ಕ್ಷುಲ್ಲಕ ಕಾರಣಕ್ಕಾಗಿ ಹೊಡೆದಾಟ: ಎಂಟು ಮಂದಿಯ ಬಂಧನ
ಉಡುಪಿ: ಕ್ಷುಲ್ಲಕ ಕಾರಣಕ್ಕಾಗಿ ಪರಸ್ಪರ ಹೊಡೆದಾಡಿಕೊಳ್ಳುತ್ತಿದ್ದ ಎಂಟು ಮಂದಿ ಛತ್ತೀಸಘಡ ಮೂಲದ ಕಾರ್ಮಿಕರನ್ನು ಉಡುಪಿ ನಗರ ಪೊಲೀಸರು ಬಂಧಿಸಿರುವ ಘಟನೆ ಪುತ್ತೂರು ಗ್ರಾಮದ ನಯಂಪಳ್ಳಿಯ ಸುವರ್ಣ ನದಿಯ ಬ್ರಿಡ್ಜ್ ಬಳಿಯ ಎಜಿಪಿ ಲೇಬರ್ ಕಾಲೋನಿ ಬಳಿ ಇಂದು ಬೆಳಗಿನ ಜಾವ ನಡೆದಿದೆ.
ಬಂಧಿತರನ್ನು ಛತ್ತೀಸಘಡ ರಾಜ್ಯದ ಮೂಖ್ರಾಮ್, ಸುಭಾಷ್ ಕುಮಾರ್, ಆಶೀಮ್, ವಿಕಾಸ್, ಸ್ಯಾಂಟ್ ಲಾಲ್, ವಿಶಾಲ್, ಮಗೇಶ್, ಅಖಿಲೇಶ್ ಎಂದು ಗುರುತಿಸಲಾಗಿದೆ. ಇವರೆಲ್ಲ ಪೈಪ್‌ಲೈನ್ ಕೆಲಸಕ್ಕಾಗಿ ಉಡುಪಿ ಬಂದಿದ್ದು, ತಮ್ಮ ಶೆಡ್ ಸಮೀಪ ಕ್ಷುಲ್ಲಕ ಕಾರಣಕ್ಕಾಗಿ ಪರಸ್ಪರ ಹೊಡೆದಾಡಿಕೊಳ್ಳುತ್ತಿದ್ದರು.
ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ಭಯದ ಮತ್ತು ಪ್ರಕ್ಷುಬ್ದ ವಾತಾವರಣ ಉಂಟುಮಾಡಿ, ಶಾಂತಿ ಭಂಗವುಂಟು ಮಾಡಿರುವುದಾಗಿ ಆರೋಪಿಸಿ ಉಡುಪಿ ನಗರ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ. ಇದರಿಂದ ಕೆಲವು ಕಾರ್ಮಿಕರಿಗೆ ಗಾಯಗಳಾಗಿರುವುದಾಗಿ ತಿಳಿದುಬಂದಿದೆ