ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಿಂದ ಸಭೆ:ಪ್ರವಾಹ ಪರಿಸ್ಥಿತಿ ಉಂಟಾದಲ್ಲಿ ಎದುರಿಸಲು ಸನ್ನದ್ದರಾಗಿ:ಪಂಕಜ್ ಕುಮಾರ ಪಾಂಡೆ
ಕಲಬುರಗಿ:ಮೇ.29: ಪ್ರಸಕ್ತ ವರ್ಷ ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯ ಮುನ್ಸೂಚನೆ ಇರುವ ಕಾರಣ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಎದುರಾದಲ್ಲಿ ಸನ್ನದ್ದರಾಗುವಂತೆ ಅಧಿಕಾರಿಗಳಿಗೆ ಕೆ.ಪಿ.ಟಿ.ಸಿ.ಎಲ್. ವ್ಯವಸ್ಥಾಪಕ ನಿರ್ದೇಶಕ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪಂಕಜ್ ಕುಮಾರ ಪಾಂಡೆ ಕರೆ ನೀಡಿದರು.
ಬುಧವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬರಗಾಲ ನಿರ್ವಹಣೆ ಮತ್ತು ಪ್ರಸಕ್ತ 2024-25ನೇ ಸಾಲಿನ ಮುಂಗಾರು ಹಂಗಾಮು ಸಿದ್ಧತೆ ಕುರಿತು ಪ್ರಗತಿ ಪರಿಶೀಲನೆ ನಡೆಸಿದ ಅವರು, ಮುಂದಿನ 2-3 ತಿಂಗಳು ನಮಗೆ ಕ್ಲಿಷ್ಟಕರ ದಿನಾಗಳಾಗಿದ್ದು, ಜಿಲ್ಲಾ ಮಟ್ಟದ ಎಲ್ಲಾ ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕೆಂದು ಸೂಚಿಸಿದರು.
ಮಳೆಗಾಲ ಸಂದರ್ಭದಲ್ಲಿ ಸಹಜವಾಗಿ ಸಾಂಕ್ರಾಮಿಕ ರೋಗಗಳ ಹಾವಳಿ ಹೆಚ್ಚಿರುತ್ತದೆ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಸಾರ್ವಜನಿಕರಲ್ಲಿ ಆರೋಗ್ಯ ಮುನ್ನೆಚ್ಚೆರಿಕೆ ಕುರಿತು ಜಾಗೃತಿ ಮೂಡಿಸಬೇಕು. ಗ್ರಾಮೀಣ ಭಾಗದಲ್ಲಿ ಪಿ.ಎಚ್.ಸಿ. ಕೇಂದ್ರಗಳನ್ನು ಸುಸಜ್ಜಿತವಾಗಿ ಇಟ್ಟುಕೊಳ್ಳಬೇಕು. ಮಳೆ ಪ್ರಮಾಣ ಹೆಚ್ಚಾದಲ್ಲಿ ವಿದ್ಯುತ್ ಪೂರೈಕೆ ಸ್ಥಗಿತವಾಗುವ ಸಾಧ್ಯತೆ ಇರುವ ಕಾರಣ ಪರ್ಯಾವಾಗಿ ತುರ್ತು ಸಂದರ್ಭದಲ್ಲಿ ಉಪಯೋಗಕ್ಕೆ ಜನರೇಟರ್ ವ್ಯವಸ್ಥೆ ಮಾಡಿಕೊಳ್ಳಬೇಕೆಂದರು. ಮಳೆಯಿಂದ ಎಲ್ಲಿಯೇ ಟಿ.ಸಿ., ವಿದ್ಯುತ್ ಕಂಬದ ಸಮಸ್ಯೆ ಎದುರಾದಲ್ಲಿ ಜೆಸ್ಕಾಂ ಅಧಿಕಾರಿಗಳನ್ನು ಸಂಪರ್ಕಸಬೇಕು. ಈಗಾಗಲೆ ಎಲ್ಲಾ ಎಸ್ಕಾಂ ಅಧಿಕಾರಿಗಳೊಂದಿಗೆ ಈ ಕುರಿತು ಸಭೆ ನಡೆಸಿ ಸೂಕ್ತ ನಿರ್ದೇಶನ ನೀಡಲಾಗಿದೆ ಎಂದು ಕೆ.ಪಿ.ಟಿ.ಸಿ.ಎಲ್. ಎಂ.ಡಿ. ಸಹ ಆಗಿರುವ ಪಂಕಜ್ ಕುಮಾರ ಪಾಂಡೆ ತಿಳಿಸಿದರು.
