ರೂ.2.70 ಕೋಟಿ ವೆಚ್ಚದ ಕುಡಿಯುವ ನೀರಿನ ಕಾಮಗಾರಿಗಳಿಗೆ ಅನುಮೋದನೆ

ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಮೇ.೩೦; 2023-24ನೇ ಸಾಲಿನ ತುರ್ತು ಕುಡಿಯುವ ನೀರಿನ ಕಾಮಗಾರಿಗಳನ್ನು ಕೈಗೊಳ್ಳಲು ಒಟ್ಟು ರೂ.2.70 ಕೋಟಿ ವೆಚ್ಚದ ಟಾಸ್ಕ್ ಫೋರ್ಸ್ ಕ್ರಿಯಾ ಯೋಜನೆಗಳಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್ ಅಧ್ಯಕ್ಷತೆಯಲ್ಲಿ ಜರುಗಿದ ಜಿಲ್ಲಾ ನೀರು ಮತ್ತು ನೈರ್ಮಲ್ಯ ಮಿಷನ್ ಸಮಿತಿ ಸಭೆ ಅನುಮೋದನೆ ನೀಡಿದೆ.
ಈ ಕುರಿತು ಬುಧವಾರ ನಗರದ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಭೆ ನಡೆಯಿತು. ಜಿಲ್ಲೆಯ ಬರ ಪೀಡಿತ ತಾಲ್ಲೂಕುಗಳಲ್ಲಿ ತುರ್ತು ಕುಡಿಯುವ ನೀರಿನ ಕಾಮಗಾರಿಗಳನ್ನು ಕೈಗೊಳ್ಳಲು ರಾಜ್ಯ ಸರ್ಕಾರ ಪ್ರತಿ ತಾಲ್ಲೂಕುಗಳಿಗೆ ಮೊದಲ ಹಂತದಲ್ಲಿ ರೂ.25 ಲಕ್ಷದಂತೆ ಒಟ್ಟು ರೂ.150 ಲಕ್ಷ, ಎರಡನೇ ಹಂತದಲ್ಲಿ ರೂ. 20 ಲಕ್ಷದಂತೆ ಒಟ್ಟು ರೂ.120 ಲಕ್ಷ,  ಮೂರನೇ ಹಂತದಲ್ಲಿ ರೂ. 60.69 ಲಕ್ಷದಂತೆ ಒಟ್ಟು ರೂ.364.15 ಲಕ್ಷ ಮಂಜೂರು ಮಾಡಿದೆ.ಮೊದಲ ಹಂತದಲ್ಲಿ ಬಿಡುಗಡೆ ಮಾಡಿದ ರೂ.150 ಲಕ್ಷಗಳಿಗೆ ಜಿಲ್ಲೆಯ ಆರು ತಾಲ್ಲೂಕುಗಳಲ್ಲಿ ಕುಡಿಯುವ ನೀರಿನ ಸರಬಾರಜಿಗೆ ಸಂಬಂಧಿಸಿದಂತೆ ಒಟ್ಟು 94 ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಎರಡನೇ ಹಂತದಲ್ಲಿ ಮಂಜೂರಾದ ರೂ.120 ಲಕ್ಷಗಳಿಗೆ ಆರು ತಾಲ್ಲೂಕುಗಳಿಂದ ಒಟ್ಟು 88 ಕಾಮಗಾರಿಗಳಿಗೆ ಕ್ರಿಯಾ ಯೋಜನೆ ತಯಾರಿಸಿ ಸಭೆಯ ಅನುಮೋದನೆ ಮಂಡಿಸಲಾಯಿತು. ಜಿಲ್ಲೆಗೆ ಮಂಜೂರಾದ ರೂ.364.15 ಲಕ್ಷಕ್ಕೆ ಸಂಬಂಧಿಸಿದಂತೆ ಮೊಳಕಾಲ್ಮೂರು ತಾಲ್ಲೂಕಿನ ರಾಂಪುರ ಹಾಗೂ ಇತರೆ ಗ್ರಾಮಗಳಿಗೆ ನೀರು ಸರಬರಾಜು ಮಾಡುವ ಹೊಸ ಪೈಪ್ ಲೈನ್ ಅಳವಡಿಕೆಗೆ ರೂ.60.60 ಲಕ್ಷ ವೆಚ್ಚದ 10 ಕಾಮಗಾರಿಗಳ ಕ್ರಿಯಾ ಯೋಜನೆಯನ್ನು ಸಭೆಯ ಮುಂದೆ ಮಂಡಿಸಲಾಯಿತು.  ಶಾಲೆ, ಆಸ್ಪತ್ರೆ, ಅಂಗನವಾಡಿ, ಹಾಸ್ಟೆಲ್‍ಗಳಿಗೆ ಶುದ್ಧ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲು ಸೂಚನೆ: ಜಲ ಜೀವನ್ ಮಿಷನ್ ಯೋಜನೆಯಡಿ  ಮನೆ-ಮನೆಗೆ ಕಾರ್ಯಾತ್ಮಕ ನಳ ನೀರು ಸಂಪರ್ಕಿಸುವ ವೇಳೆ, ಗ್ರಾಮಾಂತರ ಪ್ರದೇಶದಲ್ಲಿನ ಶಾಲೆ, ಆಸ್ಪತ್ರೆ, ಅಂಗನವಾಡಿ, ಹಾಸ್ಟೆಲ್‍ಗಳಿಗೆ ತಪ್ಪದೇ ಶುದ್ಧ ಕುಡಿಯುವ ನೀರಿನ ಸಂಪರ್ಕ ಕಲ್ಪಿಸುವಂತೆ ಜಿ.ಪಂ ಸಿಇಒ ಎಸ್.ಜೆ.ಸೋಮಶೇಖರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.ಸಭೆಯಲ್ಲಿ ಜಿ.ಪಂ ಉಪ ಕಾರ್ಯದರ್ಶಿ ತಿಮ್ಮಪ್ಪ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಬಸವನಗೌಡ ಪಾಟೀಲ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ್, ಅರಣ್ಯ ಇಲಾಖೆ ಉಪ ಅರಣ್ಯ ಸಂರಕ್ಷಣಾಧಿಕಾರಿ ರಾಜಣ್ಣ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ನಾಸೀರ್‍ವುದ್ದೀನ್, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಓ.ಪರಮೇಶ್ವರಪ್ಪ ಸೇರಿದಂತೆ ಆರೋಗ್ಯ ಇಲಾಖೆ ಡಾ.ಚಂದ್ರಶೇಖರ್ ಕಂಬಾಳಿ ಮಠ ಸೇರಿದಂತೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರು ಉಪಸ್ಥಿತರಿದ್ದರು.