ಪರಿಶಿಷ್ಟ ಪಂಗಡದ 187 ಕೋಟಿ ರೂ.ಗಳ ಲೂಟಿ: ಸಚಿವ ನಾಗೇಂದ್ರ ರಾಜೀನಾಮೆಗೆ ಡಾ. ಜಾಧವ್ ಒತ್ತಾಯ
ಕಲಬುರಗಿ:ಮೇ.30: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಸುಮಾರು 187 ಕೋಟಿ ರೂ.ಗಳ ದಲಿತರ ಹಣವನ್ನು ಕಾಂಗ್ರೆಸ್ ಸರ್ಕಾರ ಲೂಟಿ ಮಾಡಿದೆ. ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ.ನಾಗೇಂದ್ರ ಜೂನ್ 6ರೊಳಗೆ ರಾಜೀನಾಮೆ ನೀಡಬೇಕು ಎಂದು ಸಂಸದ ಡಾ. ಉಮೇಶ್ ಜಾಧವ್ ಅವರು ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರವು ದಲಿತರ ಪರ, ಹಿಂದುಳಿದವರ ಪರ ಎಂದು ಹೇಳಿಕೊಳ್ಳುತ್ತಿದೆ. ಆದಾಗ್ಯೂ, ಈಗ ದಲಿತರ ಹಣ ನುಂಗಿದ ಕಾಂಗ್ರೆಸ್ ಎಂಬ ಬ್ಯಾನರ್ ಅಡಿ ರಾಜ್ಯಾದ್ಯಂತ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.
ಪರಿಶಿಷ್ಟ ಪಂಗಡದ 187 ಕೋಟಿ ರೂ. ಹಣವನ್ನು ಗುಳುಂ ಮಾಡಿದ್ದೇ ಕಾಂಗ್ರೆಸ್ ಸರ್ಕಾರದ ಸಾಧನೆ. ಚುನಾವಣೆಗೆ ಮುನ್ನ ದಲಿತರ ಉದ್ಧಾರ ಎಂದು ಕಾಂಗ್ರೆಸ್ ಹೇಳುತ್ತಿತ್ತು. ನಂತರ ದಲಿತರನ್ನು ಶೋಷಣೆ ಮಾಡಿದೆ. ರಾಮನ ಹೆಸರು ಕಂಡರೆ ಆಗದ ಕಾಂಗ್ರೆಸ್ ಪಕ್ಷಕ್ಕೆ ವಾಲ್ಮೀಕಿ ಹೆಸರಿನ ನಿಗಮವನ್ನೂ ಕಂಡರೆ ಆಗುವುದಿಲ್ಲ. ಹೆಣ್ಣುಮಕ್ಕಳಿಗೆ ಸುರಕ್ಷತೆ ಗ್ಯಾರಂಟಿ ಇಲ್ಲವೆಂದು ಗೊತ್ತಿತ್ತು. ಈಗ ಅಧಿಕಾರಿಗಳಿಗೂ ಗ್ಯಾರಂಟಿ ಇಲ್ಲ, ಹಣ ವರ್ಗಾಯಿಸಲು ಸಚಿವರು ಮೌಖಿಕವಾಗಿ ಸೂಚಿಸಿದ್ದಾರೆ ಎಂದು ಆತ್ಮಹತ್ಯೆ ಮಾಡಿಕೊಂಡ ಅಧಿಕಾರಿ ಚಂದ್ರಶೇಖರನ್ ಪತ್ರದಲ್ಲಿ ತಿಳಿಸಿದ್ದಾರೆ. ಸಚಿವರೆಂದರೆ ಯಾರು, ಸೂಪರ್ ಸಿಎಂ, ಸ್ಪೆಷಲ್ ಬೇಬಿ ಹೇಳಿರಬೇಕೆ ಎಂದು ಪರೋಕ್ಷವಾಗಿ ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ಕಿಡಿಕಾರಿದ ಅವರು, ಜಿ. ಪದ್ಮನಾಭ್, ಸುಜಾ ಮೊದಲಾದ ಅಧಿಕಾರಿಗಳ ಹೆಸರನ್ನೂ ಉಲ್ಲೇಖಿಸಿದ್ದಾರೆ. ಈ ಪತ್ರದಲ್ಲಿ ಹಗರಣದ ಸಂಪೂರ್ಣ ವಿವರ ದಾಖಲೆಯೊಂದಿಗೆ ತಿಳಿಸಿದ್ದಾರೆ. ಇದಕ್ಕಿಂತ ಇನ್ನೇನು ಸಾಕ್ಷಿ ಬೇಕು ಎಂದು ಪ್ರಶ್ನಿಸಿದರು.
ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ಕೆ.ಎಸ್. ಈಶ್ವರಪ್ಪ ಅವರ ಮೇಲೆ ಆರೋಪ ಬಂದಾಗ ಕಾಂಗ್ರೆಸ್ ಉಸ್ತುವಾರಿ ರಣದೀಪ್‍ಸಿಂಗ್ ಸುರ್ಜೇವಾಲಾ ಅವರು ಸರಣಿ ಪ್ರಶ್ನೆ ಕೇಳಿದ್ದರು. ಅಂದು ಬೆಳಗಾವಿಯ ಗುತ್ತಿಗೆದಾರ ಸಂತೋಷ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಾಗ ಅವರ ಕುಟುಂಬದ ಜೊತೆ ಮೋದಿ ಮಾತಾಡಿದ್ದರಾ ಎಂದು ಸುರ್ಜೆವಾಲ ಕೇಳಿದ್ದರು. ಹಾಗಾದರೆ ಇಂದು ಚಂದ್ರಶೇಖರನ್ ಮನೆಯವರ ಜೊತೆ ರಾಹುಲ್‍ಗಾಂಧಿ ಮಾತಾಡಿದ್ರಾ? ಅಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಂತೂ ಸೆಕ್ಷನ್ 302 ಅಡಿ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದ್ದರು. ಈಶ್ವರಪ್ಪ ಅವರಿಗೆ ಜೀವಾವಧಿ ಶಿಕ್ಷೆ ನೀಡಬೇಕು ಅಥವಾ ಮರಣದಂಡನೆ ನೀಡಬೇಕು ಎಂದು ಸಿದ್ಧರಾಮಯ್ಯ ಅವರು ರಾಜ್ಯ ವಿಧಾನಮಂಡಲದ ಅಧಿವೇಶನದಲ್ಲಿ ಹೇಳಿದ್ದರು. ಈಗ ಮರಣಪತ್ರದಲ್ಲಿ ಸಚಿವರ ಹೆಸರಿದ್ದರೂ ಯಾವುದೇ ಕ್ರಮ ವಹಿಸಿಲ್ಲ. ಕೂಡಲೇ ಈಗಲಾದರೂ ಸಚಿವರ ವಿರುದ್ಧ ಕೊಲೆ ಪ್ರಕರಣ ದಾಖಲಿಸಬೇಕು ಎಂದು ಅವರು ಒತ್ತಾಯಿಸಿದರು.
20 ಕೋಟಿ ರೂ.ಗಳನ್ನು ಹಣವನ್ನು ವಾಪಸ್ ನೀಡಲಾಗಿದೆ ಎಂದು ಸರ್ಕಾರ ಸ್ಪಷ್ಟನೆ ನೀಡುತ್ತಿದೆ. ಹಾಗೆಯೇ ಅಧಿಕಾರಿಯ ಪ್ರಾಣವನ್ನೂ ಮರಳಿ ತರಲಿ. ಒಬ್ಬ ಅಧಿಕಾರಿಯ ಪ್ರಾಣಕ್ಕೆ ಈ ಸರ್ಕಾರ ಬೆಲೆ ನೀಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಆತ್ಮಹvಪತ್ರದಲ್ಲಿ ಸಚಿವರ ಹೆಸರಿದೆ. ಆದರೂ ಪ್ರಕರಣದಲ್ಲಿ ಸಚಿವರ ಹೆಸರು ಏಕಿಲ್ಲ?, 187 ಕೋಟಿ ರೂ.ಗಳನ್ನು ಗುಳುಂ ಮಾಡಿದ ಅಧಿಕಾರಿಗಳನ್ನು ಏಕೆ ಬಂಧಿಸಿಲ್ಲ?, ಸಿಐಡಿ ಎಂದರೆ ಕಾಂಗ್ರೆಸ್ ಇನ್ವೆಸ್ಟಿಗೇಶನ್ ಡಿಪಾಟ್ಮೆರ್ಂಟ್. ತನಿಖೆಯನ್ನು ಸಿಐಡಿಗೆ ಏಕೆ ಕೊಟ್ಟಿದ್ದೀರಿ? ಎಂದು ಅವರು ಖಾರವಾಗಿ ಪ್ರಶ್ನಿಸಿದರು.
ಸಿಐಡಿ ತನಿಖೆಯ ಮೇಲೆ ಭರವಸೆ ಇಲ್ಲ. ಹಾಗಾಗಿ ಕೂಡಲೇ ಸಚಿವ ನಾಗೇಂದ್ರ ಅವರನ್ನು ವಜಾಗೊಳಿಸಬೇಕು ಹಾಗೂ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು. ಇಲ್ಲದೇ ಇದ್ದರೆ ಬಿಜೆಪಿ ಹೋರಾಟ ರೂಪಿಸಲಿದೆ ಎಂದು ಅವರು ಎಚ್ಚರಿಸಿದರು. ಸುದ್ದಿಗೋಷ್ಠಿಯಲ್ಲಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ್ ಮತ್ತಿಮೂಡ್, ಚಿಂಚೋಳಿ ಶಾಸಕ ಡಾ. ಅವಿನಾಶ್ ಜಾಧವ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ನಿತಿನ್ ಗುತ್ತೇದಾರ್, ಸಂತೋಷ್ ಹಾದಿಮನಿ ಮುಂತಾದವರು ಉಪಸ್ಥಿತರಿದ್ದರು.