ಪ್ರತಿಯೊಬ್ಬರ ಜೀವ ರಕ್ಷಣೆಗೆ ರಕ್ತ ಅತ್ಯವಶ್ಯಕ : ಗಜಾನನ ಮಂಗಸೂಳಿ
ಅಥಣಿ :ಮೇ.29- ರಕ್ತದಾನದ ಮೂಲಕ ಅಮೂಲ್ಯವಾದ ಜೀವ ರಕ್ಷಣೆಗೆ ಮುಂದಾಗಬೇಕು. ಜನರ ಜೀವ ರಕ್ಷಣೆಗೆ ರಕ್ತ ಅತ್ಯವಶ್ಯಕವಾಗಿದ್ದು, ರಕ್ತದ ಅವಶ್ಯಕತೆ ಇರುವ ವ್ಯಕ್ತಿಗಳಿಗೆ ರಕ್ತದಾನ ಮಾಡುವುದರ ಮೂಲಕ ರಕ್ತದ ಅವಶ್ಯಕತೆ ಇರುವವರಿಗೆ ರಕ್ತದಾನ ಮಾಡಬೇಕು ಎಂದು ಅಥಣಿ ರೋಟರಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಗಜಾನನ ಮಂಗಸೂಳಿ ಹೇಳಿದರು.
ಅವರು ಮಂಗಳವಾರ ಸ್ಥಳೀಯ ಹೆಸ್ಕಾಂ ಕಚೇರಿ ಆಭರಣದಲ್ಲಿ ರೋಟರಿ ಕ್ಲಬ್ ಅಥಣಿ ಹಾಗೂ ಹೆಸ್ಕಾಂ ಸಂಯುಕ್ತ ಆಶ್ರಯದಲ್ಲಿ ರೋಟರಿ ಸಂಸ್ಥೆಯ ರಜತ ಮಹೋತ್ಸವದ ಅಂಗವಾಗಿ ಉಚಿತ ರಕ್ತದ ಗುಂಪು ತಪಾಸಣೆ ಹಾಗೂ ಮಧುಮೇಹ ಪ್ರಮಾಣ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಒಂದು ಪ್ರದೇಶದ ಜನರ ಸರ್ವಾಂಗೀಣ ಅಭಿವದ್ಧಿಗೆ ಆರೋಗ್ಯ ಅತ್ಯಂತ ಅವಶ್ಯಕವಾಗಿದೆ. ಪ್ರತಿಯೊಬ್ಬರು ಆರೋಗ್ಯ ಬಗ್ಗೆ ಸೂಕ್ತ ಕಾಳಜಿ ವಹಿಸಬೇಕು. ಹಲವು ರೋಗಗಳನ್ನು ಪ್ರಾರಂಭದಲ್ಲಿಯೇ ಗುರುತಿಸಿದರೆ ಅವುಗಳನ್ನು ಗುಣಪಡಿಸಬಹುದು. ಜನರು ಮತ್ತು ಹೆಸ್ಕಾಂ ಕಂಪನಿಯ ಎಲ್ಲಾ ಸಿಬ್ಬಂದಿ ಹಾಗೂ ಲೈಮನ್ ಗಳು ಆರೋಗ್ಯದ ಬಗ್ಗೆ ಸದಾ ಜಾಗೃತರಾಗಿರಬೇಕು ಎಂದು ತಿಳಿಸಿದ ಅವರು ರೋಟರಿ ಸಂಸ್ಥೆಯನ್ನು ಅಥಣಿಯಲ್ಲಿ ಪ್ರಾರಂಭಿಸಿ 25 ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ ವಿವಿಧ ಸಾಮಾಜಿಕ ಸೇವೆಗಳ ಜೊತೆಗೆ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಕಳೆದ 25 ವರ್ಷಗಳಿಂದ ಅಥಣಿ ತಾಲೂಕಿನಲ್ಲಿ ರೋಟರಿ ಸಂಸ್ಥೆಯ ಮೂಲಕ ಅನೇಕ ಸಾಮಾಜಿಕ, ಶೈಕ್ಷಣಿಕ, ಆರೋಗ್ಯ, ಪರಿಸರ ಸಂರಕ್ಷಣೆ ಸೇರಿದಂತೆ ನೆರೆ ಸಂತ್ರಸ್ತರಿಗೆ ನೆರವಿನ ಹಸ್ತ ಚಾಚಲಾಗಿದೆ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಅಥಣಿ ರೋಟರಿ ಸಂಸ್ಥೆಯ ಅಧ್ಯಕ್ಷ ಅನೀಲರಾವ್ ದೇಶಪಾಂಡೆ ಮಾತನಾಡಿ ಮಾನವನಿಗೆ ಆಕಸ್ಮಿಕ ಸಂದರ್ಭಗಳಲ್ಲಿ ತುರ್ತಾಗಿ ಅಗತ್ಯವಾಗಿ ಬೇಕಾಗುವ ರಕ್ತವು ಅಮೂಲ್ಯ ಜೀವ ಉಳಿಸುವ ವಸ್ತುವಾಗಿದೆ. ಇದನ್ನರಿತು ಸಮಾಜದ ಪ್ರತಿಯೊಬ್ಬ ಆರೋಗ್ಯವಂತರು ರಕ್ತದಾನ ಮಾಡುವ ಮೂಲಕ ಮಾದರಿಯಾಗಬೇಕು. ಇಂದು ರೋಟರಿ ಸಂಸ್ಥೆಯ ಮೂಲಕ ಉಚಿತ ರಕ್ತದ ಗುಂಪು ತಪಾಸಣೆ ಹಾಗೂ ಸಕ್ಕರೆ ಕಾಯಿಲೆಯ ಪ್ರಮಾಣ ತಪಾಸಣೆ ಹಮ್ಮಿಕೊಳ್ಳಲಾಗಿದ್ದು, ಪ್ರತಿಯೊಬ್ಬರೂ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕರೆ ನೀಡಿದ ಅವರು ರೋಟರಿ ಸಂಸ್ಥೆಯ ಕಳೆದ 25 ವರ್ಷಗಳಿಂದ ಹಮ್ಮಿಕೊಂಡಿರುವ ಸಾಮಾಜಿಕ ಸೇವೆಗಳ ಕುರಿತು ತಿಳಿಸಿದರು.
ನಂತರ ನಡೆದ ಉಚಿತ ರಕ್ತ ತಪಾಸಣಾ ಶಿಬಿರದಲ್ಲಿ ಹೆಸ್ಕಾಂ ಕಚೇರಿಯ ಸಿಬ್ಬಂದಿ, ಲೈಮನ್ ಗಳು ಮತ್ತು ಸಾರ್ವಜನಿಕರು ಸೇರಿದಂತೆ 450 ಕ್ಕೂ ಜನರು ತಮ್ಮ ರಕ್ತದ ಗುಂಪು ಹಾಗೂ ಸಕ್ಕರೆ ಪ್ರಮಾಣವನ್ನು ತಪಾಸಣೆ ಮಾಡಿಸಿಕೊಂಡರು.
ಈ ಸಂದರ್ಭದಲ್ಲಿ ಹೆಸ್ಕಾಂ ಕಚೇರಿಯ ಮುಖ್ಯ ಅಭಿಯಂತ ಕೆ ಬಿ ಸಣ್ಣಕ್ಕಿ, ಸಹಾಯಕ ಅಭಿಯಂತರ ಜಿ ಎಸ್ ಅವಟಿ, ರೋಟರಿ ಕಾರ್ಯದರ್ಶಿ ಅರುಣ ಸೌದಾಗರ, ಡಾ. ಪಿ. ಪಿ. ಮಿರಜ, ಸಚಿನ್ ದೇಸಾಯಿ, ಭರತ್ ಸೋಮಯ್ಯ, ಸಂತೋಷ ಬೊಮ್ಮಣ್ಣವರ, ಶ್ರೀಕಾಂತ ಅಥಣಿ, ಹಣಮಂತ ಐಗಳಿ, ಎಸ್ಎಲ್ ತೋಟದ, ಎ ಜಿ ಹಜಾರಿ, ಸಿ ಆರ್ ಗುರುಸ್ವಾಮಿ, ಪಿ ಆರ್ ಸವದಿ, ಸಿ ಕೆ ಹಿರೇಮಠ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.