ಅಧಿಕಾರಿ ಸಿಬ್ಬಂದಿಗಳಿಗೆ ವಿಶೇಷ ಪುನಶ್ಚೇತನ ಕಾರ್ಯಗಾರ
ಕೋಲಾರ, ಮೇ ೩೦- ವಸತಿ ಮತ್ತು ವಿದ್ಯಾರ್ಥಿನಿಲಯಗಳಲ್ಲಿರುವ ಅಧಿಕಾರಿ ಸಿಬ್ಬಂದಿಗಳು ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸಬೇಕು ಹಾಗೂ ಉತ್ತಮ ಗುಣಮಟ್ಟದ ವಿದ್ಯಾಭ್ಯಾಸ ನೀಡುವುದರ ಜೊತೆಗೆ ಅತ್ಯುತ್ತಮ ಪ್ರಜೆಯನ್ನು ಸಮಾಜಕ್ಕೆ ಕೊಡೆಗೆಯಾಗಿ ಕೊಡುವುದು ವಿದ್ಯಾರ್ಥಿನಿಲಯಗಳ ಅಧಿಕಾರಿ ಸಿಬ್ಬಂದಿಗಳ ಆದ್ಯ ಕರ್ತವ್ಯವಾಗಬೇಕೆಂದು ಜಿಲ್ಲಾಧಿಕಾರಿಗಳಾದ ಅಕ್ರಂ ಪಾಷ ಅವರು ತಿಳಿಸಿದರು.
ಇಂದು ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಹಯೋಗದಲ್ಲಿ ವಸತಿ ಶಾಲೆ ಮತ್ತು ವಿದ್ಯಾರ್ಥಿನಿಲಯಗಳ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ವಿಶೇಷ ಪುನಃಶ್ಚೇತನ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಖಾಸಗಿ ವಿದ್ಯಾರ್ಥಿ ನಿಲಯಗಳಿಗೆ ಸೆಡ್ಡು ಹೊಡೆಯುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಸಿಬ್ಬಂದಿ ಮತ್ತು ಆಡಳಿತ ವರ್ಗದಲ್ಲಿ ಸಮನ್ವಯ ಸಾಧಿಸಬೇಕು. ಕಳೆದ ವರ್ಷ ನಡೆದ ಕಹಿ ಘಟನೆಗಳು ಮರುಕಳಿಸದಂತೆ ಜಾಗ್ರತೆ ವಹಿಸಬೇಕು. ವಸತಿ ಶಾಲೆಗಳ ಆವರಣಗಳಲ್ಲಿ ಹಾಗೂ ಅಡುಗೆ ಶಾಲೆಗಳಲ್ಲಿ ಸ್ವಚ್ಛತೆಯನ್ನು ಕಾಯ್ದುಕೊಳ್ಳಬೇಕು ಕುಡಿಯುವ ನೀರು ಕಲುಷಿತಗೊಳ್ಳದಂತೆ ಎಚ್ಚರ ವಹಿಸಬೇಕು. ಪ್ರತಿಯೊಂದು ವಿಚಾರದಲ್ಲೂ ಜಾಗರೂಕರಾಗಿರಬೇಕು. ವಿದ್ಯಾರ್ಥಿಗಳನ್ನು ದೇಶದ ಕಣ್ಮಣಿಗಳನ್ನಾಗಿ ಮಾಡಲು ಅವಿರತವಾಗಿ ಶ್ರಮಿಸಬೇಕು. ನಾವು ಕಾರ್ಯನಿರ್ವಹಿಸುತ್ತಿರುವ ಜಿಲ್ಲೆಗೆ ಕೀರ್ತಿ ತರಬೇಕು ಎಂದರು.ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಸುನೀಲ್ ಎಸ್. ಹೊಸಮನಿ ಅವರು ಮಾತನಾಡಿ ಈ ಕಾರ್ಯಗಾರದ ಪರಿಕಲ್ಪನೆ ಅಪೂರ್ವವಾಗಿದ್ದು, ತಾವು ನಿರ್ವಹಿಸುವ ಕೆಲಸಗಳ ಪುನರಾವಲೋಕನ ಮಾಡುವ ಅದ್ಭುತ ಅವಕಾಶ ಇದಾಗಿದ್ದು, ಲೋಪದೋಶಗಳನ್ನು ಸರಿಪಡಿಸಿಕೊಂಡು ಕಾನೂನುಗಳನ್ನು ಸರಿಯಾಗಿ ಪಾಲನೆ ಮಾಡಲು ಸುಸಂದರ್ಭವಾಗಿದೆ ಎಂದರು.
