ಸಿದ್ದಸಿರಿ ಸಹಕಾರಿ ಬ್ಯಾಂಕ್‍ನಲ್ಲಿ ಕೇವಲ 12 ಗಂಟೆಯಲ್ಲಿ ಸಾಲ ಮಂಜೂರು:ಖಂಡಾಗಳೆ
ವಿಜಯಪುರ,ಮೇ.30:ಸಾಲದ ನೆರವು ಕೋರಿ ಬರುವ ಗ್ರಾಹಕರಿಗೆ ಕೇವಲ 12 ಗಂಟೆಗಳಲ್ಲಿಯೇ ಸಿದ್ದಿಸಿರಿ ಬ್ಯಾಂಕ್ ಸಾಲ ಮಂಜೂರು ಮಾಡಲಿದೆ ಎಂದು ಸಿದ್ದಿಸಿರಿ ಬ್ಯಾಂಕ್‍ನ ವ್ಯವಸ್ಥಾಪಕ ನಿರ್ದೇಶಕ ಜೋತಿಬಾ ಖಂಡಾಗಳೆ ಅವರು ಹೇಳಿದರು.
ಸಿದ್ಧಸಿರಿ 19ನೇ ವಾರ್ಷಿಕೋತ್ಸವದ ಅಂಗವಾಗಿ ನಗರದ ಸಿದ್ಧಸಿರಿ ಮಹಿಳಾ ಶಾಖೆ ಸಭಾಂಗಣದಲ್ಲಿ ಸಿಬ್ಬಂದಿ ತರಬೇತಿ ಶಿಬಿರವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಸಿದ್ಧಸಿರಿ ಸೌಹಾರ್ದ ಸಹಕಾರಿಯು ಅತೀ ವೇಗವಾಗಿ ಬೆಳೆಯುತ್ತಿದ್ದು ಗ್ರಾಹಕರ ಪ್ರೀತಿಗೆ ಪಾತ್ರವಾಗಿದೆ. ಗ್ರಾಹಕರ ಅನುಕೂಲಕ್ಕಾಗಿ ಸಿದ್ಧಸಿರಿ “ಎಕ್ಸ್‍ಪ್ರೆಸ್ ಸಾಲಯೋಜನೆ” ಪ್ರಾರಂಭಿಸಿದ್ದು ಸಾಲ ಬೇಡಿ ಬಂದ ಗ್ರಾಹಕರಿಗೆ ಕೇವಲ 12 ಗಂಟೆಯಲ್ಲಿ ಸಾಲ ಮಂಜೂರು ಮಾಡಲಾಗುವದು ಎಂದರು.
ಸಿದ್ದಿಸಿರಿ ಸೌಹಾರ್ದ ಬ್ಯಾಂಕ್‍ನ ಅಧ್ಯಕ್ಷರು ಹಾಗೂ ಶಾಸಕÀ ಬಸನಗೌಡ ಪಾಟೀಲ ಯತ್ನಾಳ ಅವರ ನಿರ್ಣಯದಂತೆ ವಿಜಯಪುರ ನಗರದಲ್ಲಿ ಬಡ ಬೀದಿ ಬದಿ ವ್ಯಾಪಾರಿಗಳಿಗಾಗಿ ಶೂನ್ಯ ಬಡ್ಡಿದರಲ್ಲಿ “ಕೇಸರಿ ಸ್ವಾವಲಂಬಿ ಯೋಜನೆಯಡಿಯಲ್ಲಿ” ಸಾಲ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.
