ಮಹಿಳಾ ಸಹೋದ್ಯೋಗಿಯೊಂದಿಗೆ ಅಸಭ್ಯ ವರ್ತನೆ ತೋರಿದ ಪಿಡಿಓಗೆ ಗ್ರಾಮಸ್ಥರಿಂದ ಧರ್ಮದೇಟು
ಬಸವಕಲ್ಯಾಣ:ಮೇ.28: ಸಹೋದ್ಯೋಗಿ ಮಹಿಳೆಯೊಂದಿಗೆ ಅಸಭ್ಯ ವರ್ತನೆ ತೋರಿದ ಗ್ರಾಪಂ ಪಿಡಿಓ ಹಾಗೂ ಕರ ವಸೂಲಿಗಾರನಿಗೆ ಗ್ರಾಮಸ್ಥರು ಧರ್ಮದೇಟು ನೀಡಿದ ಘಟನೆ ತಾಲೂಕಿನ ಹಾರಕೂಡ ಗ್ರಾಮದಲ್ಲಿ ಸೋಮವಾರ ಮಧ್ಯಾಹ್ನ ಜರುಗಿದೆ.
ಗ್ರಾಮ ಪಂಚಾಯತ್
ಪಿಡಿಓ ಯೋಗೇಶ ಹಿರೇಮಠ ಹಾಗೂ ಕರವಸೂಲಿಗಾರ ಮಿಥುನ ರಾಠೋಡ ಗ್ರಾಮಸ್ಥರಿಂದ ಧರ್ಮದೇಟು ತಿಂದ ಅಧಿಕಾರಿ ಹಾಗೂ ಸಿಬ್ಬಂದಿಗಳಾಗಿದ್ದಾರೆ.
ಗ್ರಾಪಂನಲ್ಲಿ ಕೆಲಸ ಮಾಡುವ ಮಹಿಳಾ ಸಹೋದ್ಯೋಗಿಯೊಂದಿಗೆ ಪಿಡಿಓ ಅಸಭ್ಯ ವರ್ತನೆಯೊಂದಿಗೆ ದುರ್ನಡತೆ ತೋರಿದ್ದಾನೆ ಎನ್ನುವ ಆರೋಪದ ಹಿನ್ನೆಲೆಯಲ್ಲಿ ಇಂದು ಹಾರಕೂಡ ಗ್ರಾಮ ಪಂಚಾಯತ್ ಕಚೇರಿಗೆ ತೆರಳಿದ ಕೆಲ ಯುವಕರು ಈ ಕುರಿತು ಪಿಡಿಓ ಅವರನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದ ಪರಿಣಾಮ ಕೆಲ ಯುವಕರು ಪಿಡಿಓ ಹಾಗೂ ಕರ ವಸೂಲಿಗಾರನಿಗೆ ಧರ್ಮದೆಟು ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಮುಡಬಿ ಠಾಣೆ ಪೆÇಲೀಸರ ತಂಡ ಜಗಳ ಶಾಂತಪಡಿಸಿ, ಎರಡು ಕಡೆಯವರನ್ನು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.
ಘಟನೆ ಬಗ್ಗೆ ಮಾಹಿತಿ ಪಡೆದ ತಾಪಂ ಎಡಿ ಸಂತೋಷ ಚವ್ಹಾಣ್ ನೇತೃತ್ವದ ಅಧಿಕಾರಿಗಳು ಗ್ರಾಮಕ್ಕೆ ಭೇಟಿನೀಡಿ ಘಟನೆ ಕುರಿತು ತನಿಖೆ ಮುಂದುವರೆಸಿದ್ದಾರೆ.