ಅಕ್ರಮ ಆಸ್ತಿ: ಸರಕಾರಿ ನೌಕರನಿಗೆ 4 ವರ್ಷ ಜೈಲು,25 ಲಕ್ಷ ರೂ ದಂಡ
ಬೀದರ,ಮೇ.29: ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವದು ಸಾಬೀತಾದ ಹಿನ್ನೆಲೆಯಲ್ಲಿ ಸರಕಾರಿ ನೌಕರ ಫಿರೋಜುದ್ದಿನ ಖಮ್ರೋದ್ದಿನ ಖಾನ್‍ಗೆ ಜಿಲ್ಲಾ ಮತ್ತು ಸತ್ರ ಹಾಗೂ ವಿಶೇಷ ನ್ಯಾಯಾಧೀಶ ವಿಜಯಕುಮಾರ ಎಂ ಆನಂದಶೆಟ್ಟಿ ಅವರು 4 ವರ್ಷ ಜೈಲು ಶಿಕ್ಷೆ ಮತ್ತು 25 ಲಕ್ಷ ರೂ ವಿಧಿಸಿ ತೀರ್ಪು ನೀಡಿದ್ದಾರೆ.
ಪ್ರಕರಣದ ವಿಚಾರಣೆ ಮಾಡಿ, ಆರೋಪಿಯು ಅದಾಯಕ್ಕಿಂತ ಒಟ್ಟು ರೂ. 6,43,345/-ಗಳ (ಶೇ. 20.65 ರಷ್ಟು) ಹೆಚ್ಚಿನ ಆಕ್ರಮ ಆಸ್ತಿ ಹೊಂದಿರುವುದು ಸಾಬೀತು ಆಗಿರುವುದರಿಂದ ಮಂಗಳವಾರ ಆರೋಪಿತನ ವಿರುದ್ಧ ಲಂಚ ನಿಷೇಧ ಕಾಯ್ದೆಯ ಕಲಂ 13(2)ಕ್ಕೆ 4ವರ್ಷ ಜೈಲು ಶಿಕ್ಷೆ ಜೊತೆಗೆ 25ಲಕ್ಷ ರೂ ದಂಡ ವಿಧಿಸಿದ್ದು, ದಂಡ ಭರಿಸಲು ತಪ್ಪಿದ್ದಲ್ಲಿ ಒಂದು ವರ್ಷದ ಜೈಲು ಶಿಕ್ಷೆ ವಿಧಿಸಿದ್ದಾರೆ. ಲೋಕಾಯುಕ್ತ ದಾಳಿಯಲ್ಲಿ ದೊರೆತ ಬಂಗಾರ, ಬೆಳ್ಳಿಯ ಒಡವೆಗಳನ್ನು ಹಾಗು ನಗದು ಹಣ ಜಪ್ತಿ ಮಾಡಲು ನ್ಯಾಯಾಧೀಶ ವಿಜಯಕುಮಾರ. ಎಮ್ ಆನಂದಶೆಟ್ಟಿ ಅವರು ಆದೇಶಿಸಿದ್ದಾರೆ. ಕರ್ನಾಟಕ ಲೋಕಾಯುಕ್ತ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಕೇಶವರಾವ ಶ್ರೀಮಾಳೆ ರವರು ವಾದ ಮಂಡಿಸಿರುತ್ತಾರೆ.
ಬೀದರ ಜಿಲ್ಲೆಯ ಕಾರಂಜಾ ಕಾಲುವೆ ನಿರ್ಮಾಣ ಯೋಜನೆಯ ಹುಮನಾಬಾದ ಕ್ಯಾಂಪ್‍ನಲ್ಲಿ ಸಹಾಯಕ ಕಾರ್ಯನಿರ್ವಾಹಕ ಆಭಿಯಂತರ ಎಂದು ಕರ್ತವ್ಯದಲ್ಲಿದಾಗ ಬೀದರನ ಕರ್ನಾಟಕ ಲೋಕಾಯುಕ್ತ ಪೊಲೀಸ್ ಠಾಣೆ ಅಧಿಕಾರಿಗಳು ಆದಾಯಕ್ಕಿಂತ ಹೆಚ್ಚಿನ ಆಸ್ತಿಯನ್ನು ಹೊಂದಿರುವುದು ಗೌಪ್ಯ ಮಾಹಿತಿ ಸಂಗ್ರಹಿಸಿದ ಮೂಲವರದಿಯ ಆಧಾರದ ಮೇರೆಗೆ ಪ್ರಕರಣವನ್ನು ದಾಖಲಿಸಿ,2008ರ ಫೆ 6 ರಂದು ಏಕಕಾಲದಲ್ಲಿ ಬೀದರ ನಗರದ ಗುರುನಾನಕ ಕಾಲೋನಿಯಲ್ಲಿ ಆರೋಪಿ ವಾಸ ಮಾಡುವ ಮನೆ, ನೆಹರು ಸ್ಟೆಡಿಯಂ ಹತ್ತಿರ ಆರೋಪಿ ಮಾವ ಲೈಕ್ಕೋದ್ದಿನ ವಾಸ ಮಾಡುವ ಮನೆ ಮತ್ತು ಗೋಲೆಖಾನಾದಲ್ಲಿ ಅಣ್ಣ ಎಮ್. ಝಡ್. ಬಾಬರ್ ವಾಸ ಮಾಡುವ ಮನೆಗಳ ಮೇಲೆ ದಾಳಿ ಮಾಡಿದ್ದರು. ಶೋಧನಾ ಕಾಲದಲ್ಲಿ ಬೆಳ್ಳಿ ಮತ್ತು ಬಂಗಾರದ ಒಡವೆಗಳು, ನಗದು ಹಣ ಮತ್ತು ದಾಖಲೆಗಳನ್ನು ಜಪ್ತಿಮಾಡಲಾಗಿತ್ತು. ಈ ಸಂದರ್ಭದಲ್ಲಿ ಆರೋಪಿ ಕಾಯನಿರ್ವಹಿಸುವ ಹುಮನಾಬಾದ ಪಟ್ಟಣದ ಕಛೇರಿಯಲ್ಲಿ ಸಹ ಶೋಧನೆ ಮಾಡಲಾಗಿತ್ತು.