ಮುಗಿದ ರಜೆ… ಶಾಲೆಗಳ‌ ಪ್ರಾರಂಭ ಸ್ವಚ್ಚತೆಯೊಂದಿಗೆ ಸಕಲ‌ಸಿದ್ದತೆ ವೀಕ್ಷಿಸಿದ ಡಿಡಿಪಿಐ

ಸಂಜೆವಾಣಿ ವಾರ್ತೆ
ದಾವಣಗೆರೆ.ಮೇ.೨೯; ಚಿಣ್ಣರ ಬೇಸಿಗೆಯ ರಜೆಯ ಮಜಾಕ್ಕೆ ಈಗ ಬ್ರೇಕ್ ಬಿದ್ದಿದೆ.ಇಂದಿನಿಂದ ಪುನಃ ಶಾಲೆ ಪ್ರಾರಂಭವಾಗುತ್ತಿದೆ.ಈ ಹಿನ್ನೆಲೆಯಲ್ಲಿ ಶಾಲಾ ಶಿಕ್ಷಕರು ಹಾಗೂ ಸಿಬ್ಬಂದಿಗಳು ಮಕ್ಕಳನ್ನು ಸ್ವಾಗತಿಸಲು ಸಜ್ಜಾಗಿದ್ದಾರೆ.ಇಂದಿನಿಂದ ಶಾಲೆ ಆರಂಭವಾಗಿದೆ ಆದರೆ  ಮಕ್ಕಳ ತರಗತಿ ಆರಂಭವಾಗುವುದು ಮೇ 31 ರಿಂದ ಆದ್ದರಿಂದ   ಶಾಲಾ ಮುಖ್ಯಶಿಕ್ಷಕರು, ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಮಕ್ಕಳನ್ನು ಸ್ವಾಗತಿಸುವ ನಿಟ್ಟಿನಲ್ಲಿ ಪೂರ್ವಸಿದ್ಧತೆ ಮಾಡಿಕೊಳ್ಳಲು ಶಾಲೆಗಳು ಇಂದಿನಿಂದ ಆರಂಭಗೊಳ್ಳುತ್ತಿವೆ.ಇಂದು  ಶಾಲೆಯ ಸ್ವಚ್ಛತಾ ಕಾರ್ಯದಡಿ ಶಾಲಾ ಆವರಣ, ಕೊಠಡಿ, ಮೇಲ್ಛಾವಣಿ, ಸಂಪು, ನೀರಿನ ಟ್ಯಾಂಕ್, ಅಡುಗೆ ಮನೆ, ಶೌಚಾಲಯ ಇತ್ಯಾದಿಗಳನ್ನು ಸ್ವಚ್ಛತೆ ಮಾಡಲಾಗುತ್ತಿದೆ.ಇದರೊಂದಿಗೆ ಅಕ್ಷರ ದಾಸೋಹದ ಅಡುಗೆ ಮನೆ, ಉಗ್ರಾಣ ಸ್ವಚ್ಛತೆ, ಗ್ಯಾಸ್ ಸಿಲಿಂಡರ್ ಹಾಗೂ ಸ್ಟೌವ್ ಗಳ ಪರಿಶೀಲನೆ . ಬಿಸಿಯೂಟ ಅಡುಗೆಯವರ ನೇಮಕಾತಿ ಜೊತೆಗೆ ಮುಖ್ಯ ಹಾಗೂ ಸಹಾಯಕ ಅಡುಗೆಯವರಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಫಿಟ್ ನೆಸ್ ಮತ್ತು ಕಮ್ಯುನಲ್ ಡಿಸೀಸ್ ಸರ್ಟಿಫಿಕೇಟ್ ಅನ್ನು ಪಡೆಯುವುದು ಕಡ್ಡಾಯವಾಗಿರುತ್ತದೆ ಎಂದು ಡಿಡಿಪಿಐ ಕೊಟ್ರೇಶ್ ಸುತ್ತೋಲೆ ಹೊರಡಿಸಿದ್ದಾರೆ.ಇನ್ನು ಶಾಲೆಯ ಆವರಣವನ್ನು ರಂಗೋಲಿಯಿಂದ ಅಲಂಕರಿಸಿ, ತಳಿರು -ತೋರಣಗಳಿಂದ ಸಿಂಗಾರಗೊಳಿಸಲಾಗಿದೆ, ಮೇ 31 ರಂದು ಮಕ್ಕಳಿಗೆ ಗುಲಾಬಿ ಹೂವು ಹಾಗೂ ಸಿಹಿ ನೀಡಿ ಸ್ವಾಗತಿಸಲು ಸಿದ್ಧತೆ ನಡೆಸಲಾಗುತ್ತಿದೆ. ಮೇ 31 ರಿಂದಲೇ ಬಿಸಿಯೂಟ ಆರಂಭವಾಗಲಿದ್ದು, ಶಾಲಾ ಪ್ರಾರಂಭೋತ್ಸದಂದು ಮಕ್ಕಳಿಗೆ ಸಿಹಿಯೂಟ ಬಡಿಸಲು  ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಉಳಿದಂತೆ ನಲಿಕಲಿ, ಸೇತುಬಂಧ ಕಾರ್ಯಕ್ರಮ, ವೇಳಾಪಟ್ಟಿ ತಯಾರಿಸುವುದು, ಪಾಠ ಯೋಜನೆ, ಶಾಲೆ ಬಿಟ್ಟ ಮಕ್ಕಳನ್ನು ಕರೆತರುವ ದಾಖಲಾತಿ ಆಂದೋಲನ, ಪ್ರಭಾತ್ ಪೇರಿ, ಶಿಕ್ಷಕರಿಗೆ ಜವಾಬ್ದಾರಿಗಳನ್ನು ಹಂಚುವುದು ಇತ್ಯಾದಿ ಕೆಲಸಗಳ ತಯಾರಿಯಲ್ಲಿ ಶಿಕ್ಷಕ ವರ್ಗ ಹಾಗೂ ಸಿಬ್ಬಂದಿಗಳು ಕಂಡುಬಂದರು.