ವಿದ್ಯಾರ್ಥಿಗಳ ಪಾಲಕರೊಂದಿಗೆ ನಿಯತವಾಗಿ ಸಭೆ ನಡೆಸಿ ಮಕ್ಕಳ ಚಟುವಟಿಕೆಗಳ ಕುರಿತು ಸಮಾಲೋಚನೆ ನಡೆಸಬೇಕು. ಮಕ್ಕಳಿಗೆ ಪರಿಸರದ ಕುರಿತು ತಿಳಿ ಹೇಳಬೇಕು. ಅವರ ಕೈಯಲ್ಲಿ ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕು ಎಂದರು.
ಮುಂಬರುವ ಬಾಲ ಕಾರ್ಮಿಕರ ದಿನ, ಪರಿಸರ ದಿನ, ಯೋಗ ದಿನ ಇಂತಹ ವಿಶೇಷ ದಿನಗಳಲ್ಲಿ ಸಂಪನ್ಮೂಲ ವ್ಯಕ್ತಿಗಳನ್ನು ಕರೆದು ವಿದ್ಯಾರ್ಥಿಗಳಿಗೆ ಕಾನೂನಿನ ಅರಿವು ಮೂಡಿಸಬೇಕು. ಮಾದಕ ವಸ್ತುಗಳ ಬಳಕೆಯಿಂದಾಗುವ ದುಷ್ಪರಿಣಾಮಗಳನ್ನು ಕುರಿತು ಕಾರ್ಯಾಗಾರಗಳನ್ನು ಏರ್ಪಡಿಸಲು ಸಲಹೆ ನೀಡಿದರು. ಕಾನೂನಿನ ಸಲಹೆವಬೇಕಾದಲ್ಲಿ ಸಹಾಯವಾಣಿ ಸಂ. ೧೫೧೦೦ ಕರೆ ಮಾಡಿ ಉಚಿತ ಕಾನೂನು ಸಲಹೆ ಪಡೆಯಬಹುದಾಗಿದೆ ಎಂದು ಅವರು ತಿಳಿಸಿದರು.
ಕೆ.ಜಿ.ಎಫ್ ಪೊಲೀಸ್ ವರಿಷಧಿಕಾರಿಗಳಾದ ಶಾಂತ್‌ರಾಜ್ ಅವರು ಮಾತನಾಡಿ, ವಸತಿ ನಿಲಯಗಳ ಸಂದರ್ಶನ ವೇಳೆ ಅಲ್ಲದೇ ಬೇರೆ ಸಮಯಗಳಲ್ಲಿ ಸಂದರ್ಶಕರನ್ನು ಅನುಮತಿಸಬಾರದು. ಕಾನೂನನ್ನು ಪ್ರಜ್ಞಾಪೂರ್ವಕವಾಗಿ ಮುರಿಯಬಾರದು ಎಂದು ತಿಳಿಸಿದರು.
ಹೆಚ್ಚುವರಿ ಪೊಲೀಸ್ ವರಿಷಧಿಕಾರಿಗಳಾದ ರವಿಶಂಕರ್, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಶಿವಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ:ಜಗದೀಶ್, , ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ: ಚಾರಣಿ, ಖ್ಯಾತ ಮನೋರೋಗ ತಜ್ಞೆರಾದ ಡಾ:ವಿಜೇತದಾಸ್, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಹನುಮಂತರಾಯ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಪ್ರೇಮ, ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಮುರಳಿ, ಹಿಂದುಳಿದ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ವೈ. ಸೋಮಶೇಖರ್, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಶ್ರೀನಿವಾಸನ್ ಸೇರಿದಂತೆ ಎಲ್ಲಾ ವಿದ್ಯಾರ್ಥಿನಿಲಯಗಳ ಹಾಗೂ ವಸತಿ ನಿಲಯಗಳ ಅಧಿಕಾರಿ ಸಿಬ್ಬಂದಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.