ಜಿ.ಆರ್.ಜಿ. ಬೀಜ ಸಮರ್ಪಕವಾಗಿ ಪೂರೈಕೆಯಾಗಲಿ: ಕೃಷಿ ಇಲಾಖೆಯ ಚರ್ಚೆ ವೇಳೆಯಲ್ಲಿ ಮಾತನಾಡಿದ ಪಂಕಜ್ ಕುಮಾರ ಪಾಂಡೆ ಅವರು, ಜಿ.ಆರ್.ಜಿ. 152 ತೊಗರಿ ಬೀಜದ ಬಗ್ಗೆ ರೈತರಿಂದ ಹೆಚ್ಚಿನ ಬೇಡಿಕೆ ಇದ್ದು, ಇದನ್ನು ಸಮರ್ಪಕವಾಗಿ ಪೂರೈಕೆಯಾಗುವಂತೆ ನೋಡಿಕೊಳ್ಳಬೇಕು. ಜಿಲ್ಲೆಯಲ್ಲಿ ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕಗಳು ಎಲ್ಲಿಯೂ ಕೊರತೆಯಾಗದಂತೆ ಮತ್ತು ರೈತರಿಂದ ದೂರು ಬಾರದಂತೆ ನೋಡಿಕೊಳ್ಳಬೇಕು. ಇತ್ತೀಚೆಗೆ ಮುಖ್ಯಮಂತ್ರಿಗಳ ವಿ.ಸಿ. ನಡೆಸಿ ಕಲುಷಿತ ನೀರು ಪೂರೈಕೆಯಾಗದಂತೆ ಎಚ್ಚರ ವಹಿಸಬೇಕೆಂದು ನಿರ್ದೇಶನ ನೀಡಿದ್ದು, ಜಿಲ್ಲೆಯಲ್ಲಿ ಈ ಬಗ್ಗೆ ಅಧಿಕಾರಿಗಳು ಹೆಚ್ಚು ಜಾಗ್ರತೆ ವಹಿಸಬೇಕು ಎಂದರು.
ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ಮಾತನಾಡಿ, ಕಳೆದ ಏಪ್ರಿಲ್ ಮತ್ತು ಪ್ರಸಕ್ತ ಮೇ ಮಾಹೆಯಲ್ಲಿ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದು, ಶೇ.44 ರಷ್ಟು ಮಳೆ ಹೆಚ್ಚಾಗಿದೆ. ಇನ್ನೂ ಜೂನ್ 1 ರಿಂದ ಇನ್ನು ಹೆಚ್ಚಿನ ಮಳೆಯಾಗುವ ಮುನ್ಸೂಚನೆ ಇದೆ. ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಪ್ರಮುಖ ಬೆಳೆಗಳಾದ ತೊಗರಿ 5,93,050 ಹೇ, ಹೆಸರು 51,500 ಹೇ, ಉದ್ದು 24,250 ಹೇ, ಸೋಯಾಬೀನ್ 42,500, ಇತರೆ ಬೆಳೆಗಳು 1,54,585 ಹೆಕ್ಟೇರ್ ಸೇರಿ ಒಟ್ಟು 8,65,885 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೂಂದಲಾಗಿದೆ ಎಂದು ಸಭೆಗೆ ತಿಳಿಸಿದರು.
