ಆದಿಲ್ ಸಾವು- ಪೊಲೀಸ್ ಠಾಣೆ ಘಟನೆಗಳ ಕುರಿತಂತೆ ಪಾರದರ್ಶಕ ತನಿಖೆ ನಡೆಯಲಿ; ಜಿ.ಬಿ ವಿನಯಕುಮಾರ್

ಸಂಜೆವಾಣಿ ವಾರ್ತೆ
ದಾವಣಗೆರೆ.ಮೇ.೨೯: ಚನ್ನಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲುತೂರಾಟ, ವಾಹನಗಳ ಜಖಂ, ಪೊಲೀಸ್ ಸಿಬ್ಬಂದಿಗೆ ಗಾಯ ಸೇರಿದಂತೆ ಗಲಾಟೆ ನಡೆದಿದ್ದು ದುರದೃಷ್ಟಕರ. ಅದೇ ರೀತಿಯಲ್ಲಿ ಆದಿಲ್ ಸಾವಿಗೆ ನ್ಯಾಯ ಸಿಗಬೇಕು ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಹಾಗೂ ಇನ್ಸೈಟ್ಸ್ ಐಎಎಸ್ ಸಂಸ್ಥೆಯ ಸಂಸ್ಥಾಪಕ ಹಾಗೂ ನಿರ್ದೇಶಕ ಜಿ. ಬಿ. ವಿನಯ್ ಕುಮಾರ್ ಅವರು ಒತ್ತಾಯಿಸಿದರು.ಚನ್ನಗಿರಿ ಪಟ್ಟಣದ ಟಿಪ್ಪು ನಗರದ ಆದಿಲ್ ನಿವಾಸಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಎಫ್ ಐ ಆರ್ ದಾಖಿಲಸದೇ ಆದಿಲ್ ಅವರನ್ನು ಯಾಕೆ ವಶಕ್ಕೆ ಪಡೆಯಲಾಯಿತು ಎಂಬ ಪ್ರಶ್ನೆ ಎಲ್ಲರಲ್ಲಿಯೂ ಮೂಡಿದೆ. ಯಾಕೆ ಗಲಭೆ ನಿಯಂತ್ರಣ ಮಾಡಲು ಆಗಲಿಲ್ಲ? ಜೀಪ್ ಧ್ವಂಸ ಮಾಡಿದ್ದು, ಕಲ್ಲು ತೂರಾಟ ಮಾಡಿದ್ದು ಸರಿಯಲ್ಲ. ಪೊಲೀಸರ ಮೇಲೆ ಕಲ್ಲು ತೂರಾಟ ಮಾಡಿದ್ದು ತಪ್ಪು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಹೇಳಿದರು.ಇದುವರೆಗೆ 28 ಜನರನ್ನು ಬಂಧಿಸಲಾಗಿದೆ. ಇನ್ನು ಗಲಾಟೆಯಲ್ಲಿ ತೊಡಗಿದ್ದ 50ಕ್ಕೂ ಹೆಚ್ಚು ಜನರು ಇದ್ದು, ಅವರನ್ನು ಸೆರೆ ಹಿಡಿಯಲಾಗುವುದು ಎಂಬ ಮಾಹಿತಿ ಪೊಲೀಸರಿಂದ ಸಿಕ್ಕಿದೆ ಎಂದು ವಿನಯ್ ಕುಮಾರ್ ಅವರು ಮಾಹಿತಿ ನೀಡಿದರು.ಅಮಾಯಕರನ್ನು ಯಾವುದೇ ಕಾರಣಕ್ಕೂ ಪೊಲೀಸರು ಬಂಧಿಸಬಾರದು. ಎಷ್ಟೋ ಜನರು ಗಲಾಟೆ ಆಗುತ್ತಿರುವಾಗ ನೋಡಲು ಬಂದಿರುತ್ತಾರೆ. ಪೊಲೀಸರು ಗಲಾಟೆಯಲ್ಲಿ ಭಾಗಿಯಾಗದವರನ್ನು ಅರೆಸ್ಟ್ ಮಾಡುವುದು ಸೂಕ್ತವಲ್ಲ. ಚನ್ನಗಿರಿ ಸಮೃದ್ಧಿ ತಾಣ. ಶಾಂತಿಯ ನೆಲವಾಗಿತ್ತು. ಆದ್ರೆ, ಈ ಘಟನೆ ನಡೆದಿದ್ದು ಸರಿಯಲ್ಲ ಎಂದರು.ಪೊಲೀಸರಿಗೆ ಸೂಕ್ತವಾದ ತರಬೇತಿ ನೀಡಲಾಗಿರುತ್ತದೆ. ಎಷ್ಟು ಸಿಬ್ಬಂದಿ ಕಡಿಮೆ ಇದ್ದಿರಬಹುದು. ಪೊಲೀಸರು ಧೃತಿಗೆಡುವ ಅವಶ್ಯಕತೆ ಇಲ್ಲ. ಭಯವನ್ನೂ ಪಟ್ಟಿಲ್ಲ. ಗಲಭೆ ನಿಯಂತ್ರಿಸುವುದು ಅವರ ಕರ್ತವ್ಯವಾಗಿರುತ್ತದೆ. ಈ ಘಟನೆ ವೈಭವೀಕರಣ ಸರಿಯಲ್ಲ. ಸುಳ್ಳು ಸುದ್ದಿ ಬಗ್ಗೆ ಯಾರೂ ಕಿವಿಗೊಡಬಾರದು. ಲಾಕಪ್ ಡೆತ್ ಆಗಿದೆಯೋ ಇಲ್ಲವೋ ಗೊತ್ತಿಲ್ಲ. ಈ ಬಗ್ಗೆ ತನಿಖೆಯಾದ ಬಳಿಕ ಸತ್ಯಾಂಶ ಹೊರಬರಲಿದೆ. ಸುಳ್ಳು ವದಂತಿ ಹರಿಡಿದಾಗ ಜನರು ಆವೇಗ, ಆವೇಶಗೊಳ್ಳುವುದು ಸಹಜ. ಕಾನೂನು ಕೈಗೆ ತೆಗೆದುಕೊಂಡಿದ್ದು ತಪ್ಪು. ಇದನ್ನು ಸಮರ್ಥಿಸಿಕೊಳ್ಳಲು ಆಗದು ಎಂದು ವಿನಯ್ ಕುಮಾರ್ ಅಭಿಪ್ರಾಯಪಟ್ಟರು.