ಮೈಸೂರಿನಲ್ಲಿ ಶಾಲಾ ಶಿಕ್ಷಕರ ಕೊರತೆ
ಸಂಜೆವಾಣಿ ನ್ಯೂಸ್
ಮೈಸೂರು.ಮೇ.30:- ರಜೆಯ ಮಜೆಯಲ್ಲಿದ್ದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಮಕ್ಕಳು ಶಾಲೆಗೆ ಮರಳಿದ್ದಾರೆ. ಆದರೆ, ಮಕ್ಕಳಿಗೆ ಪಾಠ ಮಾಡಲು ಅಗತ್ಯ ಶಿಕ್ಷಕರೇ ಜಿಲ್ಲೆಯಲ್ಲಿ ಇಲ್ಲ.
ಬುಧವಾರದಿಂದಲೇ ಶಾಲೆಗಳು ಆರಂಭವಾಗಿವೆ. ಮಕ್ಕಳು 31ರಿಂದ ಶಾಲೆಗೆ ಬರಲಿದ್ದಾರೆ. ಆದರೆ, ಜಿಲ್ಲೆಯಲ್ಲಿ ಶಿಕ್ಷಕರ ಕೊರತೆ ಕಾಡುತ್ತಿದೆ. ಪ್ರಸ್ತುತ 1775 ಶಿಕ್ಷಕರ ಹುದ್ದೆಗಳು ಖಾಲಿ ಉಳಿದಿದ್ದು, ಪೂರ್ಣ ಪ್ರಮಾಣದಲ್ಲಿ ವಿಷಯವಾರು ತರಗತಿಗಳನ್ನು ನಡೆಸುವುದು ಕಷ್ಟವಾಗಲಿದೆ. ಜಿಲ್ಲೆಯ ಒಂಬತ್ತು ತಾಲೂಕಿನ 232 ಪ್ರೌಢಶಾಲೆಗೆ 2286 ಶಿಕ್ಷಕರ ಅಗತ್ಯವಿದೆ. ಪ್ರಸ್ತುತ 1993 ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದು, 293 ಶಿಕ್ಷಕರ ಕೊರತೆ ಇದೆ. ಜಿಲ್ಲಾದ್ಯಂತ 2102 ಪ್ರಾಥಮಿಕ ಶಾಲೆಗಳಿದ್ದು, 7203 ಶಿಕ್ಷಕರ ಮಂಜೂರಾತಿಯಲ್ಲಿ 5721 ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. 1482 ಶಿಕ್ಷಕರ ಕೊರತೆ ಇರುವುದರಿಂದ ಮಕ್ಕಳ ಕಲಿಕೆಗೆ ಅಡ್ಡಿಯಾಗಿದೆ. ಒಟ್ಟಾರೆ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ 1775 ಶಿಕ್ಷಕರ ಹುದ್ದೆ ಖಾಲಿ ಇದೆ.
ಕಾಯಂ ಶಿಕ್ಷಕರಿಲ್ಲ: ಎಚ್.ಡಿ.ಕೋಟೆ, ಪಿರಿಯಾಪಟ್ಟಣದ ಕೆಲವು ಶಾಲೆಗಳಲ್ಲಿ ಕಾಯಂ ಶಿಕ್ಷಕರು ಒಬ್ಬರೂ ಇಲ್ಲದೆ ಅತಿಥಿ ಶಿಕ್ಷಕರೇ ಎಲ್ಲ ಕೆಲಸ ಮಾಡುತ್ತಿದ್ದಾರೆ. ಜತೆಗೆ ಪ್ರೌಢಶಾಲೆಗಳಿಗೆ ವಿಷಯವಾರು ಶಿಕ್ಷಕರು ಬೇಕಾಗಿದ್ದಾರೆ. ಮುಖ್ಯ ಶಿಕ್ಷಕರ ಹುದ್ದೆಗಳೂ ಖಾಲಿ ಇವೆ. ಆದರೆ, ಸಹ ಶಿಕ್ಷಕರೇ ಪ್ರಭಾರ ಮುಖ್ಯಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೆಲವು ಪ್ರಾಥಮಿಕ ಶಾಲೆಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಪ್ರತಿ ಪ್ರೌಢಶಾಲೆಯಲ್ಲೂ ಒಂದೊಂದು ವಿಷಯಕ್ಕೆ ಒಬ್ಬೊಬ್ಬರು ಶಿಕ್ಷಕರಿರಬೇಕಿದೆ. ಆದರೆ, ಜಿಲ್ಲೆಯಲ್ಲಿ ಆ ಪರಿಸ್ಥಿತಿಯಿಲ್ಲ.
