ಸಾವರ್ಕರ್ 144ನೇ ಜಯಂತಿ ಆಚರಣೆ
ಸಂಜೆವಾಣಿ ನ್ಯೂಸ್
ಮೈಸೂರು.ಮೇ.29:- ವೀರ ಸಾವಾರ್ಕರ್ ಯುವ ಬಳಗದ ವತಿಯಿಂದ ಮಂಗಳವಾರ ಸಾವಾರ್ಕರ್ ಅವರ 144ನೇ ಜಯಂತಿಯನ್ನು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದ ಬಳಿ ಆಚರಿಸಲಾಯಿತು.
ಶ್ರೀರಾಮ ಸೇನೆಯ ರಾಜ್ಯ ಕಾರ್ಯದರ್ಶಿ ಸಂಜಯ್ ಮಾತನಾಡಿ, ವೀರ ಸಾವರ್ಕರ್ ಅವರು 2 ಬಾರಿ ಅನುಭವಿಸಿದ ಕರಿನೀರ ಶಿಕ್ಷೆಯನ್ನು ಇಂದಿನ ಯುವ ಪೀಳಿಗೆ ನೆನೆಯಬೇಕಿದೆ. ಹಾಗೆ ಸ್ವಾತಂತ್ರ್ಯ ಹೋರಾಟಕ್ಕೆ ಕ್ರಾಂತಿಕಾರಿಗಳ ಕೊಡುಗೆ ಮರೆಯಬಾರದು ಎಂದು ತಿಳಿಸಿದರು.
ಯುವ ಮುಖಂಡ ಮಧು ಸೋಮಶೇಖರ್ ಮಾತನಾಡಿ, ಇಂದಿನ ಯುವಕರು ಹೆಚ್ಚು ಸ್ವಾತಂತ್ರ್ಯಕ್ಕೆ ಹೋರಾಡಿದವರ ಬಗ್ಗೆ ತಿಳಿಯಬೇಕು. ಅವರ ಪುಸ್ತಕಗಳನ್ನು ಖರೀದಿಸಿ ಓದಬೇಕು. ಚಿಕ್ಕ ವಯಸ್ಸಿನಲ್ಲೆ ದೇಶಾಭಿಮಾನ ಹೆಚ್ಚಿಸುವ ಕೆಲಸ ಶಾಲೆಗಳಲ್ಲಿ ಆಗಬೇಕಿದೆ. ಇದಕ್ಕೆ ನಮಗೆ ಇಸ್ರೇಲ್ ದೇಶ ಮಾದರಿಯಾಗಿ ತೆಗೆದುಕೊಳ್ಳಬೇಕು. ಹಾಗೆ ಸ್ವಾತಂತ್ರ್ಯಕ್ಕೆ ಹೋರಾಡಿದ ಯಾವುದೆ ವ್ಯಕ್ತಿ ಇರಲಿ ಅವರ ಬಗ್ಗೆ ಗೌರವ ಇಟ್ಟುಕೊಳ್ಳಬೇಕಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವೀರ ಸಾವರ್ಕರ್ ಯುವ ಬಳಗದ ಸಂದೇಶ್ ಪವಾರ್, ಮಹೇಶ್ ರಾಜೇ ಅರಸ್, ವಿಕ್ರಂ ಅಯ್ಯಂಗಾರ್, ಮನೋಜ್, ಪ್ರಮೋದ್ ಗೌಡ, ಅಭಿಷೇಕ್ ಗೌಡ, ರವಿ, ಕಾರ್ತಿಕ್, ಸಿದ್ದೇಗೌಡ, ಚಂದನ್ ಗೌಡ, ರಂಗರಾಜು ಬಳಗದ ಮತ್ತಿತ್ತರು ಭಾಗವಹಿಸಿದ್ದರು.