ದಲ್ಲಾಳಿಗಳ ಹಾವಳಿ ತಪ್ಪಿಸಲು ಕ್ರಮ
ನವಲಗುಂದ,ಮೇ29: ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ `ದನಕರು, ಕುರಿ ಮೇಕೆಗಳ ಮಾರಾಟಕ್ಕೆ ರೈತರಿಗೆ ತೊಂದರೆಯಾಗದಂತೆ ಹಾಗೂ ದಲ್ಲಾಳಿಗಳ ಹಾವಳಿ ತಪ್ಪಿಸಲು ಕ್ರಮ ಕೈಗೊಳ್ಳಲಾಗುವುದು. ಇದಕ್ಕೆ ರೈತರು ನಮ್ಮೊಂದಿಗೆ ಕೈ ಜೋಡಿಸಬೇಕು’ ಎಂದು ಮುಖ್ಯ ಪಶುವೈದ್ಯಾಧಿಕಾರಿ (ಆಡಳಿತ) ಡಾ.ಮನೋಹರ ದ್ಯಾಬೇರಿ ಹೇಳಿದರು.
ನಗರದ ಪಶು ಆಸ್ಪತ್ರೆಯಲ್ಲಿ ರೈತರೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, `ಎಪಿಎಂಸಿ ಮಾರುಕಟ್ಟೆಯಲ್ಲಿ ನಡೆಯುವ ಸಂತೆಯಲ್ಲಿ ದಲ್ಲಾಳಿಗಳ ಹಾವಳಿ ಹೆಚ್ಚಾಗಿ ರೈತರ ಜಾನುವಾರುಗಳಿಗೆ ಬೆಲೆ ಸಿಗುತ್ತಿಲ್ಲ ಎಂದು ರೈತರು ನೀಡಿದ ಮನವಿ ಗಮನಿಸಿದ್ದೇನೆ’ ಎಂದರು.
`ಸಮಸ್ಯೆ ಕುರಿತು ತಹಶೀಲ್ದಾರ್ ಅವರೊಂದಿಗೆ ಸ್ಥಾನಿಕವಾಗಿ ಸ್ಥಳ ಪರಿಶೀಲನೆ ಮಾಡಲಾಗುವುದು. ರೈತರು ಅನ್ಯಾಯವಾಗದಂತೆ ಮತ್ತು ತಮ್ಮ ಇಚ್ಛೆಯನುಸಾರ ಉತ್ತಮ ಬೆಲೆಗೆ ಜಾನುವಾರು ಮಾರಾಟ ಮಾಡಬಹುದಾಗಿದೆ’ ಎಂದರು.
ಇದೇ ವೇಳೆ ಪಶು ಸಂಗೋಪನೆ ಇಲಾಖೆ ಉಪನಿರ್ದೇಶಕ ಡಾ. ರವಿ ಸಾಲಿಗೌಡರ ವಿಡಿಯೊ ಕರೆ ಮೂಲಕ ಮಾತನಾಡಿ, `ನವಲಗುಂದ ಎಪಿಎಂಸಿ ಉಪ ಮಾರುಕಟ್ಟೆ ಪ್ರಾಂಗಣದಲ್ಲಿ ಪ್ರತಿ ಮಂಗಳವಾರ, ಗುರುವಾರ ನಡೆಯುವ ಜಾನುವಾರು ಹಾಗೂ ಕುರಿ ಸಂತೆಯಲ್ಲಿ ಯಾವುದೇ ದಲ್ಲಾಳಿಗಳ ಹಾವಳಿಯಾಗದಂತೆ ಕ್ರಮ ವಹಿಸಲಾಗುವುದು. ಈ ಕುರಿತು ಜಿಲ್ಲಾಧಿಕಾರಿಗಳ ಗಮನಕ್ಕೂ ತರಲಾಗುವುದು’ ಎಂದರು.
ಮಹದಾಯಿ ಹೋರಾಟ ಸಮಿತಿ ಅಧ್ಯಕ್ಷ ಯಲ್ಲಪ್ಪ ದಾಡಿಬಾಯಿ, ಮಲ್ಲಪ್ಪ ಹಳ್ಳದ, ಸಿದ್ದಪ್ಪ ಹೂಗಾರ, ಪುರಸಭೆ ಮಾಜಿ ಸದಸ್ಯ ನಿಂಗಪ್ಪ ಸುಳ್ಳದ, ಸಿದ್ದಪ್ಪ ಲಕ್ಕಣ್ಣವರ, ಮುದಿಯಪ್ಪ ಡಾಲಿನ, ರಾಯಪ್ಪ ಕೊಳಲಿನ, ಆರ್.ಬಿ. ಪಾಟೀಲ, ಗುರುನಾಥ, ಸುರೇಶ ಮೂಗಣ್ಣವರ, ಎಸ್.ಬಿ. ಪಾಟೀಲ, ನಾಗರಾಜ ದೊಡಮನಿ, ಸಂತೋಷ ನನ್ನೇನಾಯಕರ, ಗುರುಪ್ಪ ಗಡ್ಡಿ, ಸಿದ್ದಪ್ಪ ತೋಟದ, ತಿಪ್ಪಣ್ಣ ಬಳ್ಳೋಳ್ಳಿ, ಯಲ್ಲಪ್ಪ ಡಾಲಿನ, ಗಂಗಪ್ಪ ಸಂಗಟಿ ಇದ್ದರು.