ಪೆನ್ ಡ್ರೈವ್ ಪ್ರಕರಣ:ಪ್ರಜ್ವಲ್ ರೇವಣ್ಣ ಬಂಧನಕ್ಕೆ ಆಗ್ರಹ
ಸಂಜೆವಾಣಿ ವಾರ್ತೆ
ಬಳ್ಳಾರಿ, ಮೇ.30: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಕೂಡಲೆ  ಬಂಧಿಸಿ ಕಠಿಣ ಶಿಕ್ಷೆ ವಿಧಿಸಲು ಡಿ.ವೈ. ಎಫ್.ಐ ಬಳ್ಳಾರಿ ಜಿಲ್ಲಾ ಸಮಿತಿಯು ಆಗ್ರಹಿಸಿ ಬಳ್ಳಾರಿ ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದೆ.
ಡಿವೈಎಫ್ಐ.ಜಿಲ್ಲಾ ಅಧ್ಯಕ್ಷರು ಯು.ಎರ್ರಿಸ್ವಾಮಿ ಮಾತನಾಡಿ ಹಾಸನದ ಸಂಸದ ಪ್ರಜ್ವಲ್ ರೇವಣ್ಣ ನೂರಾರು ಮಹಿಳೆಯರ ಮೇಲೆ ನಡೆಸಿರುವ ವಿಕೃತ ಲೈಂಗಿಕ ದೌರ್ಜನ್ಯ,ಅತ್ಯಾಚಾರಗಳ ವಿರುದ್ಧ ಈಗಾಗಲೇ ಅತ್ಯಂತ ವ್ಯಾಪಕವಾಗಿ ತೀವ್ರ ಆಕ್ರೋಶ ಮತ್ತು ಪ್ರತಿಭಟನೆ ವ್ಯಕ್ತವಾಗಿದೆ. ಡಿವೈಎಫ್ಐ ಸೇರಿದಂತೆ ಸಾರ್ವಜನಿಕವಾಗಿ ವ್ಯಕ್ತವಾದ ತೀವ್ರ ಒತ್ತಡದಿಂದಾಗಿ ರಾಜ್ಯ ಸರ್ಕಾರ ಈಗಾಗಲೇ ಎಸ್.ಐ.ಟಿ ರಚಿಸಿ ಪ್ರಕರಣದ ತನಿಖೆ ನಡೆಯುತ್ತಿದೆ. ಈ ನಡುವೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಪ್ರಕರಣದ ದಿಕ್ಕು ತಪ್ಪಿಸಲು ಹಾಗೂ ಪ್ರಕರಣದ ತನಿಖೆಯನ್ನು ಎಸ್.ಐ.ಟಿ ಬದಲು ಸಿಬಿಐ ಗೆ ವಹಿಸುವಂತೆ ಮತ್ತು ಲೈಂಗಿಕ ದೌರ್ಜನ್ಯಕ್ಕೊಳಗಾದ ಸಂತ್ರಸ್ತ ಮಹಿಳೆಯರ ವಿಶ್ವಾಸ ಕುಗ್ಗಿಸಿ ಅವರು ಎಸ್.ಐ.ಟಿ ಮುಂದೆ ಹಾಜರಾಗದಂತ ಪರಿಸ್ಥಿತಿ ಸೃಷ್ಟಿಸುತ್ತಿವೆ. ಕಾಂಗ್ರೇಸ್ ಪಕ್ಷ ಮತ್ತು ರಾಜ್ಯದ ಕಾಂಗ್ರೇಸ್ ಸರ್ಕಾರ ಕೂಡ ಈ ರಾಜಕೀಯ ಲಾಭನಷ್ಟಗಳ ಲೆಕ್ಕಾಚಾರದ ಆಚೆಗೆ ಸಂತ್ರಸ್ತ ಮಹಿಳೆಯರ ರಕ್ಷಣೆ, ಪುನರ್ವಸತಿ ಹಾಗೂ ನೂರಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ವೀಡಿಯೋ ಚಿತ್ರೀಕರಣ ಮಾಡಿಕೊಂಡಿರುವ ಪ್ರಜ್ವಲ್ ರೇವಣ್ಣ ಮತ್ತು ಲೈಂಗಿಕ ವೀಡಿಯೋಗಳನ್ನು ಸಾರ್ವಜನಿಕವಾಗಿ ಬಿತ್ತರಿಸಿರುವವರನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಲು ಬೇಕಾದ ಸೂಕ್ಷ್ಮತೆ, ಪ್ರಬುದ್ದತೆ ಮತ್ತು ದಿಟ್ಟತನವನ್ನು ತೋರಿಸಬೇಕಿದೆ.
