ಪೂರ್ವಭಾವಿ ಸಭೆ
ಲಕ್ಷ್ಮೇಶ್ವರ,ಮೇ29: ಪಟ್ಟಣದಲ್ಲಿ ಕಳೆದ 57 ವರ್ಷಗಳಿಂದ ಅಸ್ತಮಾ ರೋಗಿಗಳಿಗೆ ಉಚಿತವಾಗಿ ಮಂತ್ರೌಷಧಿಯನ್ನು ವಿತರಿಸುವ ಮೂಲಕ ಲಕ್ಷ್ಮೇಶ್ವರದ ಹೆಸರಿನ ಕೀರ್ತಿಯನ್ನು ದೇಶದ ಉದ್ದಗಲಕ್ಕೂ ಹಬ್ಬುವಂತೆ ಮಾಡಿದ್ದ ದಿ.ಡಾ.ವೈದ್ಯಬಾಬುರಾವ್ ಕುಲಕರ್ಣಿ ಇವರ ಸೇವೆ ಅಪಾರವಾಗಿದ್ದು, ಅವರು ಹಾಕಿಕೊಟ್ಟ ಮಾರ್ಗದಲ್ಲಿ ಈ ಉಚಿತ ಔಷಧಿ ವಿತರಣೆ ಕಾರ್ಯಕ್ರಮವನ್ನ ನಡೆಸಿಕೊಂಡು ಹೋಗಲಾಗುತ್ತಿದ್ದು, ಈ ವರ್ಷದ ಔಷಧಿಗಾಗಿ ಬರುವ ಜನರಿಗೆ ಇಲ್ಲಿ ಅವಶ್ಯವಿರುವ ವ್ಯವಸ್ಥೆಯನ್ನು ಮಾಡುವ ಮೂಲಕ ಎಲ್ಲರೂ ಯಶಸ್ವಿಗೊಳಿಸಬೇಕು ಎಂದು ಹಿರಿಯ ಮುಖಂಡ ಗೋಪಾಲ ಪಡ್ನೀಸ್ ಹೇಳಿದರು.
ಅವರು ದಿ. ವೈದ್ಯ ಬಾಬುರಾವ್ ಕುಲಕರ್ಣಿಯವರ ನಿವಾಸದಲ್ಲಿ 58 ನೇ ವರ್ಷದ ಉಚಿತ ಅಸ್ತಮಾ ಔಷಧಿವಿತರಣಾ ಕಾರ್ಯಕ್ರಮದ ಅಂಗವಾಗಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡುತ್ತಿದ್ದರು. ಈ ಬಾರಿ ಜೂನ್ 8 ರಂದು ಶನಿವಾರ ಮುಂಜಾನೆ 7.11 ಕ್ಕೆ ಮೃಗಶಿರಾ ಮಳೆಯ ಪ್ರವೇಶ ಕಾಲದಲ್ಲಿ ಡಾ.ಹರೀಶ ಕುಲಕರ್ಣಿ ಅವರ ನೇತೃತ್ವದಲ್ಲಿ ಅಸ್ತಮಾ ಔಷದಿಯನ್ನು ಬೆಳ್ಳಟ್ಟಿ ರಾಮಲಿಂಗೇಶ್ವರಮಠದ ಶ್ರೀ ಬಸವರಾಜ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಉಚಿತವಾಗಿ ವಿತರಿಸಲಾಗುವದು, ಲಕ್ಷ್ಮೇಶ್ವರ ಸರಕಾರಿ ಪ್ರಾಥಮಿಕ ಶಾಲೆಯ ನಂ.1 ರ ಆವರಣದಲ್ಲಿ 58 ನೇ ವರ್ಷದ ಅಸ್ಥಮಾ ಯಜ್ಞ ನಡೆಯಲಿದ್ದು, ಆಗಮಿಸುವ ರೋಗಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಂಡು ಹೋಗುವದು ಎಲ್ಲರ ಕರ್ತವ್ಯದ ಜೊತೆಗೆ ಇದೊಂದು ಸೇವೆಯ ರೂಪದಲ್ಲಿ ಯಶಸ್ವಿಗೊಳಿಸಬೇಕಾಗಿದೆ ಎಂದು ಹೇಳಿದರು.