ಜಂಟಿ ವ್ಯವಸ್ಥಾಪಕ ನಿರ್ದೇಶಕ ರಾಘವ ಅಣ್ಣಿಗೇರಿ ಮಾತನಾಡಿ, ಕೇವಲ 18 ವರ್ಷಗಳಲ್ಲಿ ಸಿದ್ಧಸಿರಿ ಸೌಹಾರ್ದವು ರೂ.3413 ಕೋಟಿ ಠೇವಣಿ ಸಂಗ್ರಹಿಸಿ ಶೇರುದಾರರಿಗೆ ಶೇ.25ರಷ್ಟು ಡಿವಿಡೆಂಡ್ ನೀಡಲಾಗಿದೆ. “ಧನೇನ ದೀನಂ ಸಬಲೀ ಕುರುತ್ವಂ” ಎಂಬ ಧ್ಯೇಯೋದ್ದೇಶದೊಂದಿಗೆ ವಿಜಯಪುರ ನಗರ ಶಾಸಕÀ ಬಸನಗೌಡ ಪಾಟೀಲ ಯತ್ನಾಳರ ನೇತೃತ್ವದಲ್ಲಿ ದಕ್ಷ ಆಡಳಿತ ಮಂಡಳಿಯನ್ನು ಹೊಂದಿ 29.05.2006 ರಂದು ಪ್ರಾರಂಭಗೊಂಡ ಸಿದ್ಧಸಿರಿ ಸೌಹಾರ್ದ ಸಹಕಾರಿಯು ಕರ್ನಾಟಕ ರಾಜ್ಯಾದ್ಯಂತ 159 ಶಾಖೆಗಳನ್ನು ಹೊಂದಿ, ರಾಜ್ಯಾದ್ಯಂತ 1077 ಸಿಬ್ಬಂದಿಗಳು ಹಾಗೂ 594 ಪಿಗ್ಮಿ ಸಂಗ್ರಹಕಾರರಿಗೆ ಉದ್ಯೋಗ ಅವಕಾಶ ಕಲ್ಪಿಸಿದ್ದು ಒಂದು ಇತಿಹಾಸ ಎಂದು ಹೇಳಿದರು.
ವಿಜಯಪುರ ನಗರದ ಸಿದ್ಧೇಶ್ವರ ದೇವಾಲಯ ಆವರಣದಲ್ಲಿರುವ ಮುಖ್ಯ ಕಚೇರಿಯಲ್ಲಿ ದಿನದ 24 ಗಂಟೆ 365 ದಿನಗಳು ನಿರಂತರ ಸೇವೆ ನೀಡುತ್ತಿರುವ ದೇಶದ ಏಕೈಕ ಸೌಹಾರ್ದ ಸಹಕಾರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಎಲ್ಲ ಶಾಖೆಗಳು ಕೋರ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಹೊಂದಿದ್ದು, ವಯೋವೃದ್ಧರು, ದಿವ್ಯಾಂಗರ ಮನೆ ಬಾಗಿಲಿಗೆ ಸೇವೆ ಒದಗಿಸುವುದರ ಮೂಲಕ ಗ್ರಾಹಕ ಸ್ನೇಹಿಯಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದರು.
19ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಈ ಶುಭ ಸಂದರ್ಭದಲ್ಲಿ ಸಿದ್ಧಸಿರಿ ಸೌಹಾರ್ದ ಸಹಕಾರಿಯ ಮೇಲೆ ಅಪಾರವಾದ ವಿಶ್ವಾಸವಿಟ್ಟು ವ್ಯವಹರಿಸುತ್ತಿರುವ ಕರ್ನಾಟಕ ರಾಜ್ಯದ ಸಮಸ್ತ ಗ್ರಾಹಕರಿಗೆ ಹಾಗೂ ಶೇರುದಾರರಿಗೆ ಇನ್ನು ಅನೇಕ ಯೋಜನೆಗಳ ಮೂಲಕ ಉತ್ತಮ ಸೇವೆ ನೀಡಲು ಕಂಕಣಬದ್ಧರಾಗಬೇಕಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಹಾಪ್ರಭಂದಕÀ ಅಭಿಜಿತ ಕೃಷ್ಣಮೂರ್ತಿ, ನೀರಜ ಕಾಕಟಿ, ರಾಜು ಜೋಶಿ, ರಾಜಶೇಖರ ಪಾಟೀಲ, ಎ.ಜಿ.ಎಂ ಸಮೀರ ಕಂಬಾಗಿ, ಶಿವಕುಮಾರ ಕಬ್ಬಿನ, ವಲಯ ಅಧಿಕಾರಿಗಳಾದ ವಾಗೇಶ ಮಠ, ಸವಿತಾ ಗುಣಾರಿ ರಾಜು ಬಳಸಂಕರ, ರಾಜೇಸಾಬ ಹೈದರಖಾನ, ಗುರುಶಾಂತ ಮುತ್ತಗಿ, ಸಂದೀಪ ಗುಡೂರ, ಸಿದ್ದಲಿಂಗ ಬಬಲಾದಿಮಠ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.