ಸಂಚಾರಿ ನಿಯಮಗಳ ಜಾಗೃತಿ ಅಭಿಯಾನ
ಕಲಬುರಗಿ,ಮೇ.28-ಸಂಚಾರಿ ಪೊಲೀಸ್ ಠಾಣೆ-1ರ ವತಿಯಿಂದ ನಗರದಲ್ಲಿ ಇಂದು ಸಂಚಾರ ನಿಯಮಗಳ ಜಾಗೃತ ಅಭಿಯಾನ ನಡೆಸಲಾಯಿತು.
ಪಿಎಸ್‍ಐ ದಶರಥ, ಎಎಸ್‍ಐ ಸಿಕಂದರ್ ಖಾನ್, ನವೀನ್ ಅವರು ನಗರದ ಪ್ರಮುಖ ರಸ್ತೆಗಳಲ್ಲಿ ಇಂದು ವಾಹನ ಸವಾರರಿಗೆ ಕರಪತ್ರಗಳನ್ನು ವಿತರಿಸಿ ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸಿದರು.
ಒಂಬತ್ತು ತಿಂಗಳು ಮೇಲ್ಪಟ್ಟ ಮಕ್ಕಳಿಗೆ ದ್ವಿಚಕ್ರ ವಾಹನದಲ್ಲಿ ಕರೆದುಕೊಂಡು ಹೋಗುವಾಗ ಸೇಫ್ಟಿ ಹಾರನೆಸ್ ಬೆಲ್ಟ್ ಮತ್ತು ಹೆಲ್ಮೆಟ್ ಕಡ್ಡಾಯವಾಗಿ ಧರಿಸಬೇಕು, ಮದ್ಯಪಾನ ಮಾಡಿ ವಾಹನ ಚಲಾಯಿಸಬಾರದು, ಅತಿ ವೇಗದ ಚಾಲನೆ ಅಪಘಾತಕ್ಕೆ ಕಾರಣವಾಗಲಿದ್ದು, ವೇಗವಾಗಿ ವಾಹನ ಚಲಾಯಿಸಬಾರದು, ಸಂಚಾರ ಸರ್ಕಲ್‍ಗಳಲ್ಲಿ ಸುರಕ್ಷಿತ ಚಾಲನೆಗಾಗಿ ಸಿಗ್ನಲ್‍ಗಳನ್ನು ಕಡ್ಡಾಯವಾಗಿ ಪಾಲಿಸಬೇಕು, ತ್ರಿಬಲ್ ರೈಡಿಂಗ್ ಮಾಡಬಾರದು, ಪ್ರಯಾಣಿಕರ ವಾಹನದಲ್ಲಿ ಹೆಚ್ಚಿನ ಪ್ರಯಾಣಿಕರನ್ನು ಸಾಗಿಸಬಾರದು, ಮೊಬೈಲ್‍ನಲ್ಲಿ ಮಾತನಾಡುತ್ತ ವಾಹನವನ್ನು ಚಲಾಯಿಸಬಾರದು, ಆಸ್ಪತ್ರೆ ಹಾಗೂ ಶಾಲಾ ವಲಯಗಳಲ್ಲಿ ಸುರಕ್ಷತೆ ನಿಟ್ಟಿನಲ್ಲಿ ಕಡಿಮೆ ವೇಗದಲ್ಲಿ ವಾಹನ ಚಲಾಯಿಸಬೇಕು, ಪಾಲಕರು/ವಾಹನ ಮಾಲಿಕರು 18 ವರ್ಷದೊಳಗಿನ ಮಕ್ಕಳಿಗೆ ವಾಹನ ಚಲಾಯಿಸಲು ನೀಡುವುದು ಶಿಕ್ಷಾರ್ಹ ಅಪರಾಧವಾಗಿದ್ದು, 18 ವರ್ಷದೊಳಗಿನ ಮಕ್ಕಳಿಗೆ ವಾಹನ ಚಲಾಯಿಸಲು ನೀಡಬಾರದು, ವಾಹನಗಳಿಗೆ ಕಡ್ಡಾಯವಾಗಿ ವಾಹನ ನೋಂದಣಿ ಪ್ರಮಾಣ ಪತ್ರ (ಆರ್.ಸಿ), ವಿಮಾ ಪತ್ರ (ಇನ್ಸೂರೆನ್ಸ್) ಮಾಡಿಸಬೇಕು, ನಗರದಲ್ಲಿ ಎಲ್ಲೆಂದರಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡದೆ ನಿಗದಿತ ಸ್ಥಳದಲ್ಲಿ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗದಂತೆ ಪಾರ್ಕಿಂಗ್ ಮಾಡಬೇಕು, ತುರ್ತು ವಾಹನಗಳಾದ ಅಗ್ನಿಶಾಮಕ ಮತ್ತು ಅಂಬ್ಯೂಲೆನ್ಸ್‍ಗೆ ದಾರಿ ಮಾಡಿಕೊಟ್ಟು ಜೀವ ಉಳಿಸಲು ಸಹಕರಿಸಬೇಕು, ವಾಹನಗಳನ್ನು ಚಲಾಯಿಸುವ ಮುಂಚೆ ಕಡ್ಡಾಯವಾಗಿ ಸೀಟ್‍ಬೆಲ್ಟ್ ಧರಿಸಬೇಕು-ಈ ಸಂಚಾರ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸಬೇಕು ಎಂದು ವಾಹನ ಸವಾರರಿಗೆ ತಿಳಿಸಿದರು.