ಪೆರ್ನಾಜೆಯಲ್ಲಿ ಮತ್ತೆ ಆನೆ ಕಾಟ
ಪುತ್ತೂರು : ಪುತ್ತೂರು ತಾಲೂಕಿನ ಪೆರ್ನಾಜೆ ವ್ಯಾಪ್ತಿಗೆ ಭಾನುವಾರ ರಾತ್ರಿ ಕಾಡಾನೆ ಲಗ್ಗೆ ಇಟ್ಟು ಕೃಷಿ ಹಾನಿ ಮಾಡಿದೆ. ಕಳೆದ ಜನವರಿ ತಿಂಗಳಲ್ಲಿ ಕಾಡಾನೆಯೊಂದು ಎರಡು ಬಾರಿ ಪೆರ್ನಾಜೆ ಪರಿಸರಕ್ಕೆ ಲಗ್ಗೆಯಿಟ್ಟು ಕೃಷಿ ಮಾನಿ ಮಾಡಿತ್ತು.
ಭಾನುವಾರ ರಾತ್ರಿಯ ವೇಳೆ ಪೆರ್ನಾಜೆಯ ರಾಘವೇಂದ್ರ ಭಟ್ ಅವರ ತೋಟಕ್ಕೆ ನುಗ್ಗಿರುವ ಕಾಡಾನೆ ೧೦ಕ್ಕೂ ಅಧಿಕ ಬಾಳೆಗಿಡಗಳನ್ನು ನಾಶ ಮಾಡಿದೆ. ಪ್ರಗತಿಪರ ಕೃಷಿಕ ಕುಮಾರ್ ಪೆರ್ನಾಜೆ ಅವರ ತೋಟಕ್ಕೆ ಬಂದಿದ್ದ ಕಾಡಾನೆ ತೋಟದ ಮಧ್ಯೆ ಇರುವ ಕೆರೆಗೆ ಇಳಿದು ಈಜಾಡಿ ಕೆರೆಯ ಬದಿಯಲ್ಲಿ ಹಾಗೂ ಅಡಿಕೆ ತೋಟದಲ್ಲಿ ಲದ್ದಿ ಹಾಕಿ ತೆರಳಿದೆ.
ಪೆರ್ನಾಜೆ ಪರಿಸರಕ್ಕೆ ಕಾಡಾನೆ ಬಂದಿರುವ ಕುರಿತು ಕೃಷಿಕ ಕುಮಾರ್ ಪೆರ್ನಾಜೆ ಅವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸೋಮವಾರ ಅರಣ್ಯ ಇಲಾಖೆಯ ಅರಣ್ಯ ರಕ್ಷಕ ದೀಕ್ಷಿತ್ ಮತ್ತು ಸಹಾಯಕರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.
ಕೋಟ್…
ಕಳೆದ ಜನವರಿಯಲ್ಲಿ ಎರಡು ಬಾರಿ ಪೆರ್ನಾಜೆ ವ್ಯಾಪ್ತಿಗೆ ಕಾಡಾನೆ ಬಂದು ಕೃಷಿ ಹಾನಿ ಮಾಡಿತ್ತು. ಇದೀಗ ಸೋಮವಾರ ನಸುಕಿನ ವೇಳೆ ಕಾಡಾನೆ ನಮ್ಮ ತೋಟಕ್ಕೆ ಬಂದಿದೆ. ಕೆರೆಗೆ ಇಳಿದು ನೀರಿನಲ್ಲಿ ಈಜಾಡಿದೆ. ಕರೆಯಲ್ಲಿ, ಕೆರೆಯ ಬದಿಯಲ್ಲಿ ಹಾಗೂ ತೋಟದಲ್ಲಿ ಕಾಡಾನೆ ಲದ್ದಿ ಹಾಕಿದೆ.  ಬೆಳಗಾದ ಹಿನ್ನಲೆಯಲ್ಲಿ ತೋಟದಲ್ಲಿ ಯಾವುದೇ ಕೃಷಿ ಹಾನಿ ಮಾಡದೆ ನೂಜಿಬೈಲು ಕಡೆಗೆ ಹೋಗಿದೆ. -ಕುಮಾರ್ ಪೆರ್ನಾಜೆ. ಪ್ರಗತಿಪರ ಕೃಷಿಕ.