ಹೂವಿನಹಡಗಲಿ : ಕಾಟಾಚಾರದ ದಸರಾ ಕ್ರೀಡಾಕೂಟ
ಸಂಜೆವಾಣಿ ವಾರ್ತೆ
ಹೂವಿನಹಡಗಲಿ :ಸೆ,24- ಇಲ್ಲಿನ ತಾಲೂಕು ಕ್ರೀಡಾಂಗಣದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ನಿನ್ನೆ ಸಂಘಟಿಸಿದ್ದ ದಸರಾ ಕ್ರೀಡಾಕೂಟ ಅವ್ಯವಸ್ಥೆಯ ಆಗರವಾಗಿತ್ತು.
ತಾಲೂಕಿನ ನಾನಾ ಗ್ರಾಮಗಳಿಂದ ಬಂದಿದ್ದ ಕ್ರೀಡಾಪಟುಗಳಿಗೆ ಕುಡಿಯುವ ನೀರು, ನೆರಳು, ಊಟದ ವ್ಯವಸ್ಥೆ ಕಲ್ಪಿಸಿರಲಿಲ್ಲ. ಆಟೋಟಗಳಲ್ಲಿ ಗಾಯಗೊಂಡವರಿಗೆ ಪ್ರಥಮ ಚಿಕಿತ್ಸೆಯ ವ್ಯವಸ್ಥೆಯೂ ಇರಲಿಲ್ಲ. ಪ್ರತಿವರ್ಷ ಪ್ರತಿನಿಧಿಸುವ ತಂಡಗಳಿಗಷ್ಟೇ ಆಹ್ವಾನ ನೀಡಿದ್ದರಿಂದ ಕ್ರೀಡಾಪಟುಗಳ ಸಂಖ್ಯೆಯೂ ಕಡಿಮೆ ಇತ್ತು.
ಈ ಅವ್ಯವಸ್ಥೆ ವಿರೋಧಿಸಿ ಕ್ರೀಡಾಪಟುಗಳು ಮಧ್ಯಾಹ್ನವರೆಗೆ ಯಾವುದೇ ಕ್ರೀಡೆಗಳಲ್ಲಿ ಪಾಲ್ಗೊಳ್ಳಲಿಲ್ಲ. ಮಧ್ಯಾಹ್ನ ಕ್ರೀಡಾಂಗಣಕ್ಕೆ ಬಂದ ಕ್ರೀಡಾ ಇಲಾಖೆಯ ಪ್ರತಿನಿಧಿ ಮತ್ತು ದೈಹಿಕ ಶಿಕ್ಷಕರು ಕ್ರೀಡಾಪಟುಗಳನ್ನು ಮನವೋಲಿಸಿದರು. ಮಧ್ಯಾಹ್ನದ ಬಳಿಕ ಕ್ರೀಡೆಗಳು ಪ್ರಾರಂಭವಾದವು.
ಗೋವಿಂದಪುರ ತಾಂಡಾದ ಜಾವಲಿನ್ ಎಸೆತ ಕ್ರೀಡಾಪಟು ಎಲ್.ಅಶೋಕ ಪ್ರತಿಕ್ರಿಯಿಸಿ, ಕ್ರೀಡಾಂಗಣದಲ್ಲಿ ಕುಡಿಯುವ ನೀರು, ಊಟದ ವ್ಯವಸ್ಥೆ ಸೇರಿದಂತೆ ಯಾವ ಸೌಕರ್ಯವೂ ಇಲ್ಲ. ಕಳೆದ ಮೂರು ವರ್ಷಗಳಿಂದ ವಿಭಾಗ ಮಟ್ಟದಲ್ಲಿ ಪ್ರತಿನಿಧಿಸುತ್ತಿದ್ದರೂ ಸಾರಿಗೆ ಭತ್ಯೆ ನೀಡಿಲ್ಲ. ಪ್ರತಿವರ್ಷ ಬ್ಯಾಂಕ್ ಖಾತೆ ವಿವರ ಪಡೆಯುತ್ತಾರೆ, ಹಣ ನೀಡುತ್ತಿಲ್ಲ ಎಂದು ದೂರಿದರು.
ದೈಹಿಕ ಶಿಕ್ಷಣ ಅಧೀಕ್ಷಕ ರಫಿ ಅಹ್ಮದ್ ಖವಾಸ್ ಪ್ರತಿಕ್ರಿಯಿಸಿ, ಕ್ರೀಡಾ ಇಲಾಖೆಯವರ ಕೋರಿಕೆ ಮೇರೆಗೆ 30 ಜನ ದೈಹಿಕ ಶಿಕ್ಷಕರನ್ನು ಕ್ರೀಡಾಕೂಟಕ್ಕೆ ನಿಯೋಜಿಸಿದ್ದೇವೆ. ಉಳಿದೆಲ್ಲ ವ್ಯವಸ್ಥೆಯನ್ನು ಕ್ರೀಡಾ ಇಲಾಖೆಯವರು ಮಾಡಬೇಕು ಎಂದು ಹೇಳಿದರು.