ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಅಧಿಕಾರಿಗಳು ವಿಫಲ
ಕೋಲಾರ,ಮೇ,೨೯-ಜಿಲ್ಲೆಯಲ್ಲಿ ಆಡಳಿತ ವ್ಯವಸ್ಥೆ ಕುಸಿದಿದ್ದು, ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಲು ಅಸಡ್ಡೆ ತೋರುತ್ತಿದ್ದಾರೆ, ಇದರ ಜತೆಗೆ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಸಹ ಜಿಲ್ಲೆಯನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ ಎಂದು ಜೆಡಿಎಸ್ ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ ಬಣಕನಹಳ್ಳಿ ನಟರಾಜ್ ಮತ್ತು ತಾಲೂಕು ಅಧ್ಯಕ್ಷ ಬಾಬು ಮೌನಿ ಆರೋಪಿಸಿದರು.
ನಗರದ ಜೆಡಿಎಸ್ ಕಚೇರಿಯಲ್ಲಿ ಭಾನುವಾರ ಜಂಟಿ ಹೇಳಿಕೆ ನೀಡಿದ ಅವರು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪ್ರಾರಂಭದಿಂದಲೂ ನಮ್ಮ ಜಿಲ್ಲೆಯನ್ನು ಕಡೆಗಣಿಸಿಕೊಂಡು ಬಂದಿದೆ ಎಂದು ಅಕ್ಷೇಪಿಸಿದರು.
ಈವರೆಗೆ ಹಿಂದೆಂದೂ ಕಾಣದ ರೀತಿ ಜಿಲ್ಲೆಯಲ್ಲಿ ಬರಪರಿಸ್ಥಿತಿ ಎದುರಾಗಿತ್ತು, ಇತ್ತೀಚೆಗೆ ಜಿಲ್ಲೆಯ ಕೆಲವು ಕಡೆ ಮಳೆ ಬಂದು ಬೆಳೆ ಹಾನಿಯಾಗಿದೆ. ಇದರ ಬಗ್ಗೆ ಜಿಲ್ಲಾಡಳಿತ, ಕಾಂಗ್ರೆಸ್ ಶಾಸಕರು, ಸಚಿವರು ರೈತರ ಕಷ್ಟ ಸುಖ ವಿಚಾರಿಸಿಲ್ಲ ಪರಿಹಾರದ ವಿತರಣೆಯಲ್ಲೂ ನಿರ್ಲಕ್ಷಿಸಲಾಗಿದೆ.
ಅದೇ ಸಂದರ್ಭದಲ್ಲಿ ಚುನಾವಣೆಯ ನೀತಿ ಸಂಹಿತೆಯು ಘೋಷಣೆಯಾಯಿತು. ಸಮಸ್ಯೆಗಳಿಗೆ ಸ್ಪಂದಿಸಲು ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಇದೊಂದು ನೆಪವಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಸೇರಿದಂತೆ ಆಡಳಿತ ಪಕ್ಷದ ಶಾಸಕರಿಗೆ ಚುನಾವಣೆಯೆ ಮುಖ್ಯವಾಗಿತ್ತು ಹೊರತು ಸಮಸ್ಯೆಗಳತ್ತ ಗಮನಹರಿಸಲಿಲ್ಲ ಎಂದರು.
ಬರಗಾಲದಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ, ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿ ಎದುರಾಗಿತ್ತು. ಜನಪ್ರತಿನಿಧಿಗಳು ಸಮಸ್ಯೆಯತ್ತ ಗಮನ ಹರಿಸಲಿಲ್ಲ, ದೇವರ ದಯೇ ಇಚೆಗೆ ಜಿಲ್ಲೆಯಲ್ಲಿ ಅಲ್ಲಲ್ಲಿ ಮಳೆಯಾಗುತ್ತಿರುವ ಕಾರಣ ಸ್ವಲ್ಪಮಟ್ಟಿಗೆ ಸಮಸ್ಯೆ ಸುಧಾರಣೆಗೆ ಬಂದಿದೆ, ಇಲ್ಲದಿದ್ದರೆ ಜನ ಮತ್ತಷ್ಟು ಸಮಸ್ಯೆಗಳಿಗೆ ಒಳಗಾಗಬೇಕಾಗುತ್ತಿತ್ತು. ಜಿಲ್ಲೆಯನ್ನು ಸರ್ಕಾರ ಯಾಕೆ ಕಡೆಗಣಿಸುತ್ತಿದೆ ಎಂಬುದನ್ನು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಜಿಲ್ಲೆಯ ಕಾಂಗ್ರೆಸ್ ಶಾಸಕರು ಉತ್ತರ ನೀಡಬೇಕು, ಜಿಲ್ಲೆಯ ಪರವಾಗಿ ಧ್ವನಿ ಎತ್ತುವ ತಾಕತ್ತು ಕ್ಷೇತ್ರದ ಶಾಸಕರಿಗೆ ಇಲ್ಲವೆ ? ಎಂದು ಪ್ರಶ್ನಿಸಿದರು.
