ಡ್ರಗ್ಸ್ ತಡೆಗೆ ೧೦೦ ಸಿಎಂಆರ್ ಐಟಿ ವಿದ್ಯಾರ್ಥಿಗಳ ಮಾರ್ಷಲ್ ಪಡೆ ರಚನೆ
ಬೆಂಗಳೂರು.ಸೆ.೨೪- ಬೆಂಗಳೂರು ಮಹಾನಗರವನ್ನು ಮಾದಕ ವ್ಯಸನ ಮುಕ್ತ ನಗರವನ್ನಾಗಿಸಲು ಪೊಲೀಸರು ಹೊಸ ಯೋಜನೆ ರೂಪಿಸಿ, ಡ್ರಗ್ಸ್ ತಡೆಗೆ ವಿದ್ಯಾರ್ಥಿ ಮಾರ್ಷೆಲ್ ಪಡೆ ರಚಿಸಿ ತರಬೇತಿ ನೀಡಲು ಮುಂದಾಗಿದ್ದಾರೆ. ಬೆಂಗಳೂರು ಕಾಲೇಜುಗಳಲ್ಲಿ ಮಾದಕವಸ್ತುಗಳ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ವ್ಯಸನಿಗಳ ಮೇಲೆ ನಿಗಾವಹಿಸುವ ನಿಟ್ಟಿನಲ್ಲಿ ವೈಟ್ ಫೀಲ್ಡ್ ವಿಭಾಗದ ಸಿಇಎನ್ ಪೊಲೀಸರು ವಿದ್ಯಾರ್ಥಿಗಳನ್ನೇ ಬಳಸಿಕೊಂಡು “ಪೊಲೀಸ್ ಮಾರ್ಷಲ್ ತಂಡ ರಚಿಸಿದ್ದಾರೆ.
ಆರೋಹಣ ಫೌಂಡೇಶನ್, ಬೆಂಗಳೂರು ಸಿಟಿ ಪೊಲೀಸ್, ಸಿಎಂಆರ್ ತಾಂತ್ರಿಕ ಮಹಾವಿದ್ಯಾಲಯ ಸಹಯೋಗದಲ್ಲಿ ಸೆ.೨೩ ರಂದು ಸಿಎಂಆರ್ ತಾಂತ್ರಿಕ ಮಹಾವಿದ್ಯಾಲಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೊಲೀಸ್ ಮಾರ್ಷಲ್ಸ್ ಪಡೆಗೆ ವೈಟ್ ಫೀಲ್ಡ್ ವಿಭಾಗದ ಸಿಇಎನ್ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀಮತಿ ರೋಹಿಣಿ ಸಿ.ಕೆ ಹಾಗೂ ಹೆಚ್‌ಎಎಲ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಅಜರುದ್ದೀನ್, ಸಿಎಂಆರ್ ಐಟಿ ಕಾಲೇಜಿನ ಉಪ ಪ್ರಾಂಶುಪಾಲರಾದ ಡಾ.ಬಿ.ನರಸಿಂಹ ಮೂರ್ತಿ ಅವರು ಚಾಲನೆ ನೀಡಿದರು.