ಪುರಸಭೆ ಮಾಜಿ ಅಧ್ಯಕ್ಷರುಗಳಾದ ವಿರುಪಾಕ್ಷಪ್ಪ ಪಡಗೇರಿ ಮತ್ತು ಎಂ.ಆರ್.ಪಾಟೀಲ ಮಾತನಾಡಿ ಇಂತಹದೊಂದು ಮಹತ್ವದ ಕಾರ್ಯ ಜರುಗಬೇಕಾದರೆ ಅದಕ್ಕೆ ಸಮಾಜದ ಸಹಕಾರ ಅತಿ ಮುಖ್ಯವಾಗಿರುತ್ತದೆ. ಈ ನಿಟ್ಟಿನಲ್ಲಿ ಲಕ್ಷ್ಮೇಶ್ವರದ ಸಮಸ್ತ ಜನರು ಕಳೆದ 58 ವರ್ಷಗಳಿಂದ ಈ ಅಸ್ತಮಾ ಔಷಧಿ ವಿತರಣೆ ಕಾರ್ಯಕ್ಕೆ ಸಹಾಯ ಸಹಕಾರ ನೀಡುತ್ತಿರುವದರಿಂದ ಇದೊಂದು ದೊಡ್ಡ ಕಾರ್ಯಕ್ರಮವಾಗಿ ನಡೆಯಲು ಸಾಧ್ಯವಾಗಿದ್ದು, ಬರುವ ಜನರಿಗೆ ಉತ್ತಮವಾಗಿ ವ್ಯವಸ್ಥೆ ಮಾಡುವದಕ್ಕೆ ಇಲ್ಲಿನ ಹಾಲಮತ ಸಮಾಜ ಬಾಂಧವರು ಅನೇಕ ಸಂಘ ಸಂಸ್ಥೆಗಳು, ಯುವಕರು ಶ್ರಮಿಸುತ್ತಿದ್ದು ಇದೊಂದು ಧಾರ್ಮಿಕ ಕಾರ್ಯಕ್ರಮವಾಗಿ ಬೆಳೆಯುತ್ತಿದ್ದು, ಪುರಸಭೆಯಿಂದ ಅವಶ್ಯಕ ಸೇವೆಗಳನ್ನು ದೊರಕಿಸುವದು, ಬಂದ ಜನರಿಗೆ ಸರಿಯಾಗಿ ಔಷಧಿ ದೊರೆಯುವಂತೆ ಶಿಸ್ತಿನಿಂದ ವ್ಯವಸ್ಥೆ ಮಾಡಿಸುವ ನಿಟ್ಟಿನಲ್ಲಿ ಕೆಲಸ ಮಾಡುವದಾಗಿ ಹೇಳಿದರು.
ಪೂರ್ವಭಾವಿ ಸಭೆಯ ಅಧ್ಯಕ್ಷತೆಯನ್ನು ಪಲ್ಲಣ್ಣನವರು ಕುಲಕರ್ಣಿ ವಹಿಸಿದ್ದರು. ಕೃಷ್ಣ ಕುಲಕರ್ಣಿ, ಅನಿಲ ಕುಲಕರ್ಣಿ, ಡಾ.ಹರೀಶ ಕುಲಕರ್ಣಿ, ನಿಂಗಪ್ಪ ತಹಸೀಲ್ದಾರ, ನಿಂಗಪ್ಪ ಗೊರವರ, ಪಾಪಣ್ಣ ಬನ್ನಿ, ಪುಟ್ಟಪ್ಪ ಕೋರಿ, ಬಸಪ್ಪ ನೀಲಪ್ಪನವರ, ನೀಲಪ್ಪ ಬಾಲೇಹೊಸೂರು, ಫಕ್ಕೀರೇಶ, ಗಂಗಾಧರ, ಮುದಕಪ್ಪ ಬನ್ನಿ, ಯಲ್ಲಪ್ಪ ಬನ್ನಿ, ನಿಂಗಪ್ಪ ಕಲ್ಯಾಣಿ ಸೇರಿದಂತೆ ಅನೇಕರಿದ್ದರು.