ಲಕ್ಷಾಂತರ ರೈತರು ಹೈನೋದ್ಯಮದ ಮೇಲೆ ಅವಲಂಭಿತರಾಗಿದ್ದಾರೆ. ಬರಗಾಲದಲ್ಲೂ ಸಹ ನಿರೀಕ್ಷೆಗೂ ಮೀರಿ ಕೋಚಿಮುಲ್‌ಗೆ ಹಾಲು ಪೂರೈಕೆ ಮಾಡಿದ್ದಾರೆ. ಪಶು ಆಹಾರಗಳಾದ ಬೂಸ, ಇಂಡಿ, ಒಕ್ಕೂಟದಿಂದ ನೀಡುವ ಪೌಷ್ಠಿಕ ಆಹಾರ ಬೆಲೆ ದಿನೆ,ದಿನೆ ಏರಿಕೆಯಾಗುತ್ತಲೆ ಇದೆ, ಇದರ ನಿಯಂತ್ರಣ ಇಲಾಖಾಧಿಕಾರಿಗಳಿಗೆ ಬರುವುದಿಲ್ಲ ಎಂದು ಹೇಳುತ್ತಾರೆ, ಸರ್ಕಾರ ವ್ಯಾಪಾರಸ್ಥರ ಪರವಾಗಿ ನಿಂತಿದೆ. ಪ್ರತಿ ಲೀಟರ್‌ಗೆ ನೀಡುತ್ತಿದ್ದ ಪ್ರೋತ್ಸಾಹ ಧನವನ್ನು ೭ ತಿಂಗಳಿಂದ ಒಕ್ಕೂಟಕ್ಕೆ ಸುಮಾರು ೭೦೦ ಕೋಟಿ ರೂ ಬಾಕಿ ಉಳಿಸಿಕೊಂಡಿದೆ. ಇದರಿಂದಾಗಿ ರೈತರು ಸಂಕಷ್ಟಕ್ಕೆ ಒಳಗಾಗಬೇಕಾಯಿತು. ಪ್ರೋತ್ಸಾಹಧನ ಬಿಡುಗಡೆಯಲ್ಲೂ ತಾರತಮ್ಯ ಮಾಡಿರುವುದು ಎಷ್ಟು ಮಾತ್ರ ಸರಿ ? ಎಂದು ಕಿಡಿಕಾರಿದರು.
ಸರ್ಕಾರವನ್ನು ನಿರ್ವಹಿಸಲು ಸಾಧ್ಯವಾಗದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪೆನ್ ಡ್ರೈವ್ ವಿಚಾರವನ್ನು ಮುಂದಿಟ್ಟುಕೊಂಡು ಜೆಡಿಎಸ್‌ನ್ನು ಮುಗಿಸಲು ಹಗಲು ಕನಸ್ಸು ಕಾಣುತ್ತಿದ್ದಾರೆ. ಇದು ಅವರ ಭ್ರಮೆಯಷ್ಟೆ, ಲೋಕಸಭಾ ಚುನಾವಣೆಯ ನಂತರ ಕಾಂಗ್ರೆಸ್ ವಿಳಾಸ ಹುಡುಕಬೇಕಾಗುತ್ತದೆ ಎಂದು ಬಾಬು ಮೌನಿ ವ್ಯಂಗ್ಯವಾಡಿದರು.
ರಾಜ್ಯದಲ್ಲಿ ಜೆಡಿಎಸ್-ಬೈಜೆಪಿ ಮೈತ್ರಿಯನ್ನು ಕಾಂಗ್ರೆಸ್‌ನವರಿಗೆ ಸಹಿಸಿಕೊಳ್ಳಲಾಗುತ್ತಿಲ್ಲ, ಇದರಿಂದಲೇ ಜನರನ್ನು ದಿಕ್ಕು ತಪ್ಪಿಸಲು ಸಚಿವ ಸಂಪುಟದ ಸಚಿವರು ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ, ರಾಜ್ಯದ ಜನತೆ ಬುದ್ಧವಂತರಿದ್ದು ಚುನಾವಣೆಯಲ್ಲಿ ಕಾಂಗ್ರೆಸ್‌ನ್ನು ತಿರಸ್ಕರಿಸಿದ್ದಾರೆ ಎಂಬುದು ಫಲಿತಾಂಶದಲ್ಲಿ ಸ್ಪಷ್ಟವಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ ಎಂಬುದಕ್ಕೆ ಹಲವಾರು ನಿದರ್ಶನಗಳು ಇವೆ. ಇದರಿಂದಾಗಿ ಜನಸಾಮಾನ್ಯರು ಬೇಸತ್ತಿದ್ದಾರೆ, ಬೆಂಗಳೂರಿನಲ್ಲಿ ರಾಮೇಶ್ವರಂನಲ್ಲಿ ಬಾಂಬ್ ಸ್ಪೋಟ, ಹುಬ್ಬಳಿಯಲ್ಲಿ ಕೊಲೆ ಪ್ರಕರಣ, ಉಡುಪಿಯಲ್ಲಿ ಶನಿವಾರ ನಡೆದ ಗ್ಯಾಂಗ್‌ವಾರ್ ಪ್ರಕರಣಗಳಿಗೆ ಸಾಕ್ಷಿಗಳು ಕಣ್ಣಮುಂದಿದೆ ಇದೆ. ಸರ್ಕಾರ ಏನೇ ಮಾಡಿದರು ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿರುವುದರಿಂದ ಕಿಡಿಗೇಡಿಗಳು ಕೃತ್ಯಗಳನ್ನು ಎಸಗಿದ್ದಾರೆ. ಇದಕ್ಕೆ ಸರ್ಕಾರವೆ ನೇರ ಹೊಣೆ ಎಂದು ಎಚ್ಚರಿಕೆ ನೀಡಿದರು.