ಸೇವೆ ಸಲ್ಲಿಸಿರುವ ಅತಿಥಿ ಉಪನ್ಯಾಸಕರ ಸೇವೆ ಮುಂದುವರಿಸಲು ಮನವಿ
ಸಂಜೆವಾಣಿ ವಾರ್ತೆ
ಬಳ್ಳಾರಿ, ಮೇ.29: ಕಳೆದ ಶೈಕ್ಷಣಿಕ ವರ್ಷ (2023-2024) ಸೇವೆ ಸಲ್ಲಿಸಿದ ಸರ್ಕಾರಿ ಪದವಿ ಪೂರ್ವ ಕಾಲೇಜು ಅತಿಥಿ ಉಪನ್ಯಾಸಕರನ್ನು ಈ ಶೈಕ್ಷಣಿಕ ವರ್ಷವೂ (2024-2025)ಸೇವೆಯಲ್ಲಿ ಮುಂದುವರಿಸುವ ಬಗ್ಗೆ.
ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘಟನೆಯಿಂದ ಶಾಲಾ ಶಿಕ್ಷಣ ಹಾಗೂ ಸಾಕ್ಷರತೆ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಾದ ರಿತೇಶ್ ಕುಮಾರ್ ಸಿಂಗ್, ಮಧು ಬಂಗಾರಪ್ಪನವರ ಆಪ್ತ ಕಾರ್ಯದರ್ಶಿ ಹಾಗೂ ಸ್ಪೆಷಲ್ ಆಫೀಸರ್ ಮತ್ತು ಪದವಿ ಪೂರ್ವ ಇಲಾಖೆಯ ಡಿಡಿ ಆದ ಉಮೇಶ್ ರವರನ್ನು ಭೇಟಿ ಮಾಡಿ, ಮನವಿ ಪತ್ರವನ್ನು ಸಲ್ಲಿಸಲಾಯಿತು.
ಕಳೆದ ಶೈಕ್ಷಣಿಕ ವರ್ಷ ರಾಜ್ಯದಲ್ಲಿ ನಾಲ್ಕು ಸಾವಿರಕ್ಕಿಂತ ಹೆಚ್ಚು ಅತಿಥಿ ಉಪನ್ಯಾಸಕರು ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದ್ದರು. ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಪ್ರಾಮಾಣಿಕ ಪ್ರಯತ್ನ ನೀಡಿ, ಪದವಿ ಪೂರ್ವ ಇಲಾಖೆಯ ಬೆನ್ನೆಲುಬಾಗಿ ನಿಂತು , ಒಳ್ಳೆಯ ಫಲಿತಾಂಶಗಳನ್ನು ನೀಡಿದ್ದೇವೆ. ಇದೀಗ, ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ (2024-2025) ಕಳೆದ ಶೈಕ್ಷಣಿಕ ವರ್ಷ ಸೇವೆ ಸಲ್ಲಿಸಿರುವ ಎಲ್ಲಾ ಅತಿಥಿ ಉಪನ್ಯಾಸಕರನ್ನು ಮುಂದುವರಿಸುವುದು ನ್ಯಾಯಯುತ ಹಾಗೂ ಪ್ರಜಾತಾಂತ್ರಿಕ ರೂಢಿ. ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಮೆರಿಟ್ ನೊಂದಿಗೆ  ಸೇವಾ ಅನುಭವ ಹೆಚ್ಚಿರುವ ಅತಿಥಿ ಉಪನ್ಯಾಸಕರ ಪಾತ್ರ ಮಹತ್ವದಾಗಿರುತ್ತದೆ. ಹಾಗಾಗಿ, ಮೊದಲು ಸೇವಾ ಅನುಭವ ಹೆಚ್ಚಿರುವ ಅತಿಥಿ ಉಪನ್ಯಾಸಕರ  ನೇಮಕಾತಿಯನ್ನು ಸರ್ಕಾರ ಹಾಗೂ ಪದವಿ ಪೂರ್ವ ಇಲಾಖೆ ಕೈಗೊಳ್ಳಬೇಕಿದೆ.
ಡೆಪ್ಯುಟೇಷನ್ ಹಾಗೂ ಟ್ರಾನ್ಸ್ಫರ್ ನಿಂದ ಅತಿಥಿ ಉಪನ್ಯಾಸ್ಕರ ಸೇವೆಗೆ ಯಾವುದೇ ರೀತಿ ತೊಂದರೆ ಆಗದಂತೆ ಪದವಿ ಪೂರ್ವ ಇಲಾಖೆ ಕ್ರಮ ಕೈಗೊಳ್ಳಬೇಕು.
ನಮ್ಮೆಲ್ಲರ ಮಾಸಿಕ ಗೌರವಧನವನ್ನು ಕನಿಷ್ಠ ರೂ. 20,000ಕ್ಕೆ ಏರಿಸಬೇಕಿದೆ. ಇದೀಗ ಮಾಸಿಕ ಗೌರವ ಧನ ಕೇವಲ ರೂ12,000 ಆಗಿದೆ. ಈ ಗೌರವಧನದಿಂದ ಜೀವನ ನಡೆಸುವುದೇ ಕಷ್ಟದಾಯಕವಾಗಿದೆ. ಈ ಶೈಕ್ಷಣಿಕ ವರ್ಷವಾದರೂ ನಮ್ಮೆಲ್ಲರ ಗೌರವ ಧನವನ್ನು ಏರಿಸಿ ಪ್ರತಿ  ತಿಂಗಳ 5ನೇ ತಾರೀಕು ಮುಂಚೆಯೇ ಉಪನ್ಯಾಸಕರ ಕೈ ಸೇರುವಂತೆ ಕ್ರಮ ಕೈಗೊಳ್ಳಬೇಕು. ಪದವಿ ಪೂರ್ವ ಇಲಾಖೆಯ ಸುತ್ತೋಲೆಯಂತೆ ಅತಿಥಿ ಉಪನ್ಯಾಸಕರು ವಾರಕ್ಕೆ ಕೇವಲ 10 ಗಂಟೆಗಳು ಕಾರ್ಯಭಾರ ನೀಡಬೇಕು. ಆದರೆ ರಾಜ್ಯದ ಹಲವಾರು ಕಾಲೇಜುಗಳಲ್ಲಿ, ಅತಿಥಿ ಉಪನ್ಯಾಸಕರಿಗೆ 20 ಗಂಟೆಗಳಿಗಿಂತ ಹೆಚ್ಚು ಕಾರ್ಯಭಾರ ನೀಡುತ್ತಿರುವುದು ವಾಸ್ತವವಾಗಿದೆ. ಈ ಶೋಷಣೆಯನ್ನು , ಸರ್ಕಾರ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ನಿಲ್ಲಿಸಬೇಕಿದೆ.
ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘಟನೆ (ರಿ) ರಾಜ್ಯ ಜಂಟಿ ಕಾರ್ಯದರ್ಶಿ ನಾಗರತ್ನ ಎಸ್.ಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.