ಪ್ರಾಥಮಿಕ ಮಟ್ಟದಲ್ಲೇ ಮಕ್ಕಳಿಗೆ ಗಣಿತ ಮತ್ತು ಇಂಗ್ಲಿಷ್ ವಿಷಯಗಳನ್ನು ಸಮರ್ಪಕವಾಗಿ ಕಲಿಸಲಾಗುತ್ತಿಲ್ಲ ಎಂಬ ಆರೋಪವೂ ಇದೆ. ಇದು ಪ್ರೌಢಶಾಲೆ ಹಾಗೂ ಪಿಯುಸಿ ಹಂತದಲ್ಲಿ ಮಕ್ಕಳಿಗೆ ಕಬ್ಬಿಣದ ಕಡಲೆಯಾಗುತ್ತಿದೆ. ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು. ಜಿಲ್ಲಾಡಳಿತ ಸಹ ಈ ನಿಟ್ಟಿನಲ್ಲಿ ಸರ್ಕಾರದ ಮೇಲೆ ಒತ್ತಡ ತಂದು ಶಿಕ್ಷಕರ ಕೊರತೆ ನೀಗಿಸಲು ಕ್ರಮ ವಹಿಸಬೇಕು ಎಂದು ಪಾಲಕರು ಒತ್ತಾಯಿಸುತ್ತಾರೆ.
ಆಸರೆಯಾಗಿರುವ ಅತಿಥಿ ಶಿಕ್ಷಕರು: ಜಿಲ್ಲೆಯಲ್ಲಿ ಎದುರಾಗಿರುವ ಶಿಕ್ಷಕರ ಕೊರತೆ ನೀಗಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಅತಿಥಿ ಶಿಕ್ಷಕರ ಮೊರೆ ಹೋಗಿದೆ. ಜಿಲ್ಲೆಯಲ್ಲಿ ಪ್ರಾಥಮಿಕ ಶಾಲೆಗೆ 1160 ಹಾಗೂ ಪ್ರೌಢಶಾಲೆಗೆ 245 ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಎಚ್.ಡಿ.ಕೋಟೆ ತಾಲೂಕಿನಲ್ಲಿ 389 ಶಿಕ್ಷಕರ ಹುದ್ದೆ ಖಾಲಿ ಇದೆ. ಹುಣಸೂರಿನಲ್ಲಿ 356, ಪಿರಿಯಾಪಟ್ಟಣ 334, ನಂಜನಗೂಡು 281, ಮೈಸೂರು ದಕ್ಷಿಣ ವಲಯ 11, ಮೈಸೂರು ಗ್ರಾಮಾಂತರದಲ್ಲಿ 51 ಶಿಕ್ಷಕರ ಕೊರತೆ ಇದೆ. ಕಳೆದ ವರ್ಷ ಮೈಸೂರು ಜಿಲ್ಲೆಗೆ 582 ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು (ಜಿಪಿಟಿ) ನೇಮಕಗೊಂಡಿದ್ದರು. ಅದರಲ್ಲಿ 530 ಹುದ್ದೆ ಭರ್ತಿಯಾಗಿದ್ದು, ಶಿಕ್ಷಕರ ಕೊರತೆಯನ್ನು ಸ್ವಲ್ಪಮಟ್ಟಿಗೆ ನೀಗಿಸಿದೆ.
1ರಿಂದ 7ನೇ ತರಗತಿವರೆಗೂ ಕೆಲವು ಶಾಲೆಗಳಲ್ಲಿ ಇಬ್ಬರು ಶಿಕ್ಷಕರೇ ಕಾರ್ಯ ನಿರ್ವಹಿಸುತ್ತಿದ್ದಾರೆ. ಶಾಲಾ ಶೈಕ್ಷಣಿಕ ಅಭಿವೃದ್ಧಿ ದೃಷ್ಟಿಯಿಂದ ಅತಿಥಿ ಶಿಕ್ಷಕರ ನೇಮಕಕ್ಕಿಂತ ಕಾಯಂ ಶಿಕ್ಷಕರನ್ನು ನೇಮಕ ಮಾಡಿಕೊಂಡರೆ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗುತ್ತದೆ. ಆದಷ್ಟು ಬೇಗ ಸಮಸ್ಯೆ ಬಗೆಹರಿಸಲು ಸರ್ಕಾರ ಮುಂದಾಗಬೇಕು ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.