ಗುಣಮಟ್ಟದ ಪಠ್ಯಕ್ರಮ ಪರಿಷ್ಕರಣೆಯಲ್ಲಿ ವಿಷಯ ತಜ್ಞರಿಗೆ ಪೂರ್ಣ ಸ್ವತಂತ್ರ
ಕಲಬುರಗಿ :ಮೇ.29:ಕರ್ನಾಟಕ ರಾಜ್ಯ ಸರ್ಕಾರ 2024-25ನೇ ಶೈಕ್ಷಣಿಕ ಸಾಲಿನಿಂದ ಪದವಿ ಕಾಲೇಜುಗಳ ಪಠ್ಯಕ್ರಮ ಕರಡಿನ ಮಾರ್ಗಸೂಚಿ ಅನ್ವಯ ಪಠ್ಯಕ್ರಮ ಪರಿಷ್ಕರಣೆ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಗುಣಮಟ್ಟದ ಪಠ್ಯಕ್ರಮ ಮತ್ತು ವಿನ್ಯಾಸ ರಚನೆಗೆ ಮಹತ್ವ ನೀಡಲಾಗಿದೆ. ಆಯಾ ಅಧ್ಯಯನ ಮಂಡಳಿ ವಿಷಯ ತಜ್ಞರಿಗೆ ಪೂರ್ಣ ಸ್ವತಂತ್ರ ನೀಡಲಾಗಿದೆ ಎಂದು ಕರ್ನಾಟಕ ರಾಜ್ಯ ಶಿಕ್ಷಣ ನೀತಿ ಆಯೋಗದ ಮುಖ್ಯಸ್ಥ ಪ್ರೊ. ಎಸ್. ಕೆ. ಥೋರಟ್ ಹೇಳಿದರು.
ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ ಹಾಗೂ ಕರ್ನಾಟಕ ಸರಕಾರದ ರಾಜ್ಯ ಶಿಕ್ಷಣ ನೀತಿ ಆಯೋಗ ಇವುಗಳ ಸಹಯೋಗದಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದ ಡಾ. ಬಿ. ಆರ್. ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ “ಪ್ರಾದೇಶಿಕ ಮಟ್ಟದ ಪಠ್ಯಕ್ರಮ ರಚನೆ” ಕುರಿತು ಕಾರ್ಯಾಗಾರವನ್ನು ಆನ್ ಲೈನ್ ಮೂಲಕ ಉದ್ಘಾಟಿಸಿ ಮಾತನಾಡಿದರು.
ಕಾಲೇಜುಗಳ ಅಧ್ಯಯನ ಮಂಡಳಿಗಳ ವಿಷಯ ಪರಿಣಿತರು ಪಠ್ಯಕ್ರಮದಲ್ಲಿ ಕ್ರಿಯಾತ್ಮಕತೆ ಮತ್ತು ಸೃಜನಾತ್ಮಕ ಕಲಿಕೆಗೆ ಆದ್ಯತೆ ನೀಡಬೇಕು. ಇದರಿಂದ ಗುಣಮಟ್ಟದ ಸಂಶೋಧನೆಗೆ ವಿನೂತನ ಆಯಾಮ ಸಿಗಲಿದ್ದು ವಿದ್ಯಾರ್ಥಿಗಳ ಕಲಿಕೆಗೆ ಉತ್ಸಾಹ ಸಿಗಲಿದೆ. ಜೊತೆಗೆ ಸೃಜನಶೀಲತೆ ಬೆಳೆಯುತ್ತದೆ. ಆದರಿಂದ ಎಲ್ಲಾ ವಿಶ್ವವಿದ್ಯಾಲಯಗಳ ಅಧ್ಯಯನ ಮಂಡಳಿ ಸದಸ್ಯರು ಸಕ್ರಿಯಗೊಳ್ಳಬೇಕಿದೆ. ಪಠ್ಯಕ್ರಮದಲ್ಲಿ ಸ್ಥಳೀಯ ಸಂಸ್ಕೃತಿ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಪ್ರಾಕೃತಿಕ ಪರಿಸರ ಅಂಶಗಳಿಗೆ ಒತ್ತು ನೀಡುವುದರಿಂದ ಕೌಶಲ್ಯ, ತರಬೇತಿ, ಪ್ರಾಯೋಗಿಕತೆ ಮತ್ತು ಉದ್ಯೋಗ ಪೂರ್ಣ ಪ್ರಜ್ಞೆಗೆ ಪ್ರೋತ್ಸಾಹ ಸಿಗಲಿದ್ದು, ಶಿಕ್ಷಣದ ಮೌಲ್ಯ ಹೆಚ್ಚಾಗುತ್ತದೆ ಎಂದರು.
