ಶಾಂತಿಯುತ ವಾತಾವರಣ ನಿರ್ಮಾಣ ಎಲ್ಲರ ಜವಾಬ್ದಾರಿ
ಕಲಬುರಗಿ,ಮೇ.29:ಇಂದು ಇಡೀ ಜಗತ್ತೇ ‘ಶಾಂತಿ’ಯ ಮಂತ್ರ ಪಠಿಸಬೇಕಾಗಿದೆ. ಭಯೋತ್ಪಾದನೆ, ವೈಷಮ್ಯ, ಕೊಲೆ, ಸುಲಿಗೆ, ಭ್ರಷ್ಟಾಚಾರದಂತಹ ಅನೀತಿಗಳಿಂದ ಜಗತ್ತಿನಲ್ಲಿ ಅಶಾಂತಿ ವಾತಾವರಣ ಉಂಟಾಗುತ್ತಿದೆ. ಪ್ರತಿಯೊಬ್ಬರು ದೇವರ ಮಕ್ಕಳು, ನಾವೆಲ್ಲರು ಒಂದೇ ಎಂಬ ಭಾವನೆ ಮೂಡಬೇಕು. ಎಲ್ಲೆಡೆ ಶಾಂತಿಯುತ ವಾತಾವರಣ ನಿರ್ಮಾಣ ಮಾಡುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಉಪನ್ಯಾಸಕ,ಚಿಂತಕ ಎಚ್.ಬಿ.ಪಾಟೀಲ ಅಭಿಪ್ರಾಯಪಟ್ಟರು.
ನಗರದ ಖಾದ್ರಿ ಚೌಕ್‍ನ ‘ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ
ಜರುಗಿದ ‘ಅಂತಾರಾಷ್ಟ್ರೀಯ ಶಾಂತಿಪಾಲಕರ ದಿನಾಚರಣೆ’ಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಶಾಂತಿ ಎಂಬುದು ಕೇವಲ ಎರಡಕ್ಷರದ ಶಬ್ದವಲ್ಲ. ಅದರಲ್ಲಿ ಬಹುದೊಡ್ಡ ಶಕ್ತಿಯಿದೆ. ಆಧುನಿಕ ಕಾಲದ ಒತ್ತಡದ ಬದುಕಿನಲ್ಲಿಂದು ಮಾನವ ತನಗೆ ಲಭ್ಯವಿರುವುದನ್ನು ಅನುಭವಿಸಿ ನೆಮ್ಮದಿ ಹಾಗೂ ಶಾಂತಿಯಿಂದ ಜೀವಿಸುವದನ್ನು ಬಿಟ್ಟು, ಮತ್ತೊಬ್ಬರ ಜೊತೆಗೆ ಹೋಲಿಕೆ ಮಾಡುತ್ತಿರುವದರಿಂದ ಕೊರತೆಯೆನಿಸಿ, ಮಾನಸಿಕ ಅಶಾಂತಿಯನ್ನು ಎದುರಿಸುತ್ತಿದ್ದಾನೆ ಎಂದರು.
ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್ ಮಾತನಾಡಿ, ಮಾನವೀಯ ಮೌಲ್ಯಗಳು ನಶಿಸುತ್ತಿರುವುದೇ ಅಶಾಂತಿಗೆ ಪ್ರಮುಖವಾದ ಕಾರಣವಾಗಿದೆ. ಅನೇಕ ಮಹನೀಯರು ಶಾಂತಿ, ಅಹಿಂಸೆಯ ಮೌಲ್ಯವನ್ನು ಬೋಧಿಸಿದ್ದಾರೆ. ಅವುಗಳ ಪಾಲನೆ ಅಗತ್ಯವಾಗಿದೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಸೈಯದ್ ಹಮೀದ್, ಪ್ರಿಯಾಂಕಾ ಉಜಳಂಬಿ, ಪೂಜಾ ಜಮಾದಾರ, ಸಿಬ್ಬಂದಿ ಸೋಹೆಲ್ ಶೇಖ್ ಸೇರಿದಂತೆ ಇನ್ನಿತರರು ಇದ್ದರು.