ಮದ್ಯದಂಗಡಿ, ಢಾಬಾ ಸ್ಥಳಾಂತರಕ್ಕೆ ಆಗ್ರಹಿಸಿ ಪ್ರತಿಭಟನೆ
ಸಂಜೆವಾಣಿ ವಾರ್ತೆ
ಹೂವಿನಹಡಗಲಿ :ಸೆ,24-: ಪಟ್ಟಣದ ಮದಲಗಟ್ಟಿ ರಸ್ತೆಯ ಮೆಹಬೂಬ್ ನಗರದ ಜನವಸತಿ ಪ್ರದೇಶದಲ್ಲಿರುವ ಸರ್ಕಾರಿ ಎಂಎಸ್‍ಐಎಲ್ ಮದ್ಯದಂಗಡಿ, ಢಾಬಾಗಳನ್ನು ಬೇರೆಡೆ ಸ್ಥಳಾಂತರಿಸಲು  ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.
ಮದ್ಯದ ಅಂಗಡಿ, ಢಾಬಾಗಳು ಇರುವುದರಿಂದ ಈ ಪ್ರದೇಶದಲ್ಲಿ ನಿತ್ಯವೂ ಗಲಾಟೆಗಳು ಆಗುತ್ತಿವೆ. ಇಲ್ಲಿನ ನಿವಾಸಿಗಳು ನಿತ್ಯ ಕಿರಿಕಿರಿ ಅನುಭವಿಸುವಂತಾಗಿದೆ. ಸಮೀಪದ ಹೊಲ, ಗದ್ದೆಗಳಲ್ಲಿ ಕುಳಿತು ಮದ್ಯಪಾನ ಮಾಡಿ ಮದ್ಯದ ಬಾಟಲಿ, ಪ್ಲಾಸ್ಟಿಕ್ ತ್ಯಾಜ್ಯ ಬಿಸಾಡುವುದರಿಂದ ಕೃಷಿ ಚಟುವಟಿಕೆ ನಡೆಸಲು ತೊಂದರೆಯಾಗುತ್ತಿದೆ. ಇಲ್ಲಿನ ನಿವಾಸಿಗಳು ನೆಮ್ಮದಿ ಕಳೆದುಕೊಂಡು ಬದುಕುವಂತಾಗಿದೆ. ತಕ್ಷಣ ಸರ್ಕಾರಿ ಮದ್ಯದಂಗಡಿ, ಢಾಬಾಗಳನ್ನು ಬೇರೆಡೆ ಸ್ಥಳಾಂತರಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಕರವೇ ಜಿಲ್ಲಾಧ್ಯಕ್ಷ ತಾರಿಹಳ್ಳಿ ಹನುಮಂತಪ್ಪ, ತಾಲೂಕು ಅಧ್ಯಕ್ಷ ಜಿ. ಮೆಹಬೂಬ್ ಬಾಷಾ, ವಿವಿಧ ತಾಲೂಕುಗಳ ಅಧ್ಯಕ್ಷರಾದ ಕೆ.ಹಾಲೇಶ, ಎನ್.ಎಂ.ಗೌಸ್, ಜಿ.ನಾಗರಾಜ, ಶ್ರೀನಿವಾಸ, ಈ.ರಮೇಶ, ಸ್ಥಳೀಯ ಮುಖಂಡರಾದ ವಕೀಲ ಅಂಜಿನಪ್ಪ, ರಮೇಶ ಇಟಿಗಿ, ಬಳಿಗಾರ ಪಕೃದ್ದೀನ್ ಇತರರು ಉಪಸ್ಥಿತರಿದ್ದರು.
ಅಬಕಾರಿ ಇಲಾಖೆ ಅಧಿಕಾರಿಗಳು ಪ್ರತಿಭಟನೆಗೆ ಮುನ್ನವೇ ಸರ್ಕಾರಿ ಮದ್ಯದಂಗಡಿಗೆ ಬೀಗಮುದ್ರೆ ಹಾಕಿದ್ದರು.