ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಕಂಪ್ಯೂಟರ್ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ
ಕಲಬುರಗಿ:ಮೇ.30:ಬೆಂಗಳೂರಿನ ಸೋಕೇರ್ ಇಂಡ್ ಸಂಸ್ಥೆ, ವಾಡಿ ಅದಾನಿ ಸಕ್ಷಮ ಸ್ಕಿಲ್ ಡೆವಲಪ್‍ಮೆಂಟ್ ಹಾಗೂ ಕಲಬುರಗಿ ಕೇಂದ್ರ ಕಾರಾಗೃಹದ ಸಹಯೋಗದೊಂದಿಗೆ ಮೇ 30 ರಂದು ಕಲಬುರಗಿ ಕಾರಾಗೃಹದ ಬಂದಿಗಳಿಗೆ ಉಚಿತವಾಗಿ ಕಂಪ್ಯೂಟರ್ ತರಬೇತಿಗಾಗಿ ಒಟ್ಟು 120 ಜನ ಬಂದಿಗಳನ್ನು ಆಯ್ಕೆ ಮಾಡಲಾಗಿದ್ದು, ಇದರಲ್ಲಿ ಮೊದಲನೇ ಹಂತವಾಗಿ 30 ಜನ ಬಂದಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಕಂಪ್ಯೂಟರ್ ತರಬೇತಿ ಕಾರ್ಯಕ್ರಮಕ್ಕೆ ಕಲಬುರಗಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ನಾಗಶ್ರೀ ಅವರು ಗುರುವಾರ ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಚಾಲನೆ ನೀಡಿದರು.
ನಂತರ ಅವರು ಮಾತನಾಡಿ, ಕಾರಾಗೃಹದ ಬಂದಿಗಳು ಕಾರಾಗೃಹದಲ್ಲಿ ಉತ್ತಮ ನಡತೆಯನ್ನು ಹೊಂದಿ ಇಲ್ಲಿ ನೀಡುತ್ತಿರುವ ವಿವಿಧ ರೀತಿಯ ಕೌಶಲ್ಯ ತರಬೇತಿಗಳ ಲಾಭವನ್ನು ಪಡೆದು, ಬಿಡುಗಡೆಯ ನಂತರ ಮತ್ತೆ ಅಪರಾಧಗಳನ್ನು ಮಾಡದೇ ಸ್ವಾವಲಂಭಿ ಬದುಕನ್ನು ಕಟ್ಟಿಕೊಂಡು ಸಮಾಜ ಮುಖಿಯಾಗಿ ತಮ್ಮದೇ ಆದ ಕೊಡುಗೆ ನೀಡಬೇಕು ಎಂದರು.
ಈ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಕಲಬುರಗಿ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಡಾ|| ಪಿ.ರಂಗನಾಥ್ ಅವರು, ಬಂದಿಗಳು ಉತ್ತಮ ನಡೆಯನ್ನು ಹೊಂದಿ ಕಾರಾಗೃಹದಲ್ಲಿ ನೀಡುತ್ತಿರುವ ವಿವಿಧ ರೀತಿಯ ತರಬೇತಿಗಳಲ್ಲಿ ಭಾಗವಹಿಸಿ ಇದರ ಲಾಭ ಪಡೆದುಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶ್ರೀನಿವಾಸ ನವಲೆ, ಕಲಬುರಗಿ ಶಾಖೆ ಸೋಕೇರ್ ಇಂಡ್ ಅಧ್ಯಕ್ಷ ಪ್ರಕಾಶ ಕುಲಕರ್ಣಿ, ವಾಡಿ ಅದಾನಿ ಸಕ್ಷಮ ಸ್ಕಿಲ್ ಡೆವಲಪ್‍ಮೆಂಟ್ ಸೆಕ್ಷನ್ ಮ್ಯಾನೇಜರ್‍ಅಶೋಕ ಹೆಚ್., ಸಹಾಯಕ ಅಧೀಕ್ಷಕ ಹುಸೇನಿ ಪೀರ್, ಕಂಪ್ಯೂಟರ್ ತರಬೇತಿ ಶಿಕ್ಷಕ ಹರೀಶ ಹಾಗೂ ಕಾರಾಗೃಹದ ಅಧಿಕಾರಿ/ಸಿಬ್ಬಂದಿ ವರ್ಗದವರು ಭಾವಹಿಸಿದ್ದರು. ಕಾರ್ಯಕ್ರಮದಲ್ಲಿ ಕಂಪ್ಯೂಟರ್ ತರಬೇತಿ ಪಡೆಯುತ್ತಿರುವ ಬಂದಿಗಳಿಗೆ ಕಲಿಕಾ ಕಿಟ್‍ಗಳನ್ನು ವಿತರಿಸಲಾಯಿತು.
ಈ ಸಂಸ್ಥೆಯ ಸಹಾಯಕ ಅಧೀಕ್ಷಕರಾದ ಬಿ. ಸುರೇಶ್ ಸ್ವಾಗತಿಸಿದರು. ಅಧೀಕ್ಷಕ ಬಿ.ಎಂ. ಕೊಟ್ರೇಶ್ ವಂದಿಸಿದರು. ಶಿಕ್ಷಕರಾದ ಶ್ರೀ ನಾಗರಾಜ ಮುಲಗೆ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಮಹಿಳಾ ವೀಕ್ಷಕಿ ಕುಮಾರಿ ರುದ್ರವ್ವ ಒಂಭತ್ತು ರೊಟ್ಟಿ ಇವರು ಪ್ರಾರ್ಥನಾ ಗೀತೆ ಹಾಡಿದರು.