ಪ್ರಜ್ವಲ್ ರೇವಣ್ಣ ಮತ್ತು ವೀಡಿಯೋಗಳನ್ನು ಹಂಚಿದವರನ್ನು ಕೂಡಲೇ ಬಂಧಿಸುವಂತೆ, ದೌರ್ಜನ್ಯಕ್ಕೊಳಗಾದ ಸಂತ್ರಸ್ಥ ಮಹಿಳೆಯರಿಗೆ ರಕ್ಷಣೆ ನೀಡಿ ಗೌಪ್ಯತೆ ಮತ್ತು ಘನತೆ ಕಾಪಾಡುವಂತೆ ಹಾಗೂ ಈ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್.ಐ.ಟಿ ಯಾವುದೇ ರಾಜಕೀಯ ಮತ್ತು ಪ್ರಭಾವಿಗಳ ಒತ್ತಡಗಳಿಗೆ ಒಳಗಾಗದಂತೆ ಕಾರ್ಯನಿರ್ವಹಿಸಲು ಅವಕಾಶ ನೀಡುವಂತೆ ಮತ್ತು ನಿರ್ಧಿಷ್ಟ ಕಾಲಮಿತಿಯೊಳಗೆ ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗುವಂತೆ ಒತ್ತಾಯಿಸಿ ಈಗಾಗಲೇ ಡಿವೈಎಫ್ಐ ರಾಜ್ಯ ಸಮಿತಿಯ ವತಿಯಿಂದ ಸರಕಾರಕ್ಕೆ ಮನವಿ ಕೊಡಲಾಗಿದ್ದು ರಾಜ್ಯದಲ್ಲಿ ವ್ಯಾಪಕವಾಗಿ ಪ್ತತಿಭಟಿಸಲಾಗಿದೆ. ಇಷ್ಟಾದರೂ ಆರೋಪಿ ಪ್ರಜ್ವಲ್ ರೇವಣ್ಣ ವಿದೇಶದಲ್ಲಿ ತಲೆ ಮರೆಸಿಕೊಂಡಿದ್ದು, ಕುಟುಂಬಸ್ಥರು ತನಿಖೆ ದಿಕ್ಕು ತಪ್ಪಿಸುವಲ್ಲಿ ನಿರತರಾಗಿದ್ದಾರೆ. ಆದರೆ ಸಂತ್ರಸ್ಥ ಮಹಿಳೆಯರ ಪರಿಸ್ಥಿತಿ ನಿಕೃಷ್ಟವಾಗುತ್ತಿದ್ದು ಅವರ ರಕ್ಷಣೆ ಹಾಗೂ ಪುನರ್ವಸತಿಗೆ ಆದ್ಯತೆ ನೀಡಬೇಕಿದೆ.ಆದ್ದರಿಂದ ಮಾನ್ಯ ಗೌರವಾನ್ವಿತ ರಾಜ್ಯಪಾಲರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜೊತೆ ಚರ್ಚಿಸಿ ಈ ಎಲ್ಲಾ ಆರೋಪಿಗಳನ್ನು ಕೂಡಲೇ ಬಂಧಿಸಿ ಸೂಕ್ತವಾದ ಕಠಿಣವಾದ ಶಿಕ್ಷೆ ವಿಧಿಸಬೇಕೆಂದು ಡಿ.ವೈ.ಎಫ್.ಐ ಸಂಘಟನೆಯ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಹೋರಾಟದ ಮೂಲಕ  ಮಾನ್ಯ ರಾಜ್ಯಪಾಲರಿಗೆ ಒತ್ತಾಯಿಸಿದರು 
ಈ ಸಂದರ್ಭದಲ್ಲಿ   ಡಿವೈಎಫ್ಐ. ಜಿಲ್ಲಾಧ್ಯಕ್ಷ ಯು.ಎರ್ರಿಸ್ವಾಮಿ  ಕಾರ್ಯದರ್ಶಿ ಸ್ವಾಮಿ ಉಪಾಧ್ಯಕ್ಷರು ಬೈಲಾ ಹನುಮಪ್ಪ ಜಿ ಎನ್ ಎರ್ರಿಸ್ವಾಮಿ ಬಿಪಿ ನವೀನ್. ಎ.ತಿಪ್ಪೆರುದ್ರ ಹೆಚ್ ಎರ್ರಿಸ್ವಾಮಿ ಕಾರೇಕಲ್ ವಾಜಪೇಯಿ ಗೌಡ  ಮಸ್ತಾನ್ ಸಾಬ್ ಕೆ ಶಿವಾನಂದ್  ಎಸ್ ಎಂ ನಾಗರಾಜ್ ಸ್ವಾಮಿ ಎಸ್ ದೊಡ್ಡಬಸಪ್ಪ ನಲ್ಲಚೆರುವು ರಾಜ್ ಪ್ರಸಾದ್ ಕೆ ರಮೇಶ್  ಆಟೋ ತಿಪ್ಪೇಸ್ವಾಮಿ ಯು ಎರಿಸ್ವಾಮಿ ಆಟೋ ಸಿದ್ದಪ್ಪ ಇನ್ನು ಮುಂತಾದವರು ಉಪಸ್ಥಿತರಿದ್ದರು
One attachment • Scanned by Gmail