ಗ್ರಾಮ ಆಡಳಿತ ಮಹಿಳಾ ಆಕಾಂಕ್ಷಿಗಳಿಗೆ ಉಚಿತ ತರಬೇತಿ ಶಿಬಿರ
ಸಂಜೆವಾಣಿ ವಾರ್ತೆ
ದಾವಣಗೆರೆ.ಸೆ.೨೪: ಸತೀಶ್ ಜಾರಕೀಹೊಳಿ ಫೌಂಡೇಶನ್, ಮಾನವ ಬಂಧುತ್ವ ವೇದಿಕೆ, ಕರ್ನಾಟಕ ವತಿಯಿಂದ 15ದಿನಗಳ ಕಾಲ ಗ್ರಾಮ ಆಡಳಿತ ಮಹಿಳಾ ಆಕಾಂಕ್ಷಿಗಳಿಗೆ ಉಚಿತ ತರಬೇತಿ ಶಿಬಿರವನ್ನು ಹರಿಹರದ ಮೈತ್ರಿ ವನದಲ್ಲಿ ಆಯೋಜಿಸಲಾಗಿದೆ ಎಂದು ವೇದಿಕೆಯ ರಾಜ್ಯ ಸಂಚಾಲಕ ಡಾ.ಎ.ಬಿ.ರಾಮಚಂದ್ರಪ್ಪ ತಿಳಿಸಿದರು.ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಎಲ್ಲಾ ಸಮುದಾಯದ ವಿದ್ಯಾರ್ಥಿಗಳಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಸೆಪ್ಟೆಂಬರ್ 25ರಿಂದ ಅಕ್ಟೋಬರ್ 10ರವರೆಗೆ ಒಟ್ಟು 15 ದಿನಗಳ ಕಾಲ ತರಬೇತಿ ಶಿಬಿರ ಆಯೋಜಿಸಲಾಗಿದೆ. ಶಿಬಿರಾರ್ಧಿಗಳಿಗೆ ಊಟ, ವಸತಿ ಉಚಿತವಾಗಿ ನೀಡಲಾಗುವುದು ಎಂದು ಹೇಳಿದರು.ಸಮಾಜೋಭಿವೃದ್ಧಿಗೆ ಪೂರಕವಾಗಿ ಕಲೆ, ಸಾಹಿತ್ಯ, ಸಂಸ್ಕೃತಿ, ವಿಚಾರಶೀಲತೆಗೆ ಪೂರಕವಾಗಿ ಹಲವು  ಕಾರ್ಯಾಗಾರಗಳನ್ನು ನಡೆಸಲಾಗುತ್ತದೆ. ಇದಕ್ಕೆ ಪೂರಕವಾಗಿ ಮಾನವ ಬಂಧುತ್ವ ವೇದಿಕೆಯಿಂದ ಬಾಬ್  ಮಾರ್ಲಿ ಫ್ರಮ್ ಕೋಡಿಹಳ್ಳಿ  ಪ್ರದರ್ಶನವನ್ನು ಸೆಪ್ಟೆಂಬರ್ 27ರಂದು ಸಂಜೆ 6ಕ್ಕೆ ಜೆ.ಜೆ.ಎಂ. ಮೆಡಿಕಲ್ ಕಾಲೇಜ್‌ನ ಆವರದಲ್ಲಿರುವ ಬಾಪೂಜಿ ಸಭಾಂಗಣದಲ್ಲಿ ಉಚಿತ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಕಲಾ ಆಸಕ್ತರು, ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಲು ಮನವಿ ಮಾಡಿದರು.ನಾಟಕದ ಪಠ್ಯ ಆಕರವನ್ನು ಕೆ.ಎನ್.ಹನುಮಂತಯ್ಯ, ಕೆ.ಚಂದ್ರಶೇಖರ ಮಾಡಿದ್ದರೆ, ಕೆ.ಸಿ.ಲಕ್ಷ್ಮಣ್ ನಾಟಕದ ರಚನೆ, ನಿರ್ದೇಶನ, ವಿನ್ಯಾಸ ಮಾಡಿದ್ದು, ವಿ.ಎಲ್. ನರಸಿಂಹಮೂರ್ತಿ ಡ್ರಮ್ ಬರ್ಗ್  ನಿರ್ವಹಣೆ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.ಸುದ್ದಿಗೋಷ್ಟಿಯಲ್ಲಿ ಹೆಗ್ಗೆರೆ ರಂಗಪ್ಪ, ಪವಿತ್ರ, ಕರೂರು ಹನುಮಂತಪ್ಪ, ಮಾಡಾಳು ಶಿವಕುಮಾರ್ ಇದ್ದರು.