ಸಚಿವ ನಾಗೇಂದ್ರರ ಮೇಲಿನ ಆರೋಪ ನಿರಾಧಾರ:  ಯತೀಂದ್ರಗೌಡ
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮೇ.29: ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಕ್ರೀಡಾ ಮತ್ತು ಯುವಜನ ಸಬಲೀಕರಣ ಇಲಾಖೆಗಳ ಸಚಿವರು, ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರ ಮೇಲೆ ಬಿಜೆಪಿಯವರು ಮಾಡುತ್ತಿರುವ ಆರೋಪ ನಿರಾಧಾರವಾದುದು ಎಂದು ಜವಳಿ ಅಭಿವೃದ್ಧಿ ನಿಗಮದ ಮಾಜಿ ನಿರ್ದೇಶಕರು, ಜಿಲ್ಲಾ ಕಾಂಗ್ರೆಸ್ ಸಮಿತಿಯ ಮಾಜಿ ಉಪಾಧ್ಯಕ್ಷ
ಜಿ.ಯತೀಂದ್ರ ಗೌಡ ಹೇಳಿದ್ದಾರೆ.
ಅವರು ಇಂದು ಈ ಕುರಿತು ಪತ್ರಿಕಾ ಹೇಳಿಕೆ ನೀಡಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧಿಕಾರಿಗಳು ಎಸಗಿರುವ ವಂಚನೆ ಪ್ರಕರಣಕ್ಕೂ ಸಚಿವ ಬಿ.ನಾಗೇಂದ್ರ ಅವರಿಗೂ ಯಾವುದೇ ರೀತಿಯ ಸಂಬಂಧ ಇಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿ ಈವರೆಗೆ ಬಂದಿರುವ ಪತ್ರಿಕಾ ವರದಿಗಳು, ಆತ್ಮಹತ್ಯೆ ಮಾಡಿಕೊಂಡಿರುವ ಅಧಿಕಾರಿಯ ಡೆತ್ ನೋಟ್ ಹಾಗೂ ಮೃತನ ಪತ್ನಿ ನೀಡಿರುವ ದೂರಿನಲ್ಲಿ ಸಚಿವ ಬಿ.ನಾಗೇಂದ್ರ ಅವರ ಹೆಸರು ಪ್ರಸ್ತಾಪಿಸಿರುವುದಿಲ್ಲ. ನಿಗಮದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಹಾಗೂ ಅಧಿಕಾರಿಯ ಸಾವಿಗೆ ಸಚಿವ ಬಿ.ನಾಗೇಂದ್ರ ಅವರು ಯಾವುದೇ ರೀತಿಯಲ್ಲಿ ಕಾರಣೀಕರ್ತರಲ್ಲ ಎಂದಿದ್ದಾರೆ.
ಮೃತ ವ್ಯಕ್ತಿಯ ಅಧಿಕಾರಿಯ ತಾನು ಸಾಯುವ ಮುನ್ನ ಬರೆದ ಡೆತ್ ನೋಟಿನಲ್ಲಿ ಆತನ ಸಾವಿಗೆ ಯಾರು ಕಾರಣ ಎಂದು ನೇರವಾಗಿ ನಿಗಮದ ಇಬ್ಬರು ಅಧಿಕಾರಿಗಳು ಹಾಗೂ ಒಬ್ಬ ಬ್ಯಾಂಕ್ ಮ್ಯಾನೇಜರ್ ಅವರ ಒಟ್ಟು ಮೂವರ ಹೆಸರನ್ನು ಸ್ಪಷ್ಟವಾಗಿ ಬರೆದಿದ್ದು, ಅನಗತ್ಯವಾಗಿ ಸಚಿವರಾದ ಬಿ.ನಾಗೇಂದ್ರ ಅವರ ಹೆಸರನ್ನು ಹಾಳು ಮಾಡಲು, ಕಾಂಗ್ರೆಸ್ ಸರ್ಕಾರಕ್ಕೆ ಮಸಿ ಬಳಿಯಲು ಬಿಜೆಪಿಯ ಮುಖಂಡರು ಪ್ರಯತ್ನ ನಡೆಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ತಾವು ಯಾವುದೇ ಮೌಖಿಕ ಆದೇಶ ನೀಡಿಲ್ಲ, ಅವ್ಯವಹಾರ ನಡೆದಿರುವುದು ನಿಜ, ಆದರೆ ಇದರಲ್ಲಿ ತಮ್ಮ ಪಾತ್ರವಿಲ್ಲ ಎಂದು ಸಚಿವ ನಾಗೇಂದ್ರ ಅವರು ತಿಳಿಸಿದ್ದು, ಈ ಪ್ರಕರಣದ ತನಿಖೆಯು ಪಾರದರ್ಶಕವಾಗಿ ನಡೆದು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸರ್ಕಾರ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆಂದಿದ್ದಾರೆ.