ಬೀಜ-ಗೊಬ್ಬರ  ಹೆಚ್ಚಿನ ದರಕ್ಕೆ ಮಾರಿದರೆ ಕಾನೂನು ಕ್ರಮದ ಎಚ್ಚರಿಕೆ
ಸಂಜೆ ವಾಣಿ ವಾರ್ತೆ
ಕೊಟ್ಟೂರು, ಮೇ.30: ರಸಗೊಬ್ಬರದ ಅಂಗಡಿಯ ಮಾಲೀಕರು ಕಳಪೆ ಬೀಜ, ಹೆಚ್ಚಿನ ಬೆಲೆಯಲ್ಲಿ ರಸಗೊಬ್ಬರ ಮಾರಾಟ ಮಾಡಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಹಶೀಲ್ದಾರ್  ಅಮರೇಶ್  ಖಡಕ್ ಎಚ್ಚರಿಕೆ ನೀಡಿದರು.
ತಾಲೂಕು ಕಛೇರಿಯ ಮಹಾತ್ಮಗಾಂಧೀಜಿ ಸಭಾಂಗಣದಲ್ಲಿ ಬೀಜ/ಗೊಬ್ಬರ ಮಾರಾಟಗಾರರ ಸಭೆಯನ್ನು ನಡೆಸಲಾಯಿತು ಈ ಸಭೆಯಲ್ಲಿ ಎಚ್ಚರಿಕೆ ನೀಡಿದರು.
ಈ ಬಾರಿ ಪೂರ್ವ ಮುಂಗಾರು ಉತ್ತಮ ಮಳೆಯಾಗುತ್ತಿದ್ದು ಕಳೆದ ಬಾರಿಯ ರೈತರ ನೋವನ್ನು ಮರೆಸಿ ಸ್ವಲ್ಪ ಸಂತಸವನ್ನು ತಂದಿದೆ . ರೈತರು ಬಿತ್ತನೆ ಕಾರ್ಯವನ್ನು ಪ್ರಾರಂಭಿಸಿದ್ದು, ಅವರಿಗೆ ಉತ್ತಮ ಗುಣಮಟ್ಟದ ಬೀಜ ಹಾಗೂ ರಸಗೊಬ್ಬರವನ್ನು ವ್ಯಾಪಾರಸ್ಥರು  ಮಾರಾಟ ಮಾಡಬೇಕು. ಲಾಭದ ಆಸೆಗಾಗಿ ಕಳಪೆ ಗುಣಮಟ್ಟದ ಬೀಜ-ಗೊಬ್ಬರ ಮಾರಾಟ ಮಾಡಿದರೆ ಅಥವಾ ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ಬೆಲೆಯಲ್ಲಿ ಮಾರಾಟ ಮಾಡಿದರೆ ಅಂತಹವರ ವಿರುದ್ಧ ನಿಯಮಾನುಸಾರ ಕ್ರಮಕೈಗೊಳ್ಳಲಾಗುವುದು.
ವ್ಯಾಪಾರಸ್ಥರು ತಾವು ಸಂಗ್ರಹ ಮಾಡಿರುವ ಗೋದಾಮಿನ ಮುಂದೆ ತಮ್ಮ ಅಂಗಡಿಯ ಮಾಹಿತಿ ಫಲಕವನ್ನು ಹಾಕಬೇಕು. ಅಂಗಡಿಯಲ್ಲಿ ಪ್ರತಿದಿನ ಬೀಜ ಗೊಬ್ಬರದ ದಾಸ್ತಾನು ಹಾಗೂ ಧರಪಟ್ಟಿಯನ್ನು ಕಡ್ಡಾಯವಾಗಿ ಹಾಕಿರಬೇಕು. ಯಾರಾದರೂ ಗೊಬ್ಬರ ಬೀಜಗಳನ್ನು ದಾಸ್ತಾನು ಮಾಡಿ ಕೃತಕ ಅಭಾವ ಸೃಷ್ಟಿಮಾಡಿ ಹೆಚ್ಚಿನ ದರಕ್ಕೆ ಮಾರಾಟ ಮಾಡುವ ಪ್ರಯತ್ನ ಮಾಡಿದರೆ ನಿರ್ದಾಕ್ಷಿಣ್ಯವಾಗಿ ಕ್ರಮವಹಿಸಲಾಗುವುದು.
