ಪ್ಯಾಲೆಸ್ಟೈನ್ ಯುದ್ದ ವಿರಾಮ, ಪ್ರಧಾನಿ ಮೋದಿ ಮಧ್ಯೆ ಪ್ರವೇಶಕ್ಕೆ ಒತ್ತಾಯ
ಕೋಲಾರ,ಮೇ,೨೯- ಪ್ಯಾಲೆಸ್ಟೀನ್ ದೇಶದ ಜನರ ಮೇಲೆ ನಿರಂತರವಾಗಿ ನಡೆಯುತ್ತಲೇ ಇರುವ ಯುದ್ಧವನ್ನು ನಿಯಂತ್ರಿಸಲು ದೇಶದ ಪ್ರಧಾನಿ ನರೇಂದ್ರ ಮೋದಿ ಪ್ರಯತ್ನಿಸಬೇಕು ಎಂದು ಒತ್ತಾಯಿಸಿ ನಗರದ ತಹಶಿಲ್ದಾರ್ ಕಛೇರಿ ಮುಂದೆ ಸಿಪಿಐಎಂ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಗಾಂಧಿನಗರ ನಾರಾಯಣಸ್ವಾಮಿ ಮಾತನಾಡಿ, ಕಳೆದ ೨೦೨೩ರ ಅಕ್ಟೋಬರ್‌ನಿಂದ ಗಾಜಾ ಪಟ್ಟಿ ಮೇಲೆ ಇಸ್ರೇಲ್ ದೇಶವು ನಡೆಸುತ್ತಿರುವ ಅಮಾನವೀಯ ಯುದ್ಧ ಎಂಟು ತಿಂಗಳು ಕಳೆದರು ಮುಂದುವರಿಯುತ್ತಲೇ ಇದ್ದು ಜಗತ್ತಿನಾದ್ಯಂತ ಸ್ವಾತಂತ್ರ್ಯ ಹಾಗೂ ಶಾಂತಿಪ್ರಿಯ ಜನರಲ್ಲಿ ಕಳವಳ ಮೂಡಿಸಿದೆ. ತನ್ನದೇ ಸ್ವಂತ ದೇಶವನ್ನು ಹೊಂದುವ ಪ್ಯಾಲೆಸ್ಟೀನ್ ಜನರ ಮಹತ್ತರವಾದ ಆಕಾಂಕ್ಷೆಗೆ ಧನಿಯಾಗಿ ಹೋರಾಡುತ್ತಿರುವ ಹಮಾಸ್ ಸಂಘಟನೆಯು ಇಸ್ರೇಲ್ ಮೇಲೆ ನಡೆಸಿದ ದಾಳಿಯನ್ನು ನೆಪವಾಗಿಟ್ಟುಕೊಂಡು ಈ ಬಾರಿ ಗಾಜಾ ಪಟ್ಟಿ ಮೇಲೆ ಇಸ್ರೇಲ್ ಪೂರ್ಣ ಪ್ರಮಾಣದ ಯುದ್ಧವನ್ನೇ ಸಾರಿದೆ ಎಂದು ಆರೋಪಿಸಿದರು.
ಸಿಪಿಐಎಂ ತಾಲೂಕು ಕಾರ್ಯದರ್ಶಿ ಟಿ.ಎಂ.ವೆಂಕಟೇಶ್ ಮಾತನಾಡಿ ವಿಶ್ವ ಸಂಸ್ಥೆಯ ಅಭಿಪ್ರಾಯವನ್ನು ಧಿಕ್ಕರಿಸಿರುವ ಇಸ್ರೇಲ್ ಧೋರಣೆಗೆ ಅಮೆರಿಕದಂತೆ ಭಾರತ ಸರಕಾರ ಕೂಡ ಬೆಂಬಲ ನೀಡುತ್ತಿರುವುದು ಖಂಡನೀಯವಾಗಿದೆ ಎಂದರು.
ತನ್ನ ಸ್ವಂತ ದೇಶದ ಕನಸನ್ನು ಸಾಕಾರಗೊಳಿಸಲು ಹೋರಾಡುತ್ತಿರುವ ಪ್ಯಾಲೆಸ್ಟೀನಿ ಜನರ ಪರವಾಗಿ ನಿಲ್ಲುವುದು ಮಹಾನ್ ಸಾಮ್ರಾಜ್ಯಶಾಹಿ ವಿರೋಧಿ ಹಾಗೂ ವಸಾಹತುಶಾಹಿ ವಿರೋಧಿ ಪರಂಪರೆಯನ್ನು ಹೊಂದಿರುವ ಭಾರತದ ಆದ್ಯ ರಾಜಕೀಯ ಹಾಗೂ ಮಾನವೀಯ ಕರ್ತವ್ಯವಾಗಿದೆ. ಆದ್ದರಿಂದ, ಗಾಜಾ ಪಟ್ಟಿಯಲ್ಲಿ ಯುದ್ಧ ಮುಂದುವರಿಸಲು ಅನುಕೂಲವಾಗುವಂತೆ ಇಸ್ರೇಲ್‌ಗೆ ಯಾವುದೇ ರೀತಿಯ ಸಹಾಯ-ಸಹಕಾರ ನೀಡಬಾರದೆಂದು ಹಾಗೂ ಜಾಗತಿಕ ರಂಗದಲ್ಲಿ ಭಾರತ ಹೊಂದಿರುವ ಪ್ರತಿಷ್ಠೆ-ಪ್ರಭಾವವನ್ನು ಬಳಸಿಕೊಂಡು ಮಧ್ಯಪ್ರವೇಶಿಸಿ ಯುದ್ಧವನ್ನು ಕೊನೆಗೊಳಿಸಲು ಗರಿಷ್ಠ ಪ್ರಯತ್ನವನ್ನು ಮೋದಿ ಮಾಡಬೇಕು ಎಂದು ಒತ್ತಾಯಿಸಿದರು.
ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಪಿ.ಶ್ರೀನಿವಾಸ್, ಪಿ.ಆರ್.ಸೂರ್ಯನಾರಾಯಣ, ಮುಖಂಡರಾದ ಪಿ.ತಂಗರಾಜ್, ಎಸ್.ಡಿ. ಆನಂದರಾಜ್, ಪಿ.ಆರ್.ಶಂಕರ್, ಎಂ.ವಿಜಯಕೃಷ್ಣ, ಹನುಮಂತರಾಯ, ಅಪ್ಪಯ್ಯಣ್ಣ ವಿ.ನಾರಾಯಣರೆಡ್ಡಿ, ಎನ್.ಎನ್.ಶ್ರೀರಾಮ್ ಇದ್ದರು.