ಬಸವೇಶ್ವರ ಬ್ಯಾಂಕ್‍ನಲ್ಲಿ ಅಕ್ಕ ಅನ್ನಪೂರ್ಣತಾಯಿಗೆ ನುಡಿ ನಮನ
ಬೀದರ್:ಮೇ.29: ನಗರದ ದೇವಿ ಕಾಲೊನಿಯ ಶ್ರೀ ಬಸವೇಶ್ವರ ಪತ್ತಿನ ಸಹಕಾರ ಬ್ಯಾಂಕ್‍ನಲ್ಲಿ ಲಿಂಗಾಯತ ಮಹಾ ಮಠದ ಅಕ್ಕ ಅನ್ನಪೂರ್ಣತಾಯಿ ಅವರಿಗೆ ಸೋಮವಾರ ನುಡಿ ನಮನ ಸಲ್ಲಿಸಲಾಯಿತು.
ಅಕ್ಕ ಅನ್ನಪೂರ್ಣತಾಯಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪ ಅರ್ಪಿಸಿ ಗೌರವ ಸಲ್ಲಿಸಲಾಯಿತು. ಒಂದು ನಿಮಿಷದ ಮೌನ ಆಚರಿಸಲಾಯಿತು.
ಬಸವೇಶ್ವರ ಬ್ಯಾಂಕ್ ಸ್ಥಾಪನೆಗೆ ಅಕ್ಕ ಅವರ ಪ್ರೇರಣೆ ಇತ್ತು. ಅವರ ನಿರಂತರ ಮಾರ್ಗದರ್ಶನದಿಂದ ಬಾಂಕ್ ಪ್ರಗತಿ ಸಾಧಿಸಿದೆ. ಅಕ್ಕನವರ ಅಗಲಿಕೆ ಅಪಾರ ದುಃಖ ಉಂಟು ಮಾಡಿದೆ ಎಂದು ನಿವೃತ್ತ ಎಂಜಿನಿಯರ್ ಸಿದ್ಧಯ್ಯ ಕಾವಡಿ ಭಾವುಕರಾದರು.
ಅಕ್ಕ ಅನ್ನಪೂರ್ಣತಾಯಿ ಅವರಿಗೆ ವಚನಗಳೇ ಜೀವಾಳವಾಗಿದ್ದವು. ಅಂತೆಯೇ ವಚನಗಳ ಸಂರಕ್ಷಣೆಯ ದಿನವನ್ನು ವಚನ ವಿಜಯೋತ್ಸವವಾಗಿ ಆಚರಿಸುತ್ತಿದ್ದರು ಎಂದು ಅಧ್ಯಕ್ಷತೆ ವಹಿಸಿದ್ದ ಬ್ಯಾಂಕ್ ಅಧ್ಯಕ್ಷ ರಮೇಶ ಮಠಪತಿ ಹೇಳಿದರು.
ಅಕ್ಕ ವಚನಗಳಿಗೆ ಪರಮೋಚ್ಛ ಗೌರವ ಸಲ್ಲಿಸುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದರು. ದಿನಾಲು ಐದು ವಚನ ಕಡ್ಡಾಯವಾಗಿ ಓದಬೇಕೆಂಬ ನಿಯಮ ಜಾರಿಗೆ ತಂದರು. ಇದರಿಂದ ಮನೆ ಮನೆಯಲ್ಲಿ ವಚನಗಳ ಓದು ಆರಂಭವಾಯಿತು. ಹಳ್ಳಿ-ಪಟ್ಟಣಗಳೆನ್ನದೆ ಓಡಾಡಿ ಬಸವ ತತ್ವ ಪ್ರವಚನ ಮಾಡಿ, ಬಸವಾದಿ ಶರಣರ ತತ್ವಗಳ ಪ್ರಸಾರಗೈದರು ಎಂದು ತಿಳಿಸಿದರು.
ಅವರ ಬಸವ ತತ್ವ ಪ್ರಚಾರದ ಕಾರ್ಯಕ್ಕೆ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಸೇರಿದಂತೆ ಅನೇಕ ಪದವಿ-ಪುರಸ್ಕಾರಗಳು ಸಂದಿವೆ ಎಂದು ಬಣ್ಣಿಸಿದರು.
ಅಕ್ಕನವರು ಲಿಂಗೈಕ್ಯರಾಗಿದ್ದರಿಂದ ಶರಣ ಲೋಕದಲ್ಲಿ ಶೂನ್ಯ ಆವರಿಸಿದಂತಾಗಿದೆ ಎಂದರು.
ಅಕ್ಕನವರು ಮೊದಲು ಶಿಕ್ಷಕಿಯಾಗಿದ್ದರು. ನಂತರ ಶಿಕ್ಷಕ ಹುದ್ದೆ ತ್ಯಜಿಸಿ ಸಮಾಜೋಧಾರ್ಮಿಕ ಸೇವೆಗೆ ಸಮರ್ಪಿಸಿಕೊಂಡಿದ್ದರು. ತಮ್ಮ ಕಾರ್ಯಗಳಿಂದ ಬೀದರ್ ಜಿಲ್ಲೆಗೆ ಕೀರ್ತಿ ತಂದಿದ್ದರು ಎಂದು ಚಿಂತಕ ಮಾಣಿಕಪ್ಪ ಗೋರನಾಳೆ ವರ್ಣಿಸಿದರು.
ಬ್ಯಾಂಕ್ ನಿರ್ದೇಶಕ ಓಂಕಾರ ಪಾಟೀಲ ಉಪಸ್ಥಿತರಿದ್ದರು. ಉದಯಕುಮಾರ ಲದ್ದೆ, ಸಿ.ಎಸ್. ಗಣಾಚಾರಿ ಪ್ರಾರ್ಥನೆಗೈದರು. ವ್ಯವಸ್ಥಾಪಕ ಜಗದೀಶ ಮೋಳಕೇರಿ ಸ್ವಾಗತಿಸಿ, ವಂದಿಸಿದರು.