ಬೀಚಿ ಬಳಗದಿಂದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನಮಕ್ಕಳಲ್ಲಿ ಸಾಮಾಜಿಕ ಮೌಲ್ಯ ಬೆಳೆಸಿ
ಸಂಜೆವಾಣಿ ವಾರ್ತೆ
ಹೂವಿನಹಡಗಲಿ :ಸೆ.24- ಶಿಕ್ಷಕರು ಇಲಾಖೆಯ ಕೆಲಸದ ಒತ್ತಡದ ನಡುವೆಯೂ ಮಕ್ಕಳ ಸ್ನೇಹಿ ಆಗಿ ಕಾರ್ಯ ನಿರ್ವಹಿಸಬೇಕು ಎಂದು ಗದಗ ಡಯಟ್ ಉಪನ್ಯಾಸಕ ಯಲ್ಲಪ್ಪ ಹಂದ್ರಾಳ ಹೇಳಿದರು.
ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಬೀಚಿ ಗ್ರಂಥಾಲಯ ಬೆಂಬಲಿಗರ ಬಳಗ ಶಾಲಾ ಗ್ರಂಥಾಲಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ 26ನೇ ವರ್ಷದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ‘ಹೊಸ ಕಾಲದ ಶಿಕ್ಷಕರ ಸವಾಲುಗಳು’ ಕುರಿತು ಅವರು ಉಪನ್ಯಾಸ ನೀಡಿದರು.
ಶಿಕ್ಷಕರು ಪಠ್ಯ ಬೋಧನೆ ಜೊತೆಗೆ ಸಾಮಾಜಿಕ ಮೌಲ್ಯಗಳನ್ನು ಬೆಳೆಸಬೇಕು. ಅರ್ಜಿ, ಶಿಫಾರಸ್ಸು ನೋಡಿ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆ ಮಾಡುವ ವಿಧಾನ ನಿಲ್ಲಬೇಕು. ಸೃಜನಶೀಲ ಮಕ್ಕಳ ಪ್ರತಿಭೆ ಅರಳಲು ಶೈಕ್ಷಣಿಕ ಚಟುವಟಿಕೆಗಳನ್ನು ನಿರ್ವಹಿಸುವ ಶಿಕ್ಷಕರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ನಡೆಯಬೇಕು ಎಂದು ಹೇಳಿದರು.
ಉಪನ್ಯಾಸಕ ಎ.ಕೊಟ್ರಗೌಡ ಮಾತನಾಡಿ, ಬೀಚಿ ಗ್ರಂಥಾಲಯ ಬಳಗ ರಾಜ್ಯದಲ್ಲಿಯೇ ವಿನೂತನ ರೀತಿಯಲ್ಲಿ ಕಾರ್ಯಕ್ರಮ ಸತತ 26 ವರ್ಷ ನಡೆಸಿಕೋಂಡು ಬಂದಿರುವುದು ಶ್ಲಾಘನೀಯ ಎಂದರು.
ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಪಿ.ಎಂ.ಅಶೋಕ ಮಾತನಾಡಿದರು. ಗೌರವಾಧ್ಯಕ್ಷರಾದ ಹೆಚ್.ಎಂ.ಬೆಟ್ಟಯ್ಯ, ಬೀರಬ್ಬಿ ಬಸವರಾಜ,  ಎಂ.ತವನಪ್ಪ, ಎಲ್.ಖಾದರಬಾಷಾ, ಶಾಖಾ ಗ್ರಂಥಾಲಯಾಧಿಕಾರಿ ಮಂಜುನಾಥ ಬೋವಿ, ಪ್ರಾಚಾರ್ಯ ಕೋರಿ ಹಾಲೇಶ್, ಗ್ರಂಥಾಲಯಾಧಿಕಾರಿಗಳಾದ ಮಲ್ಲಪ್ಪ ಗುಡ್ಲಾನೂರು, ನಾರಾಯಣದಾಸ್ ಉಪಸ್ಥಿತರಿದ್ದರು.
ಬೀಚಿ ಬಳಗದ ಅಧ್ಯಕ್ಷ ಸುರೇಶ ಅಂಗಡಿ ಅಧ್ಯಕ್ಷತೆ ವಹಿಸಿದ್ದರು. ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಹೆಚ್.ಗುರುಪಾದಪ್ಪ, ಎಂ.ಶೇಕ್ ಅಹ್ಮದ್, ಪ್ರದೀಪ್ ಕುಮಾರ್ ಜೋಷಿ ಹಾಗೂ ಗ್ರಂಥಪಾಲಕ ಬಾಗಳಿ ಸಿದ್ದಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಚಿತ್ತಾರ ನೃತ್ಯ ಶಾಲೆಯ ಭೂಮಿಕಾ ಇಟಗಿ ಸ್ವಾಗತ ನೃತ್ಯ ಮಾಡಿದರು. ಶಿಕ್ಷಕರಾದ ಎಂ.ಸಿದ್ದೇಶ್, ಕೆ.ಎ.ಕೆ.ಜಿಲಾನ್, ಕೆ.ದೊಡ್ಡಬಸಪ್ಪ ಪ್ರಶಸ್ತಿ ಪುರಸ್ಕೃತರನ್ನು ಪರಿಚಯಿಸಿದರು.
ಉಪನ್ಯಾಸಕ ಶಂಕರ್ ಬೆಟಗೇರಿ, ಶಿಕ್ಷಕ ಹಡಗಲಿ ಬಸವರಾಜ, ಬಳಗದ ಕಾರ್ಯದರ್ಶಿ ನಾಗರಾಜ್ ಮಲ್ಕಿಒಡೆಯರ್ ನಿರ್ವಹಿಸಿದರು.