ನೇಮಕಾತಿ ಹಗರಣದಿಂದ ಹಾಲು ಉತ್ಪಾದಕರ ಮಾನ ಹರಾಜು-ಸದಸ್ಯರ ಆರೋಪ
ಕೋಲಾರ.ಸೆ.೨೪-ಕೋಚಿಮುಲ್‌ನಲ್ಲಿ ನಡೆದಿದೆ ಎನ್ನಲಾದ ನೇಮಕಾತಿ ಹಗರಣದಿಂದ ಹಾಲು ಉತ್ಪಾದಕರನ್ನು ಬೀದಿಯಲ್ಲಿ ತಂದು ಹರಾಜು ಹಾಕಿದ್ದೀರಿ, ಇದು ಆಡಳಿತ ಮಂಡಳಿಗೆ ಶೋಭೆ ತರುವುದಿಲ್ಲ, ಕೂಡಲೇ ಕೋಚಿಮುಲ್‌ಗೆ ಚುನಾವಣೆ ನಡೆಸಬೇಕು ಎಂದು ಸಾಮಾನ್ಯ ಸಭೆಯಲ್ಲಿ ಸರ್ವ ಸದಸ್ಯರು ಒತ್ತಾಯ ಮಾಡಿದರು.
ನಗರದ ಹೊರವಲಯದ ನಾರಾಯಣಿ ಕಲ್ಯಾಣ ಮಂಟಪದಲ್ಲಿ ಕೋಚಿಮುಲ್ ಒಕ್ಕೂಟದ ಅಧ್ಯಕ್ಷ ಕೆ.ವೈ.ನಂಜೇಗೌಡ ಅಧ್ಯಕ್ಷತೆಯಲ್ಲಿ ನಡೆದ ೨೦೨೩-೨೪ ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಸದಸ್ಯರು ಕೋಚಿಮುಲ್ ಲೋಪಗಳ ವಿರುದ್ದ ಧ್ವನಿ ಎತ್ತಿದರು.
ನುಕ್ಕನಹಳ್ಳಿ ಡೇರಿ ಪ್ರತಿನಿಧಿ ಎನ್.ಎನ್.ಶ್ರೀರಾಮ್ ಮಾತನಾಡಿ, ನಂದಿನಿ ಮಳಿಗೆಗಳಿಗೆ ಹಾಲಿನ ಉತ್ಪನ್ನಗಳನ್ನು ನೀಡಿದ್ದು, ಸುಮಾರು ೩.೩೭ ಕೋಟಿ ಹಣ ಬಾಕಿ ಇದ್ದು, ವಸೂಲಿ ಮಾಡಲು ಆಡಳಿತ ಮಂಡಳಿಯ ನಿರ್ಲಕ್ಷ್ಯ ತೋರಿದ್ದು ಅಲ್ಲದೇ ಕೋಚಿಮುಲ್‌ನಲ್ಲಿ ಕೆಲಸಕ್ಕಾಗಿ ನೇಮಕಾತಿಗೆ ಸಂಬಂಧಿಸಿದಂತೆ ಒಕ್ಕೂಟವನ್ನು ಬೀದಿಯಲ್ಲಿ ಹರಾಜು ಹಾಕಲಾಗಿದೆ ಎಂದು ಪ್ರಶ್ನಿಸಿದರು.
ಇದಕ್ಕೆ ಸಭೆಯ ಅಧ್ಯಕ್ಷ ಕೆ.ವೈ.ನಂಜೇಗೌಡ ಮಾತನಾಡಿ, ನಂದಿನಿ ಉತ್ಪನ್ನಗಳ ಬಾಕಿ ಹಣವನ್ನು ಕೂಡಲೇ ಅಧಿಕಾರಿಗಳು ವಸೂಲಿ ಮಾಡಬೇಕು, ಕೋಚಿಮುಲ್ ನೇಮಕಾತಿ ವಿಚಾರವು ಈಗಾಗಲೇ ಕೋರ್ಟ್‌ನಲ್ಲಿ ಇದ್ದು ಅದರ ನೋವು ನಾನು ಅನುಭವಿಸುತ್ತಿದ್ದೇನೆ, ಅದರ ಕಷ್ಟ ನನಗೆ ಗೊತ್ತು ಈ ವಿಚಾರವನ್ನು ಚರ್ಚೆ ಮಾಡುವುದು ಬೇಡ ಎಂದು ವಿನಂತಿಸಿದರು.
ಸಭೆಯಲ್ಲಿ ಕೋಚಿಮುಲ್ ನಿರ್ದೇಶಕರಾದ ಜಯಸಿಂಹ ಕೃಷ್ಣಪ್ಪ, ಕೆ.ಎನ್.ನಾಗರಾಜ್, ವಿ.ಮಂಜುನಾಥರೆಡ್ಡಿ, ಜೆ.ಕಾಂತರಾಜು, ವೈ.ಬಿ.ಅಶ್ವತ್ಥನಾರಾಯಣಬಾಬು, ಡಿ.ವಿ.ಹರೀಶ್, ಎನ್.ಹನುಮೇಶ್, ಎನ್.ಸಿ.ವೆಂಕಟೇಶ್, ಆರ್.ಶ್ರೀನಿವಾಸ್, ಆದಿನಾರಾಯಣರೆಡ್ಡಿ, ಸುನಂದಮ್ಮ, ಕಾಂತಮ್ಮ, ಷಂಷೀರ್, ವ್ಯವಸ್ಥಾಪಕ ನಿರ್ದೇಶಕ ಕೆ.ಎನ್.ಗೋಪಾಲಮೂರ್ತಿ, ಪಶುಪಾಲನಾ ಪಶುವೈದ್ಯ ಸೇವಾ ಇಲಾಖೆಯ ಡಾ.ಜಿ.ಟಿ.ರಾಮಯ್ಯ, ಮಾರುಕಟ್ಟೆ ವಿಭಾಗದ ಡಾ.ಶ್ರೀನಿವಾಸಗೌಡ ಅಡ್ಮೀನ್ ನಾಗೇಶ್ ಇದ್ದರು.