ಪ್ರಸ್ತುತ ಸಾಲಿನಲ್ಲಿ ಪ್ರಮುಖ ಬೆಳೆಗಳಾದ ತೊಗರಿ 6,801.74 ಕ್ವಿಂಟಲ್, ಹೆಸರು 642.13 ಕ್ವಿಂಟಲ್, ಉದ್ದು 413.07 ಕ್ವಿಂಟಲ್, ಸೋಯಾಬೀನ್ 11,255.05 ಕ್ವಿಂಟಲ್ ಸೇರಿ ಒಟ್ಟು 19,461.29 ಕ್ವಿಂಟಲ್ ಬೀಜ ವಿತರಣೆ ಕಾರ್ಯಕ್ರಮವಿದ್ದು, ವಾಸ್ತವವಾಗಿ ನಮ್ಮ ಬಳಿ ಬೇಡಿಕೆಗ್ಗಿಂತ ಹೆಚ್ಚು ಅಂದರೆ 21,021.53 ಕ್ವಿಂಟಲ್ ಬೀಜ ದಾಸ್ತಾನಿದೆ. ಇದರಲ್ಲಿ 5,459 ಕ್ವಿಂಟಲ್ ಬೀಜ ಜಿಲ್ಲೆಯ ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನಿಕರಿಸಲಾಗಿದೆ. ಜಿಲ್ಲೆಯಲ್ಲಿ ಯಾವುದೇ ಬೀಜದ ಕೊರತೆ ಇರುವುದಿಲ್ಲ. ಅಧೇ ರೀತಿ ಮುಂಗಾರು ಹಂಗಾಮಿನಲ್ಲಿ ಒಟ್ಟು 88,592 ಮೆ.ಟನ್ ರಸಗೂಬ್ಬರ ಬೇಡಿಕೆ ಇದೆ. ಅದರಲ್ಲಿ ಪ್ರಸ್ತುತ ಒಟ್ಟು 49,179 ಮೆ.ಟನ್ ದಾಸ್ತಾನು ಇರುತ್ತದೆ. ರಸಗೂಬ್ಬರ ಕೊರತೆ ಸಹ ಜಿಲ್ಲೆಯಲ್ಲಿ ಇರುವುದಿಲ್ಲ ಎಂದರು.
ತೋಟಗಾರಿಕೆ ಉಪ ನಿರ್ದೇಶಕ ಸಂತೋಷ ಇನಾಂದಾರ್ ಅವರು 2024-25ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ತೋಟಗಾರಿಕೆ ಬೆಳೆ ಬಿತ್ತನೆ ಗುರಿ ಬಗ್ಗೆ ವಿವರಿಸುತ್ತಾ, ಇತ್ತೀಚಿನ ಮಳೆಯಿಂದಾಗಿ ಕಳೆದ ಏಪ್ರಿಲ್ ಮಾಹೆಯಲ್ಲಿ 92.55 ಹೆಕ್ಟೇರ್, ಮೇ ಮಾಹೆಯಲ್ಲಿ 34.35 ಹೆಕ್ಟೇರ್ ತೋಟಗಾರಿಕೆ ಪ್ರದೇಶ ಹಾನಿಯಾಗಿದೆ. ಇದರಲ್ಲಿ ಅಫಜಲಪೂರ, ಕಲಬುರಗಿ, ಆಳಂದ ತಾಲೂಕಿನಲ್ಲಿ ಬಾಳೆ, ಪಪ್ಪಾಯಿ ಹೆಚ್ಚು ಹಾನಿಯಾಗಿದೆ. ಈಗಾಗಲೆ ಜಂಟಿ ಸರ್ವೇ ಕಾರ್ಯ ನಡೆಸಿ ಡಿ.ಸಿ. ಕಚೇರಿಗೆ ವರದಿ ಸಲ್ಲಿಸಿದ್ದು, ಬೆಳೆ ಪರಿಹಾರಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಇನ್ನಷ್ಟೆ ಹೋಗಬೇಕಿದೆ ಎಂದರು.
