ಸಂಗೊಳ್ಳಿ ರಾಯಣ್ಣ, ಕನಕದಾಸರ ಭವನ ನಿರ್ಮಿಸಲು ಒತ್ತಾಯ
ಕಲಬುರಗಿ,ಮೇ.29-ಕಲಬುರಗಿಯ ಪ್ರತಿಯೊಂದು ತಾಲ್ಲೂಕು ಹಾಗೂ ಪ್ರತಿಯೊಂದು ಗ್ರಾಮ ಪಂಚಾಯತಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣ ಮತ್ತು ಭಕ್ತ ಶ್ರೇಷ್ಠ ಸಂತ ಕನಕದಾಸರ ಭವನ ನಿರ್ಮಿಸಲು ಮುಖ್ಯಮಂತ್ರಿಗಳಿಗೆ ಶಿಫಾರಸ್ಸು ಮಾಡಬೇಕು ಎಂದು ಹೈದ್ರಾಬಾದ ಕರ್ನಾಟಕ ಗೊಂಡ, ರಾಜಗೊಂಡ, ಕಾಡುಕುರುಬ, ಜೇನುಕುರುಬ (ಪ.ಪ) ಸಂಘದ ವಿಭಾಗೀಯ ಸಹ ಕಾರ್ಯದರ್ಶಿ ಶಿವಾಜಿ ಎಸ್.ಪಟ್ಟಣ ಹಾಗೂ ಕಾಂಗ್ರೆಸ್ ಯುವ ಮುಖಂಡ ಶರಣು ಕಲಶೆಟ್ಟಿ ಶಾಸಕ ಅಲ್ಲಮಪ್ರಭು ಪಾಟೀಲ ಅವರನ್ನು ಒತ್ತಾಯಿಸಿದ್ದಾರೆ.
ಈ ಸಂಬಂಧ ಶಾಸಕ ಅಲ್ಲಮಪ್ರಭು ಪಾಟೀಲ ಅವರಿಗೆ ಮನವಿಪತ್ರ ಸಲ್ಲಿಸಿರುವ ಅವರು, ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಹುತಾತ್ಮರಾದ ಸಂಗೊಳ್ಳಿ ರಾಯಣ್ಣ ಅವರ ಮತ್ತು ಭಕ್ತ ಶ್ರೇಷ್ಠ ಕನಕದಾಸರ ಹೆಸರು ಅಜರಾಮರವಾಗಿ ಉಳಿಯಬೇಕಾದರೆ ಸಮುದಾಯ ಭವನಗಳನ್ನು ಜಿಲ್ಲೆಯ ಪ್ರತಿಯೊಂದು ತಾಲ್ಲೂಕು ಮತ್ತು ಗ್ರಾಮ ಪಂಚಾಯತಿಗಳಲ್ಲಿ ನಿರ್ಮಿಸುವುದು ಅವಶ್ಯಕವಾಗಿದೆ. ಶಾಸಕರ ಅನುದಾನ ಇಲ್ಲವೆ ಮುಖ್ಯಮಂತ್ರಿಗಳ ಅನುದಾನದಲ್ಲಿ ಭವನ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.