ನಿಗಧಿತ ಬೆಲೆಯಲ್ಲಿ ಬೀಜ/ರಸಗೊಬ್ಬರಗಳನ್ನು ಪೂರೈಸಿ ತಾಲೂಕಿನಲ್ಲಿ ಯಾವುದೇ ರೀತಿಯ ದೂರುಗಳು ಬಾರದಂತೆ ವ್ಯಾಪಾರವನ್ನು ಮಾಡುವಂತೆ ಸೂಚಿಸಿದರು.
ಸದರಿ ಸಭೆಯಲ್ಲಿ  ರೈತ ಮುಖಂಡರು, ರೈತರು ಹಾಗೂ ಬೀಜ ಗೊಬ್ಬರ ಮಾರಾಟಗಾರರು ತಮ್ಮ ತಮ್ಮ ಅಹವಾಲುಗಳನ್ನು ನೀಡಿದರು.
ನಂತರ ಕೃಷಿ ಸಹಾಯಕ ನಿರ್ದೇಶಕರಾದ ಸುನಿಲ್ ಕುಮಾರ್  ಮಾತನಾಡಿ ಡಿಎಪಿ ಮತ್ತು ಯೂರಿಯಾ ಸಹಿತ ಎಲ್ಲಾ  ರಸಗೊಬ್ಬರಗಳು ಸಾಕಷ್ಟು ಪೂರೈಕೆ ಇದ್ದು, ರೈತರು ಯಾವುದೇ ಒಂದು ಕಂಪನಿ/ವಿಧದ ಬೀಜ/ರಸಗೊಬ್ಬರಗಳ ಮೇಲೆ ಅವಲಂಬನೆಯಾಗದೇ ಪರ್ಯಾಯ ಬೀಜ/ರಸಗೊಬ್ಬರಗಳನ್ನು ಬಳಸುವಂತೆ ಸಲಹೆ ನೀಡಿದರು.
 ನಂತರ ಸಿಪಿಐ ವೆಂಕಟಸ್ವಾಮಿ  ಮಾತಾನಾಡಿ ಹಳ್ಳಿಗಳಲ್ಲಾಗಲಿ, ಎಲ್ಲಿಯಾದರೂ  ಕಡಿಮೆ ದರಕ್ಕೆ ಯಾವುದೇ ಅನುಮಿತಿ ಇಲ್ಲದೇ ಅನಧಿಕೃತವಾಗಿ ಬೀಜ ಅಥವಾ ಗೊಬ್ಬರವನ್ನು ಮಾರಾಟ ಮಾಡುತ್ತಿರುವುದು ಕಂಡುಬಂದಲ್ಲಿ ಕೂಡಲೇ ಮಾಹಿತಿ ನೀಡಿದಲ್ಲಿ ನಿಯಮಾನುಸಾರ  ಪರಿಶೀಲಿಸಿ ಮುಂದೆ ರೈತರಿಗಾಗುವ ತೊಂದರೆ ತಪ್ಪಿಸಬಹುದು ಎಂದರು.
ಈ ಸಭೆಯಲ್ಲಿ ಅಶ್ವಿನಿ ಡಿ, ಎಹೆಚ್ಒ ತೋಟಗಾರಿಕೆ ಇಲಾಖೆ, ನೀಲಾನಾಯ್ಕ ಕೃಷಿ ಅಧಿಕಾರಿ(ತಾಂತ್ರಿಕ), ಕುಮಾರಸ್ವಾಮಿ ಕೆ ಜಾರಿದಳ, ಹೊಸಪೇಟೆ, ರೈತ ಮುಖಂಡರಾದ  ಎನ್. ಭರ್ಮಣ್ಣ, ಶ್ರೀಧರ, ಜಯಪ್ರಕಾಶನಾಯ್ಕ, ಸುರೇಶನಾಯ್ಕ , ಬೀಜ ಗೊಬ್ಬರ ವ್ಯಾಪಾರಿಗಳ ಸಂಘದ ತಾಲೂಕು ಅಧ್ಯಕ್ಷರಾದ ಶ್ರೀಧರಶೆಟ್ಟಿ ಹಾಗೂ ಇತರೆ ವ್ಯಾಪಾರಸ್ಥರು   ಉಪಸ್ಥಿತರಿದ್ದರು  ‌ಸಿ.ಮ.ಗುರುಬಸವರಾಜ ನಿರ್ವಹಿಸಿದರು.