ಸ್ವಚ್ಛ ಭವಿಷ್ಯಕ್ಕಾಗಿ ಮನೆಗಳಲ್ಲಿ ನೈಸರ್ಗಿಕ ಅನಿಲ ಅಳವಡಿಕೆ ಅಗತ್ಯ
ಕಲಬುರಗಿ:ಮೇ.29: ಸ್ವಚ್ಛ ಭವಿಷ್ಯಕ್ಕಾಗಿ ಮನೆಗಳು, ಉದ್ಯಮಗಳು ಮತ್ತು ವಿವಿಧ ವಹಿವಾಟುಗಳಲ್ಲಿ ನೈಸರ್ಗಿಕ ಅನಿಲ ಅಳವಡಿಸಬೇಕಿದೆ. ಪರಿಸರ ಜವಾಬ್ದಾರಿ ಕೇವಲ ಒಂದು ಗುರಿಯಲ್ಲ, ಅದು ಅವಶ್ಯಕತೆಯಾಗಿದೆ. ಈ ಕುರಿತು ಸಾಂಘಿಕ ಕೆಲಸವಾಗಬೇಕಿದೆ ಎಂದು ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಹೇಳಿದರು.
ನೈಸರ್ಗಿಕ ಅನಿಲ ಸುರಕ್ಷಿತ ಮತ್ತು ಕಡಿಮೆ ವೆಚ್ಚದ ಆಯ್ಕೆಯಾಗಿದೆ. ಸುಸ್ಥಿರ ಬೆಳವಣಿಗೆಗಾಗಿ ಈ ಕುರಿತು ಕೈಗಾರಿಕಾ ಸಮುದಾಯದಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಎಂದರು.
ಭಾರತದ ನಗರಗಳಲ್ಲಿನ ಮುಂಚೂಣಿಯ ಅನಿಲ ವಿತರಣಾ ಕಂಪನಿಗಳಲ್ಲಿ ಒಂದಾಗಿರುವ ಎಜಿ&ಪಿ ಪ್ರಥಮ್ ಕಲಬುರಗಿಯಲ್ಲಿ ಆಯೋಜಿಸಿದ್ದ ಕೈಗಾರಿಕಾ ಜಾಗೃತಿಕೂಟ ಉದ್ಘಾಟಿಸಿ ಅವರು ಮಾತನಾಡಿದರು. ಕೆಕೆಸಿಸಿಐ ಸಹಯೋಗದಲ್ಲಿ ಹೆಚ್ಚು ಪ್ರಯೋಜನಕಾರಿಯಾದ ಕೈಗಾರಿಕಾಕೂಟ ಆಯೋಜಿಸಿದ್ದಕ್ಕೆ ಎಜಿ&ಪಿ ಪ್ರಥಮ್ ತಂಡವನ್ನು ಅಭಿನಂದಿಸುತ್ತೇನೆ. ಈ ಕಾರ್ಯಕ್ರಮ ನೈಸರ್ಗಿಕ ಅನಿಲದ ಕುರಿತು ಜ್ಞಾನ ವಿಸ್ತರಣೆಯತ್ತ ಗಮನ ಕೇಂದ್ರೀಕರಿಸಿದೆ' ಎಂದರು. ಕೈಗಾರಿಕೆಗಳು ಕೊಳವೆಯ ಮೂಲಕ ಪೂರೈಸಲಾಗುವ ನೈಸರ್ಗಿಕ ಅನಿಲ (ಪೈಪ್ಡ್ ನ್ಯಾಚುರಲ್‍ಗ್ಯಾಸ್-ಪಿಎನ್‍ಜಿ) ಬಳಕೆಗೆ ಬದಲಾಯಿಸಿಕೊಳ್ಳುವುದರ ಪ್ರಾಮುಖ್ಯತೆ ಕುರಿತು ಈ ಸಭೆಯಲ್ಲಿ ವಿವರಿಸಲಾಯಿತು. ಕೈಗಾರಿಕಾ ಕ್ಷೇತ್ರಕ್ಕೆ ಪಿಎನ್‍ಜಿ ಬಳಕೆಯ ಗಮನಾರ್ಹ ಲಾಭಗಳನ್ನು ಈ ಕಾರ್ಯಕ್ರಮ ಮುಖ್ಯವಾಗಿ ತಿಳಿಸಿತ್ತು. ಹಲವಾರು ಕೈಗಾರಿಕೆಗಳಿಂದ ನೂರಕ್ಕೂ ಹೆಚ್ಚಿನ ಪಾಲುದಾರರನ್ನು ಈ ಕಾರ್ಯಕ್ರಮ ಆಕರ್ಷಿಸಿತ್ತು. ಸುತ್ತಮುತ್ತಲ ಪ್ರದೇಶದಲ್ಲಿ ಸುಸ್ಥಿರ ಶಕ್ತಿ ನಿರ್ವಹಣೆಗಾಗಿ ಪರಿಸರ ಸ್ನೇಹಿ ಪರಿಹಾರಗಳನ್ನು ಕುರಿತು ಚರ್ಚಿಸಿ ಈ ಕುರಿತು ಕ್ರಮಗಳನ್ನು ಆರಂಭಿಸುವ ಬಗ್ಗೆ ಮಾತುಕತೆ ನಡೆಸಲಾಯಿತು. ಕಲಬುರಗಿ ಜಿಲ್ಲಾ ಪರಿಸರ ಅಧಿಕಾರಿ ಸಿ.