ್ರಾಮ ತೆಗ್ಗಿ, ಚನಬಸಪ್ಪ ಸಿಂಧೂರ, ನಿಂಗರಾಯ ಮುತ್ಯಾ, ದಾವಲಸಾ ನದಾಫ, ಮಹೇಶ ಯಡಹಳ್ಳಿ, ಮಲ್ಲಪ್ಪ ಪಡಸಲಗಿ, ಗಿರಿಮಲ್ಲಪ್ಪ ದೊಪಡಮನಿ, ವಿಠ್ಠಲ ಬಿರಾದಾರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.