ನವದೆಹಲಿಯ ಎನ್ಇಎಪಿಎ ಡೀಮ್ಡ್ ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕ ಪ್ರೊ. ಸುಧನ್ಸು ಭೂಷಣ ಮುಖ್ಯ ಅತಿಥಿಯಾಗಿ ಮಾತನಾಡಿ ಪದವಿ ಕಾಲೇಜುಗಳ ಪಠ್ಯಕ್ರಮ ರಚನೆ ಮತ್ತು ವಿನ್ಯಾಸ ಕರಡು ಸಿದ್ದವಾಗಿದ್ದು ಅದರ ಮಾರ್ಗಸೂಚಿ ನಿಯಮದಂತೆ ವಿಷಯ ಅಳವಡಿಕೆ, ಐಚ್ಚಿಕ ಮತ್ತು ಓಪನ್ ಎಲೆಕ್ಟಿವ್ ಆಯ್ಕೆಗೆ ಆಸಕ್ತಿ ವಹಿಸಬೇಕು. ವಿದ್ಯಾರ್ಥಿಗಳಿಗೆ ಉತ್ತಮ ವಿಷಯ ಆಯ್ಕೆ ಜೊತೆಗೆ ಯಾವುದೇ ಗೊಂದಲಗಳಿಗೆ ತೆರೆ ಎಳೆಯಬಹುದು. ಗುಣಮಟ್ಟದ ಶಿಕ್ಷಣ ಮತ್ತು ಪ್ರಯೋಗಶೀಲತೆಗೆ ಮಹತ್ವ ಸಿಗಬೇಕಾದರೆ ಉದ್ಯೋಗ ಅವಕಾಶ, ತಾಂತ್ರಿಕ ಕೌಶಲ್ಯ ಮತ್ತು ತರಬೇತಿ ಪಡೆದು ವಿದ್ಯಾರ್ಥಿಗಳು ಉತ್ತಮ ಭವಿಷ್ಯ ಕಂಡುಕೊಳ್ಳಲು ರಾಜ್ಯ ಶಿಕ್ಷಣ ನೀತಿಯಿಂದ ಸಾಧ್ಯವಾಗಲಿದೆ. ಗುಣಮಟ್ಟದ ಶಿಕ್ಷಣದಲ್ಲಿ ವೈಜ್ಞಾನಿಕತೆ ತರಬೇಕಾದರೆ ಆಂತರಿಕ ವೃತ್ತಿ ತರಬೇತಿ, ಪ್ರೊಜೆಕ್ಟ, ಸಂವಿಧಾನ ಪ್ರಸ್ತುತತೆ ಅಧ್ಯಯನ ಕಲಿಕೆಗೆ ಅವಕಾಶ ಸಿಗಲಿದೆ. ವಿಷಯಗಳಲ್ಲಿನ ಬಹುಶಿಸ್ತೀಯ ಅಧ್ಯಯನ ಮತ್ತು ಸಂಶೋಧನೆಗೆ ಮಹತ್ವ ಬರಲಿದೆ. ಆದರಿಂದ ಸಂಸ್ಥೆಗಳ ಪಾಲುದಾರಿಕೆಯೊಂದಿಗೆ ಕೈಗಾರಿಕೆ ಮತ್ತು ಉದ್ಯಮಗಳ ಪರಿಣಿತರ ಅಭಿಪ್ರಾಯ ಅಳವಡಿಸಿ ಅತ್ಯುತ್ತಮ ಪಠ್ಯಕ್ರಮ ರಚಿಸಿ ಸರ್ಕಾರಕ್ಕೆ ಸಲ್ಲಿಸಬೇಕಿದೆ. ಪಠ್ಯದಲ್ಲಿ ವಿಷಯಗಳಿಗೆ ಆದ್ಯತೆ ನೀಡಬೇಕು ಎಂದರು.
ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ದಯಾನಂದ ಅಗಸರ ಅಧ್ಯಕ್ಷತೆ ವಹಿಸಿ ಮಾತನಾಡಿ ರಾಜ್ಯ, ರಾಷ್ಟ್ರ ಹಾಗೂ ಜಾಗತಿಕ ಮಟ್ಟದ ಶಿಕ್ಷಣದ ಹಿನ್ನೆಲೆಯಲ್ಲಿ ಅನುಷ್ಠಾನಗೊಳಿಸುತ್ತಿರುವ ಶಿಕ್ಷಣ ವ್ಯವಸ್ಥೆ ಅದರಲ್ಲೂ ವಿಶೇಷವಾಗಿ ಉನ್ನತ ಶಿಕ್ಷಣ ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಪಠ್ಯ ರಚನೆ, ಪಠ್ಯ ವಿಷಯ ಅಂಶಗಳು, ಮೌಲ್ಯಮಾಪನ ಜೊತೆಗೆ ಬಹು ವಿಷಯಾಧಾರಿತ ಅಂಶಗಳ ಪ್ರಸ್ತುತತೆಯೊಂದಿಗೆ ಹೇಗಿರಬೇಕು ಎಂಬುದನ್ನು ಕುರಿತು ವಿವರಿಸಿದರು.
ಗುಲಬರ್ಗಾ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಬಿ. ಜಿ. ಮೂಲಿಮನಿ ಮಾತನಾಡಿ ಪಠ್ಯಕ್ರಮ ರಚನೆಯಲ್ಲಿ ವೈಜ್ಞಾನಿಕತೆ ಅಳವಡಿಕೆಯಿಂದ ಸೃಜನಶೀಲತೆ ತರಬಹುದು. ಅದಕ್ಕೆ ಪೂರಕವಾಗಿ ಸಂಶೋಧನೆಗೂ ಆದ್ಯತೆ ಸಿಗಬೇಕು. ಸಂಶೋಧನೆ ಕೈಗೊಳ್ಳುವ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿದಂತೆ ಆಗುತ್ತದೆ. ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೆರವು ಸಿಗಲಿದ್ದು, ಗುಣಮಟ್ಟದ ಸಂಶೋಧನೆಗೆ ವಿದ್ಯಾರ್ಥಿಗಳು ತೊಡಗಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ರಾಜ್ಯ ಶಿಕ್ಷಣ ನೀತಿ ಆಯೋಗದ ಸದಸ್ಯ ಕಾರ್ಯದರ್ಶಿ ಡಾ. ಭಾಗ್ಯವನ ಮೂಡಿಗೌಡ್ರ ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತವಿಕವಾಗಿ ಮಾತನಾಡಿ ಪಠ್ಯಕ್ರಮ ವಿನ್ಯಾಸ ಕುರಿತು ಮಾತನಾಡಿ ಪಠ್ಯಕ್ರಮದಲ್ಲಿ ಸ್ಥಳೀಯ ಸಾಮಾಜಿಕ, ಆರ್ಥಿಕ, ಐತಿಹಾಸಿಕ, ಸಾಂಸ್ಕೃತಿಕ ಮತ್ತು ಪ್ರಾಕೃತಿಕ ಅಂಶಗಳನ್ನು ಒಳಗೊಂಡಿರಬೇಕು. ಅದರ ಭಾಗವಾಗಿ ಶಿಕ್ಷಣ ವ್ಯವಸ್ಥೆಯಲ್ಲಿ ಸಣ್ಣ ಬದಲಾವಣೆ ತರುವ ಉದ್ದೇಶದಿಂದ ಈ ಕಾರ್ಯಾಗಾರವನ್ನು ರೂಪಿಸಿ ಆಯೋಜಿಸಲಾಗಿದೆ ಎಂದರು. ವೇದಿಕೆಯಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದ ಕುಲಸಚಿವೆ ಪ್ರೊ. ಮೇಧಾವಿನಿ ಕಟ್ಟಿ, ಕಾರ್ಯಕ್ರಮ ಸಂಯೋಜಕ ಪ್ರೊ. ರಾಯಬಾಗಕರ್, ಕಾಲೇಜು ಅಭಿವೃದ್ಧಿ ಮಂಡಳಿ ಸದಸ್ಯ ಪ್ರೊ. ಎನ್. ಬಿ. ನಡುವಿನಮನಿ, ಗುಲಬರ್ಗಾ ವಿಶ್ವವಿದ್ಯಾಲಯದ ಎನ್ಇಪಿ ಸಂಯೋಜಕ. ಪ್ರೊ. ಕೆ. ವಿಜಯಕುಮಾರ್, ಗ್ರಂಥಪಾಲಕ ಡಾ. ಸುರೇಶ ಜಂಗೆ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಗುಲಬರ್ಗಾ, ರಾಯಚೂರು, ಬಳ್ಳಾರಿ, ಬೀದರ್, ಕೊಪ್ಪಳ ಹಾಗೂ ಹಂಪಿ ವಿಶ್ವವಿದ್ಯಾಲಯಗಳ ಅಧಿಕಾರಿಗಳು, ಡೀನರುಗಳು, ಎಲ್ಲಾ ವಿವಿಗಳ ಅಧ್ಯಯನ ಮಂಡಳಿ ಸದಸ್ಯರುಗಳು, ಎಐಡಿಎಸ್ ಸಿ ವಿದ್ಯಾರ್ಥಿ ಒಕ್ಕೂಟ, ಎಬಿವಿಪಿ ಒಕ್ಕೂಟ, ಶಿಕ್ಷಕರ ಸಂಘದ ಪದಾಧಿಕಾರಿಗಳು, ಕೈಗಾರಿಕೊದ್ಯಮಿಗಳು, ಉದ್ಯಮದಾರರು, ಶಿಕ್ಷಣ ತಜ್ಞರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸೇರಿದಂತೆ 214 ಜನ ಪ್ರತಿನಿಧಿಗಳು ಭಾಗವಹಿಸಿದ್ದರು. ಆಡಳಿತ ವಿಶೇಷಾಧಿಕಾರಿ ಪ್ರೊ. ಚಂದ್ರಕಾಂತ ಕೆಳಮನಿ ನಿರೂಪಿಸಿದರು.
ಪದವಿ ಪಠ್ಯಕ್ರಮದ ಪುನರ್ ರಚನೆಗೆ ಸಕಾರಾತ್ಮಕ ವಾತಾವರಣ ಸೃಷ್ಟಿಸುವುದು. ಉದ್ಯೋಗಾವಕಾಶ, ಅನ್ವಯಿಕ ಜ್ಞಾನದಂತಹ ಬಹು ಶಿಸ್ತೀಯ ವಿಷಯ ಅಧ್ಯಯನ ಉದ್ದೇಶಗಳನ್ನು ಪೂರೈಕೆಗೆ ಪಠ್ಯಕ್ರಮ ವಿನ್ಯಾಸಗೊಳಿಸಲು ಎಲ್ಲಾ ಅಧ್ಯಯನ ಮಂಡಳಿಗಳನ್ನು ಸಕ್ರಿಯಗೊಳಿಸಬೇಕಿದೆ. ವೃತ್ತಿ ಕೌಶಲ್ಯ, ಸಾಂವಿಧಾನಿಕ ಮೌಲ್ಯಗಳು, ಸೃಜನಶೀಲ ಮತ್ತು ವಿಮರ್ಶಾತ್ಮಕ ಪ್ರಜ್ಞೆ, ಬಹುಶಿಸ್ತೀಯ, ಇತ್ಯಾದಿ ವಿಷಯಗಳನ್ನು ಒಳಗೊಂಡ ಅಂಶಗಳನ್ನು ಸಮಗ್ರವಾಗಿ ಚರ್ಚಿಸಲಾಗಿದೆ. ತಜ್ಞರಿಂದ ಮಹತ್ವದ ಅಭಿಪ್ರಾಯ, ಸಲಹೆ ಸೂಚನೆ ದೊರೆತಿರುವ ಹಿನ್ನೆಲೆಯಲ್ಲಿ ಮೌಲ್ಯಯುತ ಮತ್ತು ಗುಣಮಟ್ಟದ ಪಠ್ಯರಚನೆಗೆ ಸಹಾಯಕವಾಗಲಿದೆ.
ಪ್ರೊ. ದಯಾನಂದ ಅಗಸರ
ಕುಲಪತಿ
ಗುಲಬರ್ಗಾ ವಿಶ್ವವಿದ್ಯಾಲಯ