274 ಕೋಟಿ ಪರಿಹಾರ ಜಮೆ: ಕಲಬುರಗಿ ಡಿ.ಸಿ. ಬಿ.ಫೌಜಿಯಾ ತರನ್ನುಮ್ ಮಾತನಾಡಿ, ಜಿಲ್ಲೆಯಲ್ಲಿ ಸಾಕಷ್ಟು ಬೀಜ, ರಸಗೊಬ್ಬರ, ಕೀಟನಾಶಕ ಇದೆ. ಬಿತ್ತನೆಗೆ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ. ಜಾನುವಾರುಗಳಿಗೆ 20 ವಾರಗಳಿಗೆ ಬೇಕಾಗುವ ಮೇವು ದಾಸ್ತಾನು ಜಿಲ್ಲೆಯಲ್ಲಿದೆ. ಜಿಲ್ಲೆಯಲ್ಲಿ 143 ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, 200 ಕಡೆ ಖಾಸಗಿ ಬೀರವೆಲ್ ಬಾಡಿಗೆ ಪಡೆದು ನೀರು ಪೂರೈಸಲಾಗುತ್ತಿದೆ. ಇದಲ್ಲದೆ ಕಲಬುರಗಿ ನಗರದಲ್ಲಿ 40, ನಗರ-ಪಟ್ಟಣದಲ್ಲಿ 7 ಹಾಗೂ ಗ್ರಾಮೀಣ ಭಾಗದಲ್ಲಿ 6 ಸರ್ಕಾರಿ ಟ್ಯಾಂಕರ್ ವಾಹನದ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಕಳೆದ ವರ್ಷದ ಬರಗಾಲ ಹಿನ್ನೆಲೆಯಲ್ಲಿ ಜಿಲ್ಲೆಯ ರೈತರಿಗೆ 274 ಕೋಟಿ ರೂ.ಇನ್ಪುಟ್ ಸಬ್ಸಿಡಿ ನೀಡಲಾಗಿದೆ. ಪ್ರವಾಹ ಪರಿಸ್ಥಿತಿ ಎದುರಾಗುವ ಸಂಭಾವ್ಯ ಹಳ್ಳಿಗಳ ಪಟ್ಟಿ ಸಿದ್ಧಮಾಡಿಕೊಳ್ಳಲಾಗಿದೆ. ಇತ್ತೀಚೆಗೆ ಸಿಡಿಲಿನಿಂದ ಸಾವು ಪ್ರಕರಣ ವರದಿಯಾಗುತ್ತಿರುವ ಕಾರಣ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಪೋಸ್ಟರ್ ಅಂಟಿಸುವ ಕಾರ್ಯ ಮಾಡಲಾಗುತ್ತಿದೆ ಎಂದರು.
ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ ಮಾತನಾಡಿ ನರೇಗಾ ಕಾಮಗಾರಿ ಪ್ರಗತಿ ಮತ್ತು ಗ್ರಾಮೀಣ ಭಾಗದಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆಗೆ ತೆಗೆದುಕೊಂಡ ಕ್ರಮಗಳ ಬಗ್ಗೆ ವಿವರಿಸಿದರು. ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ ದೇವಿದಾಸ್ ಮಾತನಾಡಿ, ನಗರದಲ್ಲಿನ ಎಲ್ಲಾ ತೆರೆದ ಬಾವಿ, ಚರಂಡಿ ಸ್ವಚ್ಛತೆ ಕಾರ್ಯ ಭರದಿಂದ ಸಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಮಹಾನಗರ ಪಾಲಿಕೆ ಉಪ ಆಯುಕ್ತ ಮಾಧವ ಗಿತ್ತೆ, ಸಹಾಯಕ ಆಯುಕ್ತೆ ರೂಪಿಂದರ್ ಸಿಂಗ್ ಕೌರ್, ಡಿ.ಎಚ್.ಓ. ಡಾ. ರತಿಕಾಂತ ಸ್ವಾಮಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳಿದ್ದರು.