ಹೆದ್ದಾರಿ ರಾಜ ಕಾಲುವೆಗಳ ಒತ್ತುವರಿ ಖಂಡಿಸಿ ಲಾಂಕೋ ಟೋಲ್‌ಗೆ ಮುತ್ತಿಗೆ
ಮುಳಬಾಗಿಲು,ಮೇ.೩೦- ಮಳೆಬಂದರೆ ಕೆರೆ ಕುಂಟೆಗಳಾಗಿ ಮಾರ್ಪಡುತ್ತಿರುವ ರಾಷ್ಟ್ರೀಯ ಹೆದ್ದಾರಿ ೭೫ ರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಂಡು ವಾಣಿಜ್ಯ ಮಳಿಗೆಗಳು ಹಾಗೂ ಡಾಬಾಗಳನ್ನು ನಿರ್ಮಿಸಿರುವ ಮಾಲೀಕರ ವಿರುದ್ದ ಕ್ರಿಮಿನಲ್ ಕೇಸು ದಾಖಲಿಸಿ ಒತ್ತುವರಿ ತೆರವುಗೊಳಿಸಿ ವಾಹನ ಸವಾರರ ಅಮೂಲ್ಯ ಜೀವವನ್ನು ಉಳಿಸಬೇಕೆಂದು ಮೇ.೩೧ ರ ಶುಕ್ರವಾರ ಹನುಮನಹಳ್ಳಿ ಲ್ಯಾಂಕೋ ಮುತ್ತಿಗೆ ಹಾಕಲು ರೈತ ಸಂಘದ ಸಭೆಯಲ್ಲಿ ತಿರ್ಮಾನಿಸಲಾಯಿತು.
ನಗರದ ಹೊರವಲಯದ ಅರಣ್ಯ ಇಲಾಖೆ ಆವರಣದಲ್ಲಿ ಕರೆದಿದ್ದ ರೈತ ಸಂಘದ ಸಭೆಯಲ್ಲಿ ಮಾತನಾಡಿದ ರೈತ ಸಂಘದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಒತ್ತುವರಿ ಮಾಡಿಕೊಂಡು ಡಾಬಾ, ಹೋಟೆಲ್, ಕಲ್ಯಾಣ ಮಂಟಪಗಳನ್ನು ನಿರ್ಮಿಸಿದ್ದರೂ ಒತ್ತುವರಿ ತೆರವುಗೊಳಿಸದೆ, ಒತ್ತುವರಿದಾರರು ನಮ್ಮ ಮೇಲೆಯೇ ದಬ್ಬಾಳಿಕೆ ಮಾಡುತ್ತಾರೆಂದು ನೆಪದಲ್ಲಿ ಯಾವುದೇ ಒತ್ತುವರಿ ತೆರವುಗೊಳಿಸಿದೆ,
ರಾಷ್ಟ್ರೀಯ ಹೆದ್ದಾರಿ ಸಾವಿನ ಹೆದ್ದಾರಿಯಾಗಿ ಮಾರ್ಪಟ್ಟು ರಸ್ತೆಯ ಮೇಲೆ ಸಂಚರಿಸುವ ವಾಹನ ಸವಾರರು ಜೀವವನ್ನು ಅಂಗೈಯಲ್ಲಿಟ್ಟುಕೊಂಡು ಸಂಚರಿಸಬೇಕಾದ ಮಟ್ಟಕ್ಕೆ ರಸ್ತೆ ಹದಗೆಟ್ಟಿದೆ. ಮಳೆ ಬಿದ್ದರೆ ಮಳೆ ನೀರು ಸರಾಗವಾಗಿ ಅರಿಯಲು ರಾಜಕಾಲುವೆಗಳು ಇಲ್ಲದೆ ರಸ್ತೆಗೆ ಹರಿದು ಕೆರೆ ಕುಂಟೆಗಳಾಗಿ ಮಾರ್ಪಟ್ಟು ರಸ್ತೆ ಸಿಗದೆ ಅಪಘಾತಗಳು ಹೆಚ್ಚಾಗಿ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದು, ಯಾವುದೇ ಕ್ರಮ ಕೈಗೊಳ್ಳದ ಎನ್.ಹೆಚ್.ಎ.ಐ ಲ್ಯಾಂಕೋ ಅಧಿಕಾರಿಗಳು ಹೆದ್ದಾರಿ ಪಕ್ಕದಲ್ಲಿನ ಡಾಬಾ ಮತ್ತು ವಾಣಿಜ್ಯ ಮಳಿಗೆಗಳ ಮಾಲೀಕರ ಜೊತೆ ಶಾಮೀಲಾಗಿದ್ದಾರೆಂದು ಅಧಿಕಾರಿಗಳ ವಿರುದ್ದ ಆಕ್ರೋಷ ವ್ಯಕ್ತಪಡಿಸಿದರು.
ಜನರ ತೆರಿಗೆ ಹಣದಲ್ಲಿ ಸಾವಿರಾರು ಕೋಟಿ ಅನುದಾನದಲ್ಲಿ ಅಭಿವೃದ್ದಿ ಪಡಿಸಿದರು ರಾಷ್ಟ್ರೀಯ ಹೆದ್ದಾರಿ ೨೭೫ ಸಾವಿನ ಹೆದ್ದಾರಿಯಾಗಿ ಮಾರ್ಪಟ್ಟಿದೆ. ಗುಣಮಟ್ಟ ವಿಲ್ಲದ ರಸ್ತೆ ರಾತ್ರಿವೇಳೆ ರಸ್ತೆ ದಿಪಗಳಿಲ್ಲ ಸಮರ್ಪಕವಾದ ತಂಗುದಾನಗಳಿಲ್ಲ. ಒತ್ತುವರಿಯಾಗಿರುವ ಪಾದಚಾರಿ ರಸ್ತೆಗಳು ಒಟ್ಟಾರೆಯಾಗಿ ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆಗಳ ಹೆದ್ದಾರಿಯಾಗಿ ಮಾರ್ಪಟ್ಟಿದ್ದರು. ವಾಹನ ಸವಾರರ ಬಳಿ ಅಕ್ರಮವಾಗಿ ಟೋಲ್ ಸಂಗ್ರಹ ಮಾಡುವ ಮುಖಾಂತರ ಕೋಟಿ ಕೋಟಿ ಹಣವನ್ನು ಲೂಟಿ ಮಾಡುತ್ತಿರುವ ಎನ್.ಹೆಚ್.ಎ.ಐ ಅಧಿಕಾರಿಗಳ ವಿರುದ್ದ ಆಕ್ರೊಷ ವ್ಯಕ್ತಪಡಿಸಿದರು.