ಮಹಿಳಾ ಪೊಲೀಸ್ ಕಾನ್ಸಸ್ಟೇಬಲ್ ಕೊಲೆಗೆ ಯತ್ನ: ಆರೋಪಿ ಬಂಧನ
ಕಲಬುರಗಿ,ಮೇ.29-ಮಹಿಳಾ ಕಾನ್ಸಸ್ಟೇಬಲ್ ಒಬ್ಬರ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಅಶೋಕನಗರ ಪೊಲೀಸರು ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ.
ಬ್ರಹ್ಮಪುರ ವಿಜಯನಗರದ ಮಹೇಶ್ ತಂದೆ ಆನಂದರಾವ ಸಂಗಾವಿ (37) ಎಂಬಾತನನ್ನು ಬಂಧಿಸಲಾಗಿದೆ.
ಸದ್ಯ ಮಹಿಳಾ ಕಾನ್ಸಸ್ಟೇಬಲ್ ಸೆನ್ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು 2016ರಲ್ಲಿ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಪರಿಚಯವಾದ ಮಹೇಶ್ ಸಂಗಾವಿ ಜೊತೆ ಹಣಕಾಸಿನ ವ್ಯವಹಾರ ನಡೆಸಿದ್ದರು. ಆತನಿಂದ ಪಡೆದಿದ್ದ ಹಣ ಮರಳಿ ನೀಡಿದ್ದರೂ ಸಹ ಇನ್ನೂ ಹಣ ನೀಡುವಂತೆ ಆತ ಪೀಡಿಸುತ್ತಲಿದ್ದ. ಅಲ್ಲದೆ ಮಹಿಳಾ ಕಾನ್ಸಸ್ಟೇಬಲ್ ಅವರ ವೈಯಕ್ತಿಕ ಕಾಲ್ ರೆಕಾರ್ಡ್ ಮಾಡಿಕೊಂಡು ಬೆದರಿಕೆ ಹಾಕುತ್ತಿದ್ದ. ಈ ಸಂಬಂಧ ಅವರು ಆತನ ವಿರುದ್ಧ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಈ ಕಾರಣಕ್ಕೆ ಮಹೇಶ್ ದ್ವೇಷ ಸಾಧಿಸಿ ಮೇ.29 ರಂದು ಮಹಿಳಾ ಕಾನ್ಸ್‍ಸ್ಟೇಬಲ್ ಅವರ ಮನೆಯೊಳಗೆ ಅಕ್ರಮವಾಗಿ ಪ್ರವೇಶ ಮಾಡಿ ಮಾರಕಾಸ್ತ್ರದಿಂದ ಹೊಡೆದು ಅವರ ಕೊಲೆ ಮಾಡಲು ಯತ್ನಿಸಿದ್ದಾನೆ. ಈ ಸಂಬಂಧ ಅಶೋಕನಗರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.