ಜೂ. 1ರಂದು ದಾರ್ಶನಿಕ ಶರಣ ಜಯಂತೋತ್ಸವ
ಸಂಜೆವಾಣಿ ವಾರ್ತೆ
ಕೆಂಭಾವಿ:ಮೇ.29: ಹುಣಸಗಿ ಪಟ್ಟಣದಲ್ಲಿ ಜೂ.1 ರಂದು ಕರ್ನಾಟಕ ಸಾಂಸ್ಕøತಿಕ ನಾಯಕ ವಿಶ್ವಗುರು ಬಸವಣ್ಣ, ಮಹಾಸಾದ್ವಿ ಹೇಮರೆಡ್ಡಿ ಮಲ್ಲಮ್ಮ, ವೈರಾಗ್ಯ ನಿಧಿ ಅಕ್ಕಮಹಾದೇವಿ ಜಯಂತಿಯನ್ನು ಅದ್ಧೂರಿಯಿಂದ ಆಚರಿಸಲು ತೀರ್ಮಾನಿಸಲಾಗಿದೆ ಎಂದು ಅಖಂಡ ಕರ್ನಾಟಕ ವೀರಶೈವ ಲಿಂಗಾಯತ ಸಮಾಜದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನರೆಡ್ಡಿ ಅಮ್ಮಾಪುರ ಹೇಳಿದರು.
ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಜರುಗಿದ ಸಮಾಜದ ಪ್ರಮುಖರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಮೂವರು ಮಹಾನ್ ದಾರ್ಶನಿಕರು ವೀರಶೈವ ಸಮಾಜಕ್ಕೆ ತಮ್ಮದೆ ಆದ ಕೊಡುಗೆಯನ್ನು ನೀಡಿದ್ದಾರೆ. ಸಮಾಜವನ್ನು ಒಗ್ಗೂಡಿಸಲು ಹಗಲರುಳು ಶ್ರಮಿಸಿದ್ದಾರೆ. ಮೆ.10 ರಂದು ಒಂದೆ ದಿನ ವಿಶ್ವಗುರು ಬಸವಣ್ಣ, ಹೇಮರೆಡ್ಡಿ ಮಲ್ಲಮ್ಮರ ಜಯಂತಿ ಬಂದಿದ್ದು ನಮ್ಮೆಲ್ಲರ ಸೌಭಾಗ್ಯ. ಅದರ ಜೊತೆಯಲ್ಲಿ ಆ ಸಮಯದಲ್ಲೆ ಅಕ್ಕಮಹಾದೇವಿ ಜಯಂತಿಯೂ ಸಹ ಇತ್ತು. ಅಂದು ಕೇವಲ ಸರಕಾರಿ ಕಛೇರಿಗಳಲ್ಲಿ ಜಯಂತಿಯನ್ನು ಆಚರಿಸಲಾಗಿತ್ತು. ಸಮಾಜದ ಹಿರಿಯರ ಅಭಿಲಾಷೆಯಂತೆ ಎಲ್ಲರೂ ಒಗ್ಗೂಡಿ ಜೂ.1 ರಂದು ಹುಣಸಗಿ ಪಟ್ಟಣದಲ್ಲಿ ಅದ್ಧೂರಿಯಾಗಿ ಜಯಂತಿ ಮಹೋತ್ಸವವನ್ನು ಆಚರಣೆ ಮಾಡಲು ನಿರ್ಧರಿಸಲಾಗಿದೆ.
ಕೆಂಭಾವಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಸಮಾಜದ ಎಲ್ಲ ಬಾಂಧವರು ಅಂದು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಮಹಾತ್ಮರ ಜಯಂತಿಯನ್ನು ಯಶಸ್ವಿಗೊಳಿಸಬೇಕು ಎಂದು ಕೊರಿದರು.
ಹಿರಿಯ ಮುಖಂಡ ಶಂಕ್ರಣ್ಣ ವಣಿಕ್ಯಾಳ ಮಾತನಾಡಿ, ವೀರಶೈವ ಸಮಾಜವನ್ನು ಒಗ್ಗೂಡಿಸಲು ಅಮ್ಮಾಪುರ ಮಲ್ಲು ನೇತೃತ್ವದಲ್ಲಿ ತಾಲೂಕಿನ ಪೂಜ್ಯರ ಆಶೀರ್ವಾದದಿಂದ ಅದ್ಧೂರಿ ಜಯಂತಿಯನ್ನು ಆಚರಿಸಲು ನಿರ್ಧರಿಸಲಾಗಿದೆ. ವೀರಶೈವ ಲಿಂಗಾಯತ ಸಮಾಜ ಒಗ್ಗಟ್ಟಿನಿಂದ ಇದ್ದಾಗ ಬೇರೆಯವರು ನಮ್ಮ ಹತ್ತಿರ ಬರಲು ಯೋಚಿಸುತ್ತಾರೆ. ನಮ್ಮ ಸಮಾಜದ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡುವದು ಕೈಬಿಡುತ್ತಾರೆ. ಶ್ರೀಶೈಲದ ಜಗದ್ಗುರುಗಳು ಸಮಾರಂಭಕ್ಕೆ ಆಗಮಿಸಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಭಾಗದ ಜನರು ಕಾರ್ಯಕ್ರಮಕ್ಕೆ ಆಗಮಿಸಬೇಕು. ಸಮಾಜದ ಒಗ್ಗಟ್ಟನ್ನು ಪ್ರದರ್ಶಿಸಬೇಕು ಎಂದು ಹೇಳಿದರು.
ಪ್ರಮುಖರಾದ ಬಸನಗೌಡ ಚಿಂಚೋಳಿ, ಶರಣಪ್ಪ ಬಂಡೋಳಿ, ಡಿ.ಸಿ.ಪಾಟೀಲ ಕಾರ್ಯಕ್ರಮದ ಕುರಿತು ಮಾತನಾಡಿದರು. ಹಿರೇಮಠದ ಷ.ಬ್ರ.ಚನ್ನಬಸವ ಶಿವಾಚಾರ್ಯರು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಪ್ರಮುಖರಾದ ಪ್ರಭುಗೌಡ ಹರನಾಳ, ಚೆನ್ನಯ್ಯಸ್ವಾಮಿ ಹಿರೇಮಠ, ಮಹಿಪಾಲರೆಡ್ಡಿ ಡಿಗ್ಗಾವಿ, ರಮೇಶ ಸೊನ್ನದ, ಡಾ.ಕಿರಣ ಜಕರೆಡ್ಡಿ, ಸಿದ್ದನಗೌಡ ಬಿರಾದಾರ, ಮಹಂತಗೌಡ ನಗನೂರ, ವೀರಣ್ಣ ಕಲಕೇರಿ, ವೀರೇಶ ಯಾಳಗಿ, ಗಿರೀಶ ಬ್ಯಾಕೋಡ ಸೇರಿದಂತೆ ಅನೇಕರಿದ್ದರು.
ಡಾ.ಯಂಕನಗೌಡ ಪಾಟೀಲ ನಿರೂಪಿಸಿದರು. ಶಂಕರಗೌಡ ಶಿವನಂದಿ ಸ್ವಾಗತಿಸಿದರು.