ಪೊಲೀಸರಿಗೆ ದೈಹಿಕ ಚಟುವಟಿಕೆ ಜೀವನ ಶೈಲಿ ಬಗ್ಗೆ ತರಬೇತಿ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮೇ.30: ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರನ್ನು ಆರೋಗ್ಯ ಪರೀಕ್ಷೆಗೆ ಒಳಪಡಿಸಿ ಬಾಡಿ ಮಾಸ್ ಇಂಡೆಕ್ಸ್ ಸೂಚ್ಯಾಂಕ 30 ಕ್ಕಿಂತ ಅಧಿಕ ಇರುವ 42 ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ಹಾಗೂ ಸ್ಕೂಲಕಾಯ ಹೊಂದಿದ ಪೊಲೀಸ್ ಸಿಬ್ಬಂದಿಯವರನ್ನು ಗುರುತಿಸಿ ಒಟ್ಟು 100 ಸಿಬ್ಬಂದಿಯವರಿಗೆ ಆರೋಗ್ಯಹೊಂದುವ  ಹೊಂದುವ ಬಗ್ಗೆ ನಿನ್ನೆಯಿಂದ 21 ದಿನಗಳವರೆಗೆ ತರಬೇತಿ ನೀಡುವ ಕಾರ್ಯ ಆರಂಭಗೊಂಡಿದೆ.
ಐಜಿಪಿ ಬಿ.ಎಸ್.ಲೋಕೇಶ್ ಕುಮಾರ್,ಈ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಪೊಲೀಸರು ಕರ್ತವ್ಯವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಆರೋಗ್ಯದಾಯಕ ಬಾಡಿ ಮಾಸ್ ಇಂಡೆಕ್ಸ್ ಹೊಂದುವ ಅಗತ್ಯದ ಬಗ್ಗೆ ತಿಳಿಸಿದ್ದಾರೆ.
ಎಸ್ಪಿ ರಂಜಿತ್ ಕುಮಾರ್ ಭಂಡಾರು ಮಾತನಾಡಿ ಈ ತರಬೇತಿ ಪೊಲೀಸರನ್ನು ದೈಹಿಕ ಮತ್ತು ಮಾನಸಿಕವಾಗಿ ಸಧೃಡಗೊಳಿಸುವುದಲ್ಲದೇ, ತರಬೇತಿ ಪಡೆದ ಈ ತಂಡದಿಂದ ಜಿಲ್ಲಾದ್ಯಾಂತ ಮಾದಕ ದ್ರವ್ಯ ಸೇವನೆ ಹಾಗೂ ಸಾಗಣಿಕೆಯ ದುಷ್ಪರಿಣಾಮಗಳು, ಮಹಿಳಾ ಮತ್ತು ಮಕ್ಕಳ ಸಂರಕ್ಷಣೆ, ದಲಿತರ ಮೇಲೆ ದೌರ್ಜನ್ಯ ತಡೆಗಟ್ಟುವ ಬಗ್ಗೆ ಹಾಗೂ ಸೈಬರ್ ಅಪರಾಧಗಳು, ರಸ್ತೆ ಅಪಘಾತಗಳ ನಿಯಂತ್ರಣ ಮಾಡುವ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಹಾಗೂ ಜಿಲ್ಲಾದ್ಯಾಂತ ಪೊಲೀಸ್ ಠಾಣೆ ಮತ್ತು ಇತರೇ ಸ್ಥಳಗಳಲ್ಲಿ ಸಸಿಗಳನ್ನು ನೆಡುವ ಮೂಲಕ ಗ್ರೀನ್ ಬಳ್ಳಾರಿ ನಿರ್ಮಾಣ ಮಾಡಲಿದೆ.
 ಅಪರಾಧಗಳ ಬಗ್ಗೆ ಮಾಹಿತಿ ಮತ್ತು ಅವನ್ನು ತಡೆಗಟ್ಟುವಲ್ಲಿ ಸಾರ್ವಜನಿಕರ ಪಾತ್ರದ ಬಗ್ಗೆ ಅರಿವು ಮೂಡಿಸುವ ಉದ್ದೇಶವನ್ನು ಹೊಂದಿದೆ ಎಂದಿದ್ದಾರೆ.
ಸುರಕ್ಷಿತ ಬಳ್ಳಾರಿಗಾಗಿ ಸಧೃಡ ಪೊಲೀಸ್ ತರಬೇತಿ  ಕಾರ್ಯಕ್ರಮದಲ್ಲಿ  ಡಾ| ಬಿ.ಕೆ.ಸುಂದರ್, ಡಾ|| ಅರವಿಂದ ಪಾಟೀಲ್, ಡಾ| ರಮೇಶ್ ಕುಮಾರ್, ಆಹಾರ ತಜ್ಞೆ  ಹಗರಿ ಕೃಷಿ ಸಂಶೋಧನ ಕೇಂದ್ರದ  ಸಹಾಯಕ ಪ್ರಾಧ್ಯಾಪಕಿ ಶಿಲ್ಪಾ.ಹೆಚ್ ಅವರು ಆಹಾರ ಪದ್ದತಿ ಮತ್ತು ದೈಹಿಕ ಚಟುವಟಿಕೆಗಳನ್ನು ಒಳಗೊಂಡ ಆರೋಗ್ಯದಾಯಕ ಜೀವನ ಶೈಲಿಯ ಮಹತ್ವದ ಬಗ್ಗೆ ತಿಳಿಸಿದ್ದಾರೆ.
ಈ 21 ದಿನದ ತರಬೇತಿ ಕಾರ್ಯಗಾರದಲ್ಲಿ ಹಲವಾರು ವೈದ್ಯಕೀಯ ತಜ್ಞರು, ಯೋಗ ಶಿಕ್ಷಕರು. ಫಿಜಿಯೋಥೆರಪಿ ತರಬೇತುದಾರರು, ಆಹಾರ ವಿಜ್ಞಾನ ಮತ್ತು ಸಂಸ್ಕರಣೆ ತಜ್ಞರು, ಆಯುರ್ವೇದ ವೈದ್ಯರು, ಪೊಲೀಸ್ ಸಿಬ್ಬಂದಿಯವರಿಗೆ ಆಹಾರ ಪದ್ಧತಿ ಮತ್ತು ಆರೋಗ್ಯ ಕಾಪಾಡುವ ದೃಷ್ಟಿಯಲ್ಲಿ ದೈಹಿಕ ಚಟುವಟಿಕೆ, ಜೀವನ ಶೈಲಿ ಬಗ್ಗೆ ತರಬೇತಿಯನ್ನು ನೀಡಲಿದ್ದಾರೆ.