ಕನ್ನಡಿಗರಿಗೆ ಅವಮಾನ: ಹುದ್ದೆಯಿಂದ ಸುಗಂಧ ವಜಾ
ಬೆಂಗಳೂರು,ಸೆ.೨೪- ಕರ್ನಾಟಕದ ರಾಜಧಾನಿ ಬೆಂಗಳೂರಿನಿಂದ ಉತ್ತರ ಭಾರತೀಯರು ಹೋದರೆ ಬೆಂಗಳೂರು ಖಾಲಿಯಾಗುತ್ತದೆ ಎಂದು ಇನ್‌ಸ್ಟಾ ರೀಲ್ಸ್ ಮೂಲಕ ಬಡಾಯಿ ಕೊಚ್ಚಿಕೊಂಡಿದ್ದ ನಾರ್ತ್ ಇಂಡಿಯನ್ ರೀಲ್ಸ್ ಕ್ವೀನ್ ಸುಗಂಧಾ ಶರ್ಮಾ ಅವರಿಗೆ ಈಗ ಕನ್ನಡಿಗರ ಶಕ್ತಿ ಅರ್ಥವಾಗಿದೆ. ಆಕೆಯ ವರ್ತನೆಯನ್ನು ಗಮನಿಸಿದ ಕಂಪನಿಯು ಅವಳನ್ನು ಕೆಲಸದಿಂದ ತೆಗೆದುಹಾಕಿದೆ.
ಕೆಲ ದಿನಗಳ ಹಿಂದೆ ರೀಲ್ ಮಾಡಿದ್ದ ಶರ್ಮಾ, ಉತ್ತರ ಭಾರತೀಯರು ಬೆಂಗಳೂರು ಬಿಟ್ಟರೆ ಬೆಂಗಳೂರು ಖಾಲಿಯಾಗುತ್ತದೆ ಎಂದು ಕನ್ನಡಿಗರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ಅಲ್ಲದೆ, ಬೆಂಗಳೂರು ತೊರೆಯುವಂತೆ ಶರ್ಮಾಗೆ ಕನ್ನಡಿಗರು ಬಹಿರಂಗ ಸವಾಲು ಹಾಕಿದ್ದರು. ಆದರೆ ಸವಾಲಿನ ಪರಿಣಾಮವಾಗಿ, ಅವಳೇ ತನ್ನ ಕೆಲಸವನ್ನು ಕಳೆದುಕೊಂಡಿದ್ದಾಳೆ. ಶರ್ಮಾ ರೀಲ್ಸ್‌ನಲ್ಲಿ ನಾವೆಲ್ಲರೂ ಬೆಂಗಳೂರು ಬಿಟ್ಟರೆ ನಿಮ್ಮ ನಗರ ಖಾಲಿಯಾಗುತ್ತದೆ. ನಿಮ್ಮ ಪಿಜಿಗಳು ಖಾಲಿಯಾಗಿರುತ್ತವೆ. ನೀವು ಹಣವನ್ನು ಗಳಿಸುವುದಿಲ್ಲ. ಕೋರಮಂಗಲದ ಎಲ್ಲಾ ಕ್ಲಬ್‌ಗಳು ಖಾಲಿಯಾಗುತ್ತವೆ. ಸುಂದರ ಹುಡುಗಿಯರು ಪಂಜಾಬಿ ಸಂಗೀತಕ್ಕೆ ನೃತ್ಯ ಮಾಡುವುದನ್ನು ನೀವು ನೋಡುವುದಿಲ್ಲ. ಯೋಚಿಸಿ ಮಾತನಾಡಿ. ಉತ್ತರ ಭಾರತೀಯರು ತೊರೆಯಬೇಕು ಎಂಬ ನಿಮ್ಮ ಆಸೆ ಈಡೇರಿದರೆ ಬೆಂಗಳೂರೇ ಕಣ್ಮರೆಯಾಗುತ್ತದೆ ಎಂದು ರೀಲುಗಳಲ್ಲಿ ಹೇಳಿದ್ದರು.
ಕೆಲವೇ ಗಂಟೆಗಳಲ್ಲಿ, ವೀಡಿಯೊ ವೈರಲ್ ಆಗಿದೆ. ಸೆಲೆಬ್ರಿಟಿಗಳು ಸೇರಿದಂತೆ ಅನೇಕರು ಸುಗಂಧಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಭಾಷೆಯ ನೆಪದಲ್ಲಿ ಜನರ ನಡುವೆ ಬಿರುಕು ಮೂಡಿಸಲು ಯತ್ನಿಸುತ್ತಿರುವ ಆಕೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ.