ಪರಿಷತ್ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ

ಸಂಜೆವಾಣಿ ವಾರ್ತೆ
ದಾವಣಗೆರೆ.ಮೇ.೨೯: ಕರ್ನಾಟಕ ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ನನಗೆ ಶಿಕ್ಷಕರು ಪ್ರಥಮ ಪ್ರಾಶಸ್ತ್ರದ ಮತವನ್ನು ನೀಡುವುದರ ಮೂಲಕ ನನ್ನನ್ನು ಜಯಶೀಲನನ್ನಾಗಿ ಮಾಡಬೇಕಾಗಿ ಅಭ್ಯರ್ಥಿ ಸೈಯದ್ ಅಫಾಖ್ ಅಹಮದ್ ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಶಿಕ್ಷಣ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆಗಳನ್ನು ತರಲು ಶ್ರಮಿಸುತ್ತೇನೆ. ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಅಧಿಕಾರಿಯಾಗಿ 30 ವರ್ಷಗಳ ಕಾಲ ಚಿತ್ರದುರ್ಗ, ದಾವಣಗೆರೆ ಮತ್ತು ತುಮಕೂರು ಜಿಲ್ಲೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾಗಿರುತ್ತೇನೆ. ಶಿಕ್ಷಕರ ಒತ್ತಾಯದ ಮೇರೆಗೆ ಚುನಾವಣಾ ಕಣಕ್ಕಿಳಿಸಿದ್ದೇನೆ ಎಂದರು.ಶಿಕ್ಷಕರಿಗೆ ಪೂರ್ಣ ಪ್ರಮಾಣದಲ್ಲಿ 7ನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಜಾರಿಗೊಳಿಸುವುದು, ಶಿಕ್ಷಕರ ವರ್ಗಾವಣೆ ನೀತಿ, ಸಕಾಲದಲ್ಲಿ ವೇತನ, ಓಪಿಎಸ್, ನಿವೃತ್ತಿ ವೇತನ, ಜ್ಯೋತಿ ಸಂಜೀವಿನಿ ಯೋಜನೆ ಜಾರಿಗೊಳಿಸುವುದು ನನ್ನ ಗುರಿಯಾಗಿದೆ. ಮೂಲತಃ ತಾವು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಮಗನಾಗಿದ್ದು, ಶಿಕ್ಷಕರ ಸರ್ವತೋಮುಖ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಬೆಂಬಲಿಗರಾದ ನೂರುಲ್ಲ ಹಮೀದ್, ಮೊಹಮದ್ ದಸ್ತಗೀರ್, ಬಿ.ಎಚ್.ಇರ್ಪಾನ್ ಇದ್ದರು.