ಹೊರನಾಡು ಕನ್ನಡಿಗರನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯವಾಗಲಿ
ಕಲಬುರಗಿ:ಮೇ.30: ಕನ್ನಡಿಗರು ಅಪ್ರತಿಮ ಸಾಧಕರು. ಬೇರೆ-ಬೇರೆ ರಾಜ್ಯಗಳು, ದೇಶಗಳಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿ, ಕನ್ನಡ ನಾಡಿನ ಕೀರ್ತಿಯನ್ನು ಹೆಚ್ಚಿಸುತ್ತಿದ್ದಾರೆ. ಅಂತಹ ಸಾಧಕರನ್ನು ಗುರುತಿಸಿ, ಪ್ರೋತ್ಸಾಹ ನೀಡಿದರೆ, ಅವರು ಮತ್ತಷ್ಟು ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಉಪನ್ಯಾಸಕ, ಸಮಾಜ ಸೇವಕ ಎಚ್.ಬಿ.ಪಾಟೀಲ ಹೇಳಿದರು.
ಚಿಂಚೋಳಿ ತಾಲೂಕಿನ ಹಸರಗುಂಡಗಿಯ ಕುವರಿ ಪಲ್ಲವಿ ಎಸ್.ಗ್ಯಾನಪ್ಪನೂರ್ ಮಹಾರಾಷ್ಟ್ರ ರಾಜ್ಯದ ಎಸ್.ಎಸ್.ಸಿ(ಹತ್ತನೇ) ತರಗತಿಯ ಪರೀಕ್ಷೆಯಲ್ಲಿ ಶೇ.85ರಷ್ಟು ಅಂಕಗಳೊಂದಿಗೆ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಉತ್ತೀರ್ಣರಾಗಿ ಕನ್ನಡದ ಕೀರ್ತಿಯನ್ನು ಹೆಚ್ಚಿಸಿರುವ ಪ್ರಯುಕ್ತ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಗುರುವಾರ ಸತ್ಕರಿಸಿ, ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಹಸರಗುಂಡಗಿಯ ಕಾವೇರಿ ಶೇಖರ ಗ್ಯಾನಪ್ಪನೂರ್ ದಂಪತಿಯು ಕಳೆದ 21 ವರ್ಷಗಳಿಂದ ಮುಂಬೈ ನಗರದಲ್ಲಿ ವಾಸವಾಗಿದ್ದರು ಕೂಡಾ ಕನ್ನಡದ ಪ್ರೇಮ ಮರೆತಿಲ್ಲ. ತಮ್ಮ ಮಕ್ಕಳನ್ನು ಮಹಾರಾಷ್ಟ್ರ ರಾಜ್ಯದಲ್ಲಿಯೂ ಕೂಡಾ ಕನ್ನಡ ಮಾಧ್ಯಮ ಶಾಲೆಯಲ್ಲಿ ಅಧ್ಯಯನ ಮಾಡಿಸಿದ್ದಾರೆ. ತಮ್ಮ ಬಡಾವಣೆ ಜೊತೆಗೆ ಸುತ್ತ-ಮುತತ್ಲಿನ ಬಡಾವಣೆಗಳಲ್ಲಿ ಕನ್ನಡ ಭಾಷೆ, ಹಿರಿಮೆಯ ಬಗ್ಗೆ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯವಾಗಿದೆ. ಮುಂಬೈನ್ ಮಾಜಿವಾಡ ಥಾಣೆಯ ಬಡಾವಣೆಯ ಸುವರ್ಣ ಮಹೋತ್ಸವ ಆಚರಿತ ಅನುದಾನಿತ ‘ಶ್ರೀ ಆದಿಶಕ್ತಿ ಕನ್ನಡ ಪ್ರೌಢಶಾಲೆ’ಯು ಪ್ರತಿಶತ ಫಲಿತಾಂಶ ಪಡೆದಿದ್ದು, ಪಲ್ಲವಿ ಪ್ರಥಮ ಸ್ಥಾನ ಪಡೆದು, ಶಾಲೆ, ಚಿಂಚೋಳಿ ತಾಲೂಕು, ಕಲಬುರಗಿ ಜಿಲ್ಲೆ, ಕನ್ನಡ ನಾಡಿನ ಕೀರ್ತಿಯನ್ನು ಹೆಚ್ಚಿಸಿದ್ದಾಳೆ ಎಂದರು.
ಸತ್ಕಾರ ಸ್ವೀಕರಿಸಿ ಮಾತನಾಡಿದ ಪಲ್ಲವಿ ಎಸ್.ಗ್ಯಾನಪ್ಪನೂರ, ನಾನು ಮುಂದೆ ನನ್ನ ಕಾಲೇಜು ವ್ಯಾಸಂಗದ ಜೊತೆಗೆ ವಿಶ್ವಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನೀಡಿದ, ಇಡೀ ದೇಶದಲ್ಲಿಯೇ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡ ನಾಡು-ನುಡಿ, ಸಾಹಿತ್ಯದ ಬಗ್ಗೆ ಯುವಕರಲ್ಲಿ ಕನ್ನಡದ ಪ್ರೇಮವನ್ನು ಬಿತ್ತುವ ಕಾರ್ಯವನ್ನು ಮಾಡುತ್ತೇನೆ. ಕನ್ನಡ ಭಾಷೆಗಿರುವ ಶಕ್ತಿ ಅದ್ಭುತವಾದದ್ದು ಎಂದು ನುಡಿದರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕರಾದ ಅಸ್ಲಾಂ ಶೇಖ್, ಕರೀಮ ದೊಡ್ಡಮನಿ, ಪ್ರಮುಖರಾದ ಜಯಶ್ರೀ ಎಚ್.ಪಾಟೀಲ, ಪೂಜಾ ಎಸ್.ಗ್ಯಾನಪ್ಪನೂರ್, ಸಾಯಿನಾಥ ಎಸ್.ಗ್ಯಾನಪ್ಪನೂರ್, ಬಸವಶ್ರೀ ಎಚ್.ಪಾಟೀಲ, ಬಸವಭುವನ ಎಚ್.ಪಾಟೀಲ, ವಿಜಯಲಕ್ಷ್ಮೀ ಜಿ.ಮೈಲ್ವಾರ, ವೀರಣ್ಣ ಲೊಡ್ಡೇನ್, ವಿಜಯಲಕ್ಷ್ಮೀ ವಿ.ಲೊಡ್ಡೇನ್, ಬೃಂದಾ ಗಿ.ಮೈಲ್ವಾರ ಸೇರಿದಂತೆ ಇನ್ನಿತರರು ಹಾಜರಿದ್ದರು.