ಎನ್. ಮಂಜಪ್ಪ ಮಾತನಾಡಿ, ಕಲಬುರರ್ಗಿ ನಗರ ಕಷ್ಟಕರ ಪರಿಸರ ಸವಾಲುಗಳನ್ನು ಎದುರಿಸುತ್ತಿದ್ದು, ಮಿತಿಮೀರಿದ ವಾಯುಮಾಲಿನ್ಯ ಮತ್ತು ಧೂಳು ಹೊರಸೂಸುವಿಕೆಗಳಿಂದ ಬಾಧಿತ ಪ್ರದೇಶವೆಂದು ಗುರುತಿಸಲ್ಪಟ್ಟಿದೆ. ವಾಹನಗಳು ಮತ್ತು ಕೈಗಾರಿಕೆಗಳೇ ಇದಕ್ಕೆಲ್ಲ ಕಾರಣ. ಮರ, ಇದ್ದಿಲು ಮತ್ತು ಡೀಸೆಲ್‍ನಂತಹ ಪಳಿಯುಳಿಕೆಯ ಇಂಧನಗಳ ಬಳಕೆಯಿಂದ ಗಮನಾರ್ಹ ಇಂಗಾಲದ ಹೊರಸೂಸುವಿಕೆ ಉಂಟಾಗುತ್ತಿದೆ. ಈ ಮಾಲಿನ್ಯಕಾರಕಗಳು ಜನರ ಆರೋಗ್ಯದ ಮೇಲೆ ನೇರ ಪರಿಣಾಮ ಉಂಟುಮಾಡುತ್ತಿವೆ. ಆದ್ದರಿಂದ ಮಾಲಿನ್ಯ ನಿವಾರಿಸಲು ನೈಸರ್ಗಿಕ ಅನಿಲದ ಬಳಕೆಯನ್ನು ಪ್ರೋತ್ಸಾಹಿಸಬೇಕಿದೆ ಎಂದರು. ಎಜಿ&ಪಿ ಪ್ರಥಮ್‍ನ ಕಲಬುರಗಿ-ವಿಜಯಪುರದ ಜಿಎ ಮುಖ್ಯಸ್ಥ ರಂಗರಾಜನ್ ಶೇಷಾದ್ರಿ ಮಾತನಾಡಿ,ಎಜಿ&ಪಿ ಪ್ರಥಮ್ ಸಂಸ್ಥೆಯಲ್ಲಿ ನಾವು ಸ್ವಚ್ಛ ಮತ್ತು ಸುಸ್ಥಿರ ಶಕ್ತಿಯ ಪರಿಹಾರಗಳನ್ನು ಸಮುದಾಯಗಳಿಗೆ ಪೂರೈಸಲು ಬದ್ಧತೆ ಹೊಂದಿದ್ದೇವೆ’, ಪ್ರಸ್ತುತ ನಾವು ಕಲಬುರಗಿಯಲ್ಲಿ 10 ಸಿಎನ್‍ಜಿ ಸ್ಟೇಷನ್‍ಗಳನ್ನು ಹೊಂದಿದ್ದೇವೆ. ಜಯನಗರ, ಯಮುನಾನಗರ, ಪೂಜಾ ಕಾಲೋನಿ ಮತ್ತುಡಾಕ್ಟರ್ಸ್ ಕಾಲೋನಿಗಳಲ್ಲಿ ಪಿಎನ್‍ಜಿ ಸಂಪರ್ಕಗಳನ್ನು ಪೂರೈಸುತ್ತಿದ್ದೇವೆ. ಕಮಲಾಪುರ ಮತ್ತು ಕಪ್‍ನೂರ್‍ಗಳಲ್ಲಿ ಇನ್ನು ಎರಡು ಮದರ್ ಸಿಎನ್‍ಜಿ ಸ್ಟೇಷನ್‍ಗಳನ್ನು ಆರಂಭಿಸುವ ಯೋಜನೆ ಹೊಂದಿದ್ದೇವೆ ಎಂದರು.
ಮಹಾನಗರ ಪಾಲಿಕೆ ಆಡಳಿತ ವಿಭಾಗದ ಉಪ ಆಯುಕ್ತ ಮಾಧವ್ ಜಿಟ್ಟೆ, ಕೆಕೆಸಿಸಿಐ ಅಧ್ಯಕ್ಷ ಶಶಿಕಾಂತ ಬಿ. ಪಾಟೀಲ್, ಡಿಐಸಿಯ ಜಂಟಿ ನಿರ್ದೇಶಕ ಬಿ. ಸತೀಶ್‍ಕುಮಾರ್, ಗುಲ್ಬರ್ಗಾ ದಾಲ್ ಮಿಲ್ಲರ್ಸ್ ಅಸೋಸಿಯೇಷನ್ ಅಧ್ಯಕ್ಷ ಚಂದ್ರಶೇಖರ್ ಕೋಬಾಳ, ಸಣ್ಣ ಕೈಗಾರಿಕಾ ಮಾಲೀಕರ ಸಂಸ್ಥೆ ಅಧ್ಯಕ್ಷ ಭೀಮಾಶಂಕರ್ ಬಿ. ಪಾಟೀಲ್, ಕೆಕೆಸಿಸಿಐ ಕಾರ್ಯದರ್ಶಿ ಮಂಜುನಾಥ್ ಜೇವರ್ಗಿ ಮತ್ತು ಕೆಕೆಸಿಸಿಐನ ಕೈಗಾರಿಕೆ ಮತ್ತು ಎಂಎಸ್‍ಎಂಇ ಉಪಸಮಿತಿಯ ಚೇರ್ಮನ್ ಅಭಿಜಿತ್ ಪಾದಶೆಟ್ಟಿ ಮತ್ತಿತರರು ಇದ್ದರು.