ಪುಣ್ಯದ ಠೇವಣಿ ಆಪತ್ಕಾಲದ ಆಸರೆ: ಹಾರಕೂಡ ಶ್ರೀ
ಬೀದರ್: ಮೇ.28:ನಾವು ಮಾಡಿದ ಸತ್ಕಾರ್ಯಗಳ ಠೇವಣಿ ಆಪತ್ ಕಾಲದಲ್ಲಿ ಆಸರೆಯಾಗಿ ನಿಲ್ಲುತ್ತದೆ.
ಒಳಿತು ಮಾಡುವ ಮನದಲ್ಲಿ ಮಹದೇವನ ಆವಾಸವಿರುತ್ತದೆ ಎಂದು ಹಾರಕೂಡದ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರು ನುಡಿದರು.
ಬಸವಕಲ್ಯಾಣ ತಾಲೂಕಿನ ನಿರುಗುಡಿ ಗ್ರಾಮದಲ್ಲಿ ವಿಶ್ವಗುರು ಬಸವಣ್ಣನವರ ಪುತ್ಥಳಿ ಅನಾವರಣ ಸಮಾರಂಭ ಉದ್ಘಾಟಿಸಿ ಮಾತನಾಡಿದ ಹಾರಕೂಡ ಶ್ರೀಗಳು ಬಸವೇಶ್ವರ ಅನ್ನೋದು ಹೆಸರಲ್ಲ, ಅದು ಮಹಾಮಂತ್ರ,
ಹೆಸರು ಮಹಾಮಂತ್ರವಾದಾಗ ಮಾನವ ಮಹಾತ್ಮನಾಗುತ್ತಾನೆ, ಸಕಲ ಜೀವ ರಾಶಿಗಳಿಗೆ ಲೇಸನ್ನೇ ಬಯಸಿದ ಬಸವಣ್ಣನವರು ಜಗತ್ತಿನ ಶ್ರೇಷ್ಠ ದಾರ್ಶನಿಕರು.
ಧರ್ಮಗಳು, ಧರ್ಮಾಚರಣೆಗಳು ಬೇರೆ ಬೇರೆಯಾಗಿದ್ದರೂ ಮೂಲ ಉದ್ದೇಶ ಲೋಕಕಲ್ಯಾಣವೇ ಆಗಿದೆ.
ಬಸವಣ್ಣನವರು ನೀಡಿದ ಇಷ್ಟ ಲಿಂಗ ಜಾತಿಯ ಸಂಕೇತವಲ್ಲ ಅದು ಜ್ಯೋತಿಯ ಕುರುಹು.
ಹಾಗಾಗಿ ಯಾವುದೇ ತಾರತಮ್ಯವಿಲ್ಲದೆ ಬಸವ ಪ್ರಭೇಯಲ್ಲಿ ಎಲ್ಲರೂ ಸೌಹಾರ್ದತೆಯಿಂದ ಬದುಕುವುದೇ ನಿಜವಾದ ಶರಣತ್ವವಾಗಿದೆ.
ಇಂದಿನ ಯುವಕರು ದುಶ್ಚಟಗಳಿಗೆ ಬಲಿಯಾಗದೆ ಬಸವ ಚಿಂತನೆಯಲ್ಲಿ ಮನಸ್ಸನ್ನು ಅಣಿಗೊಳಿಸಿದ್ದೆ ಆದರೆ ಸದೃಢ ಸಮ ಸಮಾಜ ನಿರ್ಮಾಣವಾಗುವಲ್ಲಿ ಸಂದೇಹವಿಲ್ಲ.
ಬಸವ ತತ್ವ, ವಚನ ದೀಪ್ತಿ ಸದಾ ಸಮಾಜವನ್ನು ಮುನ್ನಡೆಸಲಿ ನಿರುಗುಡಿಯ ಜನತೆ ಸಿರಿಸೌಖ್ಯದಿಂದ ಬದುಕುವಂತಾಗಲಿ ಎಂದು ಶುಭ ಹಾರೈಸಿದರು.
ಹುಮನಾಬಾದ ಶಾಸಕ ಶ್ರೀ ಸಿದ್ದಲಿಂಗ ಪಾಟೀಲ ಹಾಗೂ ಹರಿಶಚಂದ್ರ ಪಾಟೀಲ ಮಾತನಾಡಿದರು.
ಶಿವಕುಮಾರ ಪಾಟೀಲ ಮಂಗಳೂರ ಕಾರ್ಯಕ್ರಮವನ್ನು ನಿರೂಪಿಸಿದರು.
ಕಾರ್ತಿಕ ಸ್ವಾಮಿ ಯಲದಗುಂಡಿ ಪ್ರಾರ್ಥನಾ ಗೀತೆ ನಡೆಸಿಕೊಟ್ಟರು.
ಮಲ್ಲಿನಾಥ ಹಿರೇಮಠ ಹಾರಕೂಡ, ಉಮೇಶ ಮೂಲಗೆ, ಗುರುನಾಥ ಮೂಲಗೆ, ರಾಮ ಮಜಗೆ,
ಗಿರೀಶ ತುಂಬಾ ಉಪಸ್ಥಿತರಿದ್ದರು.