ಅತನೂರ ರೈತ ಸಂಪರ್ಕ‌ ಕೇಂದ್ರಕ್ಕೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಭೇಟಿ
ಕಲಬುರಗಿ:ಮೇ.29: ಅಫಜಲಪೂರ ತಾಲೂಕಿನ ಅತನೂರ ರೈತ ಸಂಪರ್ಕ ಕೇಂದ್ರಕ್ಕೆ ಬುಧವಾರ ಕೆ‌.ಪಿ.ಟಿ.ಸಿ.ಎಲ್. ವ್ಯವಸ್ಥಾಪಕ ನಿರ್ದೇಶಕ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪಂಕಜ ಕುಮಾರ ಪಾಂಡೆ ಅವರು ಭೇಟಿ ನೀಡಿ, ಆರ್.ಎಸ್.ಕೆ. ಕಾರ್ಯಶೈಲಿ ಪರಿಶೀಲಿಸಿದರು.
ಬೀಜ, ರಸಗೊಬ್ಬರ ದಾಸ್ತಾನು, ಹಂಚಿಕೆ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು, ಇದೇ ಸಂದರ್ಭದಲ್ಲಿ ಭೇಟಿಯಾದ ರೈತರೊಂದಿಗೆ ಪ್ರಸಕ್ತ ಮುಂಗಾರು ಹಂಗಾಮು ಬಿತ್ತನೆ, ಬೀಜ-ರಸಗೊಬ್ಬರ ಹಂಚಿಕೆ ಕುರಿತು ಚರ್ಚಿಸಿದರು.
ಜೂನ್ ಮೊದಲ ವಾರದಲ್ಲಿ ಬಿತ್ತನೆ ಆರಂಭವಾಗಲಿದ್ದು, ಜಿ.ಆರ್.ಜಿ-152 ತೊಗರಿ ನೂತನ ಬೀಜದ ತಳಿ ಹೆಚ್ಚು ಪೂರೈಸಬೇಕೆಂದು ರೈತರು ಬೇಡಿಕೆ ಇಟ್ಟರು. ಅಲ್ಲದೆ ಬೀಜದ ದರ ಸಹ ಕಡಿಮೆ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ಬಳಿ ಕೋರಿಕೊಂಡರು.
ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ, ಸಹಾಯಕ ಕೃಷಿ ನಿರ್ದೇಶಕ ಗಡಗಿಮನಿ ಇದ್ದರು‌.