ಆರೋಹಣ ಫೌಂಡೇಶನ್ ಮುಖ್ಯಸ್ಥರಾದ ಮನಿಶಾ ಭಟ್, ನಿರ್ದೇಶಕರಾದ ವಿನಯ್ ಅವರು ಪೊಲೀಸ್ ಮಾರ್ಷಲ್ ಪಡೆಗೆ ಆಯ್ಕೆಯಾದ ೧೦೦ ವಿದ್ಯಾರ್ಥಿಗಳಿಗೆ ಕ್ಯಾಪ್ ಮತ್ತು ಸಮವಸ್ತ್ರ ವಿತರಿಸಿದರು.ಮಾದಕವಸ್ತು, ವ್ಯಸನ ಒಂದು ಸಾಮಾಜಿಕ ಪಿಡುಗಾಗಿದೆ, ಅದರಲ್ಲೂ ಹೆಚ್ಚು ಕಾಲೇಜು ವಿದ್ಯಾರ್ಥಿಗಳೇ ಮಾದಕ ವ್ಯಸನಿಗಳಾಗುತ್ತಿದ್ದಾರೆ. ಹೀಗಾಗಿ ಶಾಲಾ- ಕಾಲೇಜು ಮಟ್ಟದಿಂದಲೇ ಮಾದಕ ವಸ್ತುಗಳ ಸೇವನೆ, ಅದರ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವುದು ಅತ್ಯಗತ್ಯವಾಗಿದೆ. ವಿದ್ಯಾರ್ಥಿಗಳನ್ನೇ ಬಳಸಿಕೊಂಡು ಪೊಲೀಸ್ ಮಾರ್ಷಲ್ಸ್ ತಂಡವನ್ನು ರಚಿಸಲಾಗಿದೆ ಎಂದು ಡಿಸಿಪಿ ರೋಹಿಣಿ ಹೇಳಿದರು.
ಇನ್ಸ್‌ಪೆಕ್ಟರ್ ಅಜರುದ್ದೀನ್ ಮಾತನಾಡಿ ಕಾಲೇಜು ವಿದ್ಯಾರ್ಥಿಗಳು ಹೆಚ್ಚು ಮಾದಕ ವಸ್ತು ಬಳಕೆ ಮಾಡುತ್ತಾರೆಂಬ ದೂರುಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿ ಪೊಲೀಸ್ ಮಾರ್ಷಲ್ ಪಡೆಗಳನ್ನು ಕಾಲೇಜುಗಳಲ್ಲಿ ರಚಿಸುವ ಮೂಲಕ ತರಬೇತಿ ನೀಡಿ ಮಾದಕ ವ್ಯಸನ ಅಪರಾಧಗಳ ತಡೆ ಜಾಗೃತಿ ಕಾರ್ಯಾಚರಣೆಗೆ ಪೊಲೀಸ್ ಮಾರ್ಷಲ್ ತಂಡವನ್ನು ನಿಯೋಜಿಸುತ್ತೇವೆ ಎಂದರು. ಸುರಕ್ಷಿತ ಸಮಾಜಕ್ಕಾಗಿ ಯುವಕರನ್ನು ಸಶಕ್ತಗೊಳಿಸುವ ನಿಟ್ಟಿನಲ್ಲಿ ಪೊಲೀಸ್ ಮಾರ್ಷಲ್ ಪಡೆ ರಚನೆ ಮಹತ್ವದ ಹೆಜ್ಜೆಯಾಗಿದೆ ಎಂದು ಉಪ ಪ್ರಾಂಶುಪಾಲರಾದ ಡಾ.ಬಿ.ನರಸಿಂಹಮೂರ್ತಿ ತಿಳಿಸಿದರು.
ಅಭಯಾಸ್ತ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಇ.ಎನ್.ಟಿ ವಿಭಾಗದ ವೈದ್ಯರಾದ ಡಾ|| ರಕ್ಷಿತಾ ರಮೇಶ್ ಕಾಮತ್, ಮಾದಕ ವಸ್ತುಗಳ ಸೇವನೆಯಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿಕೊಟ್ಟರು. ಕಾರ್ಯಕ್ರಮದಲ್ಲಿ ಆರೋಹಣ ಪೌಂಡೇಶನ್ ಸಂಸ್ಥಾಪಕರಾದ ಮನಿಶಾ ಭಟ್, ನಿರ್ದೇಶಕರಾದ ವಿನಯ್, ಸಿಎಂಆರ್ ಐಟಿ ಆಯಂಟಿ ಡ್ರಗ್ ಸೆಲ್‌ನ ಮುಖ್ಯಸ್ಥರಾದ ಡಾ.ಫಜ್ಲೂರ್ ರೆಹಮಾನ್ ಉಪಸ್ಥಿತರಿದ್ದರು.