ಶಿಕ್ಷಣ ಕ್ಷೇತ್ರಕ್ಕೆ ಕಾಂಗ್ರೆಸ್ಸಿನ ಕೊಡುಗೆ ಶೂನ್ಯ
ಸಂಜೆ ವಾಣಿ ವಾರ್ತೆ
ಕೊಟ್ಟೂರು, ಮೇ.29 : ಕಾಂಗ್ರೆಸ್  ಚುನಾವಣೆಯ ಮುಂಚೆ  5 ಗ್ಯಾರಂಟಿ ಗಳನ್ನು ಘೋಷಣೆ ಮಾಡಿತ್ತು. ಇದರಲ್ಲಿ ಪದವಿ ಮುಗಿದ ಎಲ್ಲಾ  ವಿದ್ಯಾರ್ಥಿಗಳಿಗೆ ಯುವ ನಿಧಿ ನೀಡುವುದಾಗಿ ಭರವಸೆ ನೀಡಿತ್ತು ಸರ್ಕಾರ ರಚನೆಯಾಗುತ್ತಿದ್ದಂತೆ  ವಿದ್ಯಾರ್ಥಿಗಳಿಗೆ ನೀತಿ ನಿಯಮವನ್ನು ರೂಪಿಸಿತು. ಈ ನೀತಿ ನಿಯಮಗಳಂತೆ ಪದವಿ ಪೂರೈಸಿದ ಯಾವ ವಿದ್ಯಾರ್ಥಿಗೂ ಯುವ ನಿಧಿಯ ಹಣವನ್ನು ಸಂದಾಯ ಮಾಡಿಲ್ಲ, ಸುಖ ಸುಮ್ಮನೆ ಜಾಹಿರಾತು ನೀಡುತ್ತಿದ್ದಾರೆ. ವಿದ್ಯಾರ್ಥಿಗಳ ನಿರುದ್ಯೋಗದ ಸಮಸ್ಯೆಯನ್ನು ಆಲಿಸುತ್ತಿಲ್ಲ, ಒಟ್ಟಾರೆಯಾಗಿ ಶಿಕ್ಷಣ ಕ್ಷೇತ್ರವನ್ನು  ಕಾಂಗ್ರೆಸ್ ಕಡೆಗಣಿಸುತ್ತಿದೆ ಎಂದು ವಾಯುವ್ಯ ಶಿಕ್ಷಕರ ಕ್ಷೇತ್ರದ ಮಾಜಿ ವಿಧಾನಪರಿಷತ್ ಸದಸ್ಯ ಅರುಣ್ ಶಹಾಪುರ ತಿಳಿಸಿದರು.
ಪಟ್ಟಣದಲ್ಲಿ ಮಂಗಳವಾರ ಭರಮನ ಗೌಡ ಪಾಟೀಲ್ ರವರ ನಿವಾಸದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ  ಈಶಾನ್ಯ ಪದವೀಧರರ ಕ್ಷೇತ್ರದ ಚುನಾವಣೆಯ  ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿಯಾಗಿರುವ
 ಅಮರನಾಥ ಪಾಟೀಲ್  ಉತ್ತಮ ಸಾಮಾಜಿಕ ಕಳ ಕಳಿ ಇರುವಂತ ವ್ಯಕ್ತಿ ಈ ಹಿಂದೆ ವಿಧಾನ ಪರಿಷತ್ ಸದಸ್ಯರಾಗಿ ಕಾರ್ಯ ನಿರ್ವಹಿಸುವ ಅನುಭವ ಕೂಡ ಇದೆ. ಇಂತಹ ವ್ಯಕ್ತಿಯನ್ನು ಆಯ್ಕೆ ಮಾಡುವುದರಿಂದ ಪದವೀಧರರ ಸಮಸ್ಯೆಗಳಿಗೆ ಹಾಗೂ  ಉನ್ನತ ಶಿಕ್ಷಣ ವ್ಯವಸ್ಥೆಗೆ ಪರಿಹಾರ ಕಂಡುಕೊಳ್ಳುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಅಮರನಾಥ್ ಪಾಟೀಲ್ ಪರ  ಅರುಣ್  ಷಹಾಪುರ ರವರು ಪ್ರಚಾರ ಕೈಗೊಂಡು  ಸುದ್ದಿಗಾರರೊಂದಿಗೆ ಸ್ಪಷ್ಟಪಡಿಸಿದರು.
 ಕಾಂಗ್ರೆಸ್ ಸರ್ಕಾರವು ಗ್ಯಾರಂಟಿ ಯೋಜನೆ ಆದ ಯುವನಿಧಿ ಹೆಸರಿನಲ್ಲಿ ಪದವೀಧರರಲ್ಲಿ ತಾರತಮ್ಯ ಮಾಡಲಾಗಿದೆ ವಿದ್ಯಾರ್ಥಿಗಳಿಗೆ ಸಿಗುವ  ಕೆಲ  ಯೋಜನೆಗಳನ್ನು ರದ್ದುಗೊಳಿಸಲಾಗಿದೆ ಹಾಗೂ  ಶಿಕ್ಷಣ ವ್ಯವಸ್ಥೆಯಲ್ಲಿ ಲೋಪ ಮಾಡುತ್ತಿದೆ  ಒಟ್ಟಾರೆ  ಕಳೆದೊಂದು ವರ್ಷದಿಂದ ಭೂಮಿ ಪೂಜೆ, ಗುದ್ದಲಿ ಪೂಜೆ, ಅಡಿಗಲ್ಲು  ಸಮಾರಂಭ, ಎಂಬ ಶಬ್ದಗಳು ಈ ಕಾಂಗ್ರೆಸ್ ಸರ್ಕಾರದಲ್ಲಿ ಕಳೆದು ಹೋಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ  ಬಿಜೆಪಿ ಜಿಲ್ಲಾ ಅಧ್ಯಕ್ಷ  ಚನ್ನಬಸವನಗೌಡ ಪಾಟೀಲ್, ಭರಮನಗೌಡ ಪಾಟೀಲ್, ನಿವೃತ್ತ ಉಪನ್ಯಾಸಕ ಕೊಟ್ರಪ್ಪ,  ಕಿಚಡಿ ಕೊಟ್ರೇಶ್, ರಾಜೇಶ್, ಈಶ್ವರ್ ಗೌಡ, ಮುಂತಾದ ಬಿಜೆಪಿ ಕಾರ್ಯಕರ್ತರು ಇದ್ದರು.