ಸಚಿವ ನಾಗೇಂದ್ರ ರಾಜೀನಾಮೆಗೆ ಜೂ 6 ಗಡುವು ನೀಡಿದ ಬಿಜೆಪಿ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮೇ.30:  ಸಚಿವ ಬಿ.ನಾಗೇಂದ್ರ ಅವರು ಜೂನ್ 6ನೇ ತಾರೀಖಿನೊಳಗೆ ರಾಜೀನಾಮೆ  ನೀಡದೇ ಹೋದ್ರೇ, ರಾಜ್ಯಾದ್ಯಂತ 7 ತಾರೀಖಿನಂದು ಹೋರಾಟ ಮಾಡುವುದಾಗಿ ಬಿಜೆಪಿ ಹೇಳಿದೆ.
ಇಂದು ನಗರದ ಬಿಜೆಪಿಯ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಪಕ್ಷದ ಮುಖಂಡ ರವಿಕುಮಾರ್, ವಾಲ್ಮೀಕಿ ನಿಗಮದಲ್ಲಿ ನಡೆದ ಅಕ್ರಮ ಮತ್ತು ಅಧಿಕಾರಿ ಸಾವು ಪ್ರಕರಣಕ್ಕೆ ಸಂಬಂಧಿಸಿ ಸಚಿವ ನಾಗೇಂದ್ರ ತನಿಖೆಯಾಗುವವರೆಗೆ  ರಾಜೀನಾಮೆ ನೀಡಲೇಬೇಕು. ಇಲ್ಲದಿದ್ದರೆ. ವಿಧಾನಸೌದದ ಗಾಂಧಿ ಪ್ರತಿಮೆ ಮುಂದೆ ಶಾಸಕ ಸಂಸದರಿಂದ ಪ್ರತಿಭಟನೆ ನಡೆಸಲಿದೆ. ರಾಜ್ಯದ 224 ಕ್ಷೇತ್ರದಲ್ಲಿ ನಿರಂತರ ವಾಗಿ ಹೋರಾಟ ಮಾಡ್ತೇವೆಂದರು.
ತನಿಖೆ ನಡೆಯೋ ವೇಳೆ ಸಚಿವರು ತನಿಖಾಧಿಕಾರಿ ಮೇಲೆ ಪ್ರಭಾವ ಬೀರಬಹುದು. ಹೀಗಾಗಿ ನಾಗೇಂದ್ರ ರಾಜೀನಾಮೆ ನೀಡಬೇಕು.  ಬ್ಯಾಂಕಿನ ಮತ್ತು ಕಾನೂನಿನ ನಿಯಮ ಉಲ್ಲಂಘನೆ ಮಾಡಿ ತೆಲಂಗಾಣದ ಐಟಿ ಕಂಪನಿಗಳಿಗೆ ಹಣ ವರ್ಗಾವಣೆ ಯಾಗಿದೆಂದು ಆರೋಪಿಸಿದರು.
ಇದು ಸಾಮಾನ್ಯ ಕ್ರಿಮಿನಲ್ ಕೇಸ್ ಅಲ್ಲ. ಸರ್ಕಾರಿ ಅಧಿಕಾರಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಭ್ರಷ್ಟಾಚಾರ ಹೊರಗೆ ತರಲಾಗದೇ ಬೇಸತ್ತು ಚಂದ್ರಶೇಖರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸರ್ಕಾರದ ಅನೇಕ ಅಧಿಕಾರಿಗಳು ಇದರಲ್ಲಿ ಶಾಮಿಲಾಗಿದ್ದಾರೆ. ಮಂತ್ರಿ ಮತ್ತು ಹಿರಿಯ ಅಧಿಕಾರಿಗಳ ವಿರುದ್ಧ ಧ್ವನಿ ಎತ್ತಲಾಗದೆ ಸಾವನ್ನಪ್ಪಿದ್ದಾರೆ. ಅಧಿಕಾರಿ ಅಸಹಾಯಕತೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸಾವಿಗೂ  ಮೊದಲು ಅಕ್ರಮಕ್ಕೆ ಕಾರಣರಾದ ಅಧಿಕಾರಿಗಳ ಹೆಸರು ಬರೆದಿಟ್ಟಿದ್ದಾರೆಂದರು.
