ಶಾಸಕ ರಾಜು ಕಾಗೆ ಎದುರಲ್ಲೇ ಮಾಧ್ಯಮದವರ ಕೈಕಾಲು ಮುರಿಯುವ ಬೆದರಿಕೆ : ಶಿಸ್ತು ಕ್ರಮಕ್ಕೆ ಆಗ್ರಹಿಸಿ ಪತ್ರಕರ್ತರಿಂದ ಮನವಿ
ಅಥಣಿ:ಮೇ.29: ಕಾಗವಾಡ ಶಾಸಕ ರಾಜು ಕಾಗೆ ಅವರ ಎದುರಿಗೆ ಮಾಧ್ಯಮದ ಪ್ರತಿನಿಧಿಗಳನ್ನು ಮನೆ ಹೊಕ್ಕು ಹೊಡೆಯುತ್ತೇನೆಂದು ಬೆದರಿಕೆ ಹಾಕಿರುವ ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅಥಣಿ ಹಾಗೂ ಕಾಗವಾಡ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.
ಮಂಗಳವಾರ ಅಥಣಿ ಮತ್ತು ಕಾಗವಾಡ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ಕಾಗವಾಡ ತಹಶೀಲ್ದಾರ ಎಸ್. ಬಿ ಇಂಗಳೆ, ಕಾಗವಾಡ ಪಿಎಸ್‍ಐ ಎಂ. ಬಿ ಬಿರಾದರ ಮತ್ತು ಅಥಣಿ ಪಿ.ಎಸ್.ಐ ಹೆಚ್ಚುವರಿ ಪಿಎಸಐ ಚಂದ್ರಶೇಖರ ಸಾಗನೂರ ಇವರಿಗೆ ಮನವಿ ಸಲ್ಲಿಸಿ ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಈ ಸಮಯದಲ್ಲಿ ಹಿರಿಯ ಪತ್ರಕರ್ತರಾದ ಸುಕುಮಾರ ಬನ್ನೂರೆ, ಅಣ್ಣಾಸಾಹೇಬ ತೆಲಸಂಗ ಮತ್ತು ಸಿದ್ಧಯ್ಯ ಹಿರೇಮಠ ಮಾತನಾಡಿ, ಪತ್ರಕರ್ತರು ಕಠಿಣ ಪರಿಸ್ಥಿಯಲ್ಲಿ ತಮ್ಮ ಕರ್ತವ್ಯ ನಿರ್ವಹಸುತ್ತಿದ್ದು, ನೈಜ ಸುದ್ದಿಗಳನ್ನು ಜನರಿಗೆ ಮುಟ್ಟಿಸುವ ಕೆಲಸ ಮಾಡುತ್ತಾರೆ. ಅಂತಹ ಪರ್ತಕರ್ತರಿಗೆ ಈಗ ರಕ್ಷಣೆ ಇಲ್ಲದಂತಾಗಿದೆ. ನಿನ್ನೆ ಅಥಣಿ ತಾಲೂಕಿನ ಬೆವನೂರು ಗ್ರಾಮದ ಜಾತ್ರೆಯಲ್ಲಿ ಮೋಳೆ ಗ್ರಾಮದ ಕಾಂಗ್ರೆಸ್ ಕಾರ್ಯಕರ್ತ ಸಂತೋಷ ಚುರಮೂಲೆ ಇತನು ಶಾಸಕ ರಾಜು ಕಾಗೆ ಅವರು ಸಮ್ಮುಖದಲ್ಲಿಯೇ ಮಾಧ್ಯಮದವರನ್ನು ಮನೆ ಹೊಕ್ಕು ಕೈ-ಕಾಲು ಮುರಿಯುವುದಾಗಿ ಧಮ್ಕಿ ಹಾಕಿದ್ದಾನೆ. ಕೂಡಲೇ ಆತನನ್ನು ಬಂಧಿಸಿ, ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಈ ರೀತಿ ಸ್ಥಳೀಯ ಶಾಸಕರ ಸಮ್ಮುಖದಲ್ಲಿಯೇ ಘಟನೆ ನಡೆದಿದ್ದು, ಸಾರ್ವಜನಿಕ ವಲಯದಲ್ಲಿ ಶಾಸಕರ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದ್ದಂತೆ ಎಚ್ಚತ್ತುಕೊಂಡ ಶಾಸಕರು ಮಾಧ್ಯಮದವರ ಕ್ಷೇಮೆ ಕೇಳಿದ್ದು, ಆತನಿಗೂ ಮತ್ತು ನನಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಜಾರಿಕೊಂಡಿದ್ದಾರೆ.
ಈ ವೇಳೆ ಕಾರ್ಯನಿರತ ಪತ್ರಕರ್ತರ ಸಂಘದ ಚನ್ನಯ್ಯ ಇಟ್ನಾಳಮಠ, ಶಿವಕುಮಾರ್ ಅಪರಾಜ, ಪರಶುರಾಮ ನಂದೇಶ್ವರ, ವೆಂಕಟೇಶ ದೇಶಪಾಂಡೆ, ರಮೇಶ ಬಾದವಾಡಗಿ, ರಾಕೇಶ್ ಮೈಗೂರ. ಜಬ್ಬಾರ ಚಿಂಚಲಿ, ಸುರೇಶ ಕಾಗಲಿ, ಸಚೀನ ಕಾಂಬಳೆ, ಮಹಾಂತೇಶ ಅರಿಕೇರಿ, ವಿಜಯಕುಮಾರ ಅಡಹಳ್ಳಿ, ರಾಜು ಗಾಲಿ, ಸತೀಶ ಕೋಳಿ, ಬಸವರಾಜ ತಾರದಾಳೆ, ಸಂಜಯ ಕೌಲಗಿ, ಮುರಗೇಶ ಘಸ್ತಿ, ಅಮರ ಕಾಂಬಳೆ, ರಾಜು ಚೌಳಕೆ, ಯಾಶಿನ್ ಝಾರೆ, ಅಜೀತ ಕಾಂಬಳೆ ಉಪಸ್ಥಿತರಿದ್ದರು.