ಸಿಬಿಐಗೆ  ವರ್ಗಾವಣೆ ಮಾಡಲು ಒತ್ತಾಯ:
ಹಣ ವಾಪಸ್ ಬರುತ್ತಿದೆ. ಹಣ ಜಮೆ ಆದರೆ ಪ್ರಕರಣ ಮುಗಿದಂತೆಯೇ ಎಂದು ಪ್ರಶ್ನಿಸಿದ ರವಿಕುಮಾರ್
ಈ ಹಿಂದೆ ಗುತ್ತಿಗೆದಾರ ಆತ್ಯಹತ್ಯೆ ಪ್ರಕರಣದಲ್ಲು ಈಶ್ವರಪ್ಪ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ರು. ಅಂದು ಇದೇ ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಾಯಿಸಿದ್ದರು. ಹಾಗಾಗಿ ನಾಗೇಂದ್ರ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದರು.
ನಿಗಮದಲ್ಲಿ ಮತ್ತೊಂದು ಖಾತೆ ತೆರೆಯಲು ಅವಕಾಶ ಇಲ್ಲ. ಆದರೆ ಜಿರೋ ಅಕೌಂಟ್ ತೆಗೆದುಕೊಂಡು ಹಣ ವರ್ಗಾವಣೆ ಮಾಡಿದ್ದಾರೆ. ಸರ್ಕಾರದ ಆಡಳಿತ ಯಂತ್ರ ಕುಸಿದು ಹೋಗಿದೆ. ಅಧಿಕಾರಿಗಳು ಸರ್ಕಾರದ ಮಾತು‌ಕೇಳ್ತಿಲ್ಲ.
ಸಿಐಡಿಯಿ ತನಿಖೆಯಿಂದ ನ್ಯಾಯ ನೀಡಲು ಸಾಧ್ಯವಿಲ್ಲ ಅದಕ್ಕಾಗಿ ಸಿಬಿಐಗೆ ವರ್ಗಾವಣೆ ಮಾಡಬೇಕು. ಹಣ ವಾಪಸ್ ಬರಬಹುದು ಆದರೆ ಮೃತ ಚಂದ್ರಶೇಖರ ಜೀವ ವಾಪಸ್ ಬರುತ್ತದೆಯೇ, ಪ್ರಿಯಾಂಕ್ ಖರ್ಗೆ ಮತ್ತು ಗೃಹ ಸಚಿವ ಪರಮೇಶ್ವರ ಈ ಪ್ರಕರಣದ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯಲ್ಲವೆಂದರು.
ಸುದ್ದಿಗೋಷ್ಟಿಯಲ್ಲಿ ವಿಧಾನ ಪರಿಷತ್ ಸದಸ್ಯ ವೈ.ಎಂ.ಸತೀಶ್, ಮಾಜಿ ಶಾಸಕರಾದ ಸೋಮಶೇಖರ ರೆಡ್ಡಿ, ಸೋಮಲಿಂಗಪ್ಪ, ಮುಖಂಡರಾದ ರಾಮಲಿಂಗಪ್ಪ, ಗುರುಲಿಂಗನಗೌಡ,  ಎರ್ರಂಗಳಿ ತಿಮ್ಮಾರೆಡ್ಡಿ, ಮಹೇಶ್ವರಸ್ವಾಮಿ, ವೀರಶೇಖರ ರೆಡ್ಡಿ, ಶಿವಶಂಕರರೆಡ್ಡಿ,  ಶ್ರೀನಿವಾಸ್ ಮೋತ್ಕರ್, ಹನುಮಂತಪ್ಪ,  ಪಾಲಿಕೆ ಸದಸ್ಯರಾದ ಸುರೇಖ ಮಲ್ಲನಗೌಡ, ಗೋವಿಂದರಾಜುಲು,  ಕೋನಂಕಿ‌ತಿಲಕ್ ಮೊದಲಾದವರು